ADVERTISEMENT

ಕುಶಾಲನಗರ: ಹನುಮ ಜಯಂತಿ ಆಚರಣೆ ಇಂದು

ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಸಜ್ಜು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 5:17 IST
Last Updated 2 ಡಿಸೆಂಬರ್ 2025, 5:17 IST
ಕುಶಾಲನಗರ ಸಮೀಪದ ಕೂಡಿಗೆಯಲ್ಲಿ ಹನುಮ ಜಯಂತಿ ಅಂಗವಾಗಿ ಸಿಂಗಾರಗೊಂಡ ವೃತ್ತ
ಕುಶಾಲನಗರ ಸಮೀಪದ ಕೂಡಿಗೆಯಲ್ಲಿ ಹನುಮ ಜಯಂತಿ ಅಂಗವಾಗಿ ಸಿಂಗಾರಗೊಂಡ ವೃತ್ತ   

ಕುಶಾಲನಗರ: ಪಟ್ಟಣದ ರಥಬೀದಿಯಲ್ಲಿರುವ ಆಂಜನೇಯ ದೇವಸ್ಥಾನದ ವಾರ್ಷಿಕೋತ್ಸವ ಅಂಗವಾಗಿ ದಶಮಂಟಪಗಳ ಆಶ್ರಯದಲ್ಲಿ ಮಂಗಳವಾರ (ಡಿ.2) ನಡೆಯುವ ವಿಜೃಂಭಣೆಯ ಹನುಮಜಯಂತಿಗೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಸಜ್ಜುಗೊಂಡಿವೆ.

ಪಟ್ಟಣದ ವಿವಿಧ ಬಡಾವಣೆಗಳಿಂದ ಹಾಗೂ ಗುಡ್ಡೆಹೊಸೂರು, ಮಾದಪಟ್ಟಣ, ಕೂಡಿಗೆ, ಹಾರಂಗಿ, ಮುಳ್ಳುಸೋಗೆ ಭಾಗಗಳಿಂದ ವಿವಿಧ ಉತ್ಸವ ಮಂಟಪಗಳ ಶೋಭಾಯಾತ್ರೆ ಹನುಮ ಜಯಂತಿಗೆ ಮೆರಗು ನೀಡಲಿವೆ. ಈಗಾಗಲೇ ಕೇಸರಿ ಬಣ್ಣದ ತಳಿರು ತೋರಣಗಳಿಂದ ಹಾಗೂ ಸ್ವಾಗತ ಕಮಾನುಗಳಿಂದ ಸಿಂಗಾರ ಮಾಡಲಾಗಿದೆ.

ಕಾರ್ಯಕ್ರಮದ ಕುರಿತು ಶಾಸಕ ಡಾ.ಮಂತರ್ ಗೌಡ ಮಾತನಾಡಿ, ‘ಪಟ್ಟಣದಲ್ಲಿ ಹನುಮ‌ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, 10 ಮಂಟಪಗಳು ಪ್ರದರ್ಶನ ನೀಡಲಿವೆ. ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರು, ಪ್ರೇಕ್ಷಕರು ಶಾಂತಿಯುತವಾಗಿ ಕಾರ್ಯಕ್ರಮ ಯಶಸ್ಸಿಗೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಕಳೆದ ಬಾರಿಗಿಂತ ಈ ಬಾರಿ ಮತ್ತಷ್ಟು ಅದ್ದೂರಿಯಾಗಿ ಕಾರ್ಯಕ್ರಮ‌ ಜರುಗಲಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಬೇಕಾಗಿದೆ. ಕಾರ್ಯಕ್ರಮ ಯಶಸ್ಸಿಗೆ ಈಗಾಗಲೇ ಹಲವು ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಗಿದೆ. ಅಹಿತಕರ ಘಟನೆ ಸಂಭವಿಸದಂತೆ ಕಟ್ಟುನಿಟ್ಟಿನ‌ ಕ್ರಮವಹಿಸಲು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

‘ನಿಗದಿತ ಅವಧಿಯಲ್ಲಿ ಆಯಾ ಮಂಟಪಗಳಿಗೆ ನೀಡಿದ‌ ಸಮಯದಲ್ಲಿ ಸರಿಯಾಗಿ ಪ್ರದರ್ಶನ ನೀಡಲು‌ ಸಮಿತಿಯವರು ಕ್ರಮ ವಹಿಸಬೇಕಿದೆ. ಹೆದ್ದಾರಿಯಲ್ಲಿ ವಾಹನ ದಟ್ಟಣೆ, ಅವ್ಯವಸ್ಥೆ ಉಂಟಾಗದಂತೆ ಸಮಿತಿಯವರು ಸೇರಿದಂತೆ ಸಾರ್ವಜನಿಕರು ಸಹಕಾರ ನೀಡಬೇಕಿದೆ. ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಹೋಟೆಲ್‌ಗಳು ತೆರೆಯಲು, ಹೆಚ್ಚಿನ ಸಂಖ್ಯೆಯಲ್ಲಿ ಫುಡ್ ಕೋರ್ಟ್ ತೆರೆಯಲು ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು.

ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ‘ಹನುಮ ಜಯಂತಿಯು ಪರಂಪರೆ, ವೈಭವ ನಿರಂತರವಾಗಿ ಮುಂದುವರಿಯಬೇಕಿದೆ. ಊರ ಹಬ್ಬವಾಗಿ ಸೌಹಾರ್ದ ಸಂಕೇತವಾಗಬೇಕು. ಹನುಮ ಜಯಂತಿ ಆಚರಣೆಗೆ ಈಗಾಗಲೇ ಶಾಸಕರು ಹಲವು ಪೂರ್ವಭಾವಿ ಸಭೆ ನಡೆಸಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ’ ಎಂದು ತಿಳಿಸಿದರು.

ದಶಮಂಟಪ ಸಮಿತಿ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಸಮಿತಿ ಪದಾಧಿಕಾರಿಗಳಾದ