
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶನಿವಾರ ರಾತ್ರಿ ಇಡಿ ಅಬ್ಬರಿಸಿದ ವರುಣ ಭಾನುವಾರ ಹಗಲಿನಲ್ಲಿ ಕೊಂಚ ವಿರಾಮ ನೀಡಿದ. ಆದರೆ, ಬಿರುಗಾಳಿ ಸಂಪೂರ್ಣ ತಗ್ಗದೇ ಆಗ್ಗಾಗ್ಗೆ ಬಿರುಸಾಗಿ ಬೀಸಿ, ಜನರ ಆತಂಕವನ್ನು ಮುಂದುವರಿಯುವಂತೆ ಮಾಡಿತು.
ನದಿ, ತೊರೆಗಳೆಲ್ಲವೂ ಅಪಾಯದಂಚಿಗೆ ತಲುಪಿದ್ದು, ನದಿ ತೀರದ ನಿವಾಸಿಗಳಲ್ಲಿ ತಲ್ಲಣ ಮೂಡಿದೆ. ಮತ್ತೂ ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಜುಲೈ 28ರಂದು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಿದೆ.
ಬೀಸುತ್ತಿರುವ ಗಾಳಿ ಹಲವು ಮರಗಳನ್ನು ಬುಡಮೇಲು ಮಾಡಿದೆ. ಅಂಗನವಾಡಿ, ಶಾಲೆಗಳು, ಗ್ರಾಮ ಪಂಚಾಯಿತಿ ಕಟ್ಟಡಗಳು, ಹತ್ತಾರು ಮನೆಗಳ ಮೇಲೆ ಮರಗಳು ಉರುಳಿ ಅಪಾರ ಹಾನಿಯನ್ನುಂಟು ಮಾಡಿವೆ. ಮಳೆಯ ತೀವ್ರತೆಗೆ ಅನೇಕ ಮನೆಗಳು ಕುಸಿದಿವೆ.
ಮಡಿಕೇರಿಯಲ್ಲಿ ಸಂಜೆಯ ವೇಳೆ ಆವರಿಸಿದ ದಟ್ಟ ಮಂಜು ವಾಹನ ಸವಾರರಿಗೆ ತೊಂದರೆಯಾಗಿ ಪರಿಣಮಿಸಿತು. ತೀರಾ ಹತ್ತಿರದ ದೃಶ್ಯಗಳೂ ಕಾಣದಷ್ಟು ದಟ್ಟವಾಗಿ ಮಂಜು ಆವರಿಸಿತ್ತು. ಕತ್ತಲಾಗುತ್ತಿದ್ದಂತೆ ಮತ್ತೆ ಮಳೆ ಶುರುವಾಯಿತು.
ಬೀಸುತ್ತಿರುವ ಶೀತಗಾಳಿ ಜನರನ್ನು ಅಕ್ಷರಶಃ ನಡುಗಿಸಿದೆ. ಅತಿ ಶೀತಮಯ ವಾತಾವರಣ ನಗರದಲ್ಲಿದ್ದು, ಜನರು ಹೊರಬರಲೂ ಆಗದೆ ಪರಿತಪಿಸುವಂತಾಗಿದೆ. ಬಿಟ್ಟೂ ಬಿಡದೇ ಬೀಳುತ್ತಿರುವ ಮಳೆ, ಆಗಾಗ್ಗೆ ಬಿರುಸಿನಿಂದ ಬೀಸುತ್ತಿರುವ ಬಿರುಗಾಳಿ ಜನರನ್ನು ಮತ್ತಷ್ಟು ಆತಂಕದತ್ತ ದೂಡಿದೆ.
ದಿನವಿಡೀ ವಿದ್ಯುತ್ ವ್ಯತ್ಯಯ ಉಂಟಾಯಿತು. ಸೆಸ್ಕ್ ಸಿಬ್ಬಂದಿ ಜೀವದ ಹಂಗನ್ನು ತೊರೆದು ಹಗಲು, ರಾತ್ರಿ, ಮಳೆ, ಗಾಳಿ, ಶೀತ ಎನ್ನದೇ ದುರಸ್ತಿ ಕಾರ್ಯದಲ್ಲಿ ಮಗ್ನರಾಗಿದ್ದರು. ಆದರೂ, ನಗರದ ಕೆಲವು ಬಡಾವಣೆಗಳು ಹಾಗೂ ಜಿಲ್ಲೆಯ ಹಲವು ಗ್ರಾಮಗಳು ಇನ್ನೂ ಕತ್ತಲೆಯಲ್ಲೇ ಮುಳುಗಿವೆ.
ಅಮ್ಮತ್ತಿ ಸಮೀಪದ ಪುಲಿಯೇರಿ ಗ್ರಾಮದ ಶ್ರೀಜಾ ಅವರ ಮನೆ ಮೇಲೆ ಹಾಗೂ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿದೆ. ಸೋಮವಾರಪೇಟೆ ಹೋಬಳಿ ಹರದೂರು ಗ್ರಾಮ ಪಂಚಾಯಿತಿ ಕಟ್ಟಡದ ಮೇಲೆ ಹಾಗೂ ಪಕ್ಕದಲ್ಲಿ ಅಂಗನವಾಡಿ ಕೇಂದ್ರದ ಶೌಚಾಲಯದ ಮೇಲೆ, ಸುಂಟಿಕೊಪ್ಪ ಹೋಬಳಿಯ ಉಳುಗುಲಿ ಗ್ರಾಮದ ಎನ್.ಆರ್.ನಂಜಪ್ಪ ಅವರ ಮನೆ ಮೇಲೆ, 7ನೇ ಹೊಸಕೋಟೆ ಗ್ರಾಮದ ಕಮಲ ಅವರ ಮನೆ ಮೇಲೆ, ರಾಜಾಜಿ ಅವರ ಕೊಟ್ಟಿಗೆಯ ಮೇಲೆ, ಸಂಪಾಜೆಯ ಎ.ಬಿ. ಬೋಜಪ್ಪ ಅವರ ವಾಸದ ಮನೆ ಮೇಲೆ, ನಂಜರಾಯಪಟ್ಟಣದ ತಮ್ಮಯ್ಯ ಅವರ ಮನೆಯ ಮೇಲೆ, ನೆಲ್ಲಿಹುದಿಕೇರಿ ಗ್ರಾಮದ ಸತ್ಯವತಿ ಅವರ ಮನೆಯ ಮೇಲೆ ಭಾರೀ ಗಾತ್ರದ ಮರ ಬಿದ್ದು ಹಾನಿಯಾಗಿದೆ.
ಶನಿವಾರಸಂತೆ ಹೋಬಳಿಯ ಮಾದೆಗೋಡು ಗ್ರಾಮದ ನಿವಾಸಿ ಎಂ.ಎನ್. ದಿವಾಕರ ಅವರ ಮನೆ, ಎಮ್ಮೆಮಾಡು ಗ್ರಾಮದ ಟಿ.ಎ.ಕರೀಂ ಅವರ ಮನೆಯ ಮುಂಭಾಗದ ಗೋಡೆ, ರಸೂಲ್‌ಪುರ ಗ್ರಾಮದ ಡಿಂಪಲ್ ಕಿರಣ್ ಅವರ ಕೊಟ್ಟಿಗೆ, ಕರ್ಣಂಗೇರಿ ಗ್ರಾಮದ ರಜಾಕ್ ಅವರ ಮನೆಯ ಒಂದು ಭಾಗದ ಗೋಡೆ, ಕುರ್ಚಿ ಗ್ರಾಮದ ಅಜ್ಜಮಾಡ ನಂದ ಅವರ ಮನೆ, ಕುಂಜಿಲ ಗ್ರಾಮದ ಉಮ್ಮರ್ ಅವರ ಮನೆಯ ಅಡುಗೆ ಮನೆಯ ಒಂದು ಭಾಗ, ಕುಟ್ಟ ಗ್ರಾಮದ ಸಿಂಕೋನ್ ಕಾಲೋನಿಯ ಮಣಿ ಅವರ ಮನೆ ಕುಸಿದಿದೆ.
ಪೇರೂರು ಗ್ರಾಮದ ಬೆಳ್ಯವ್ವ ಅವರ ವಾಸದ ಮನೆಯ ಶೀಟ್‌ಗಳು ಹಾರಿಹೋಗಿವೆ.
ಸೂರ್ಲಬ್ಬಿ ಗ್ರಾಮದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಭಾಂಗಣ ಶೀಟು ತೀವ್ರ ಗಾಳಿಗೆ ಹಾರಿಹೋಗಿ ಶಾಲೆಯ ಮೇಲೆ ಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.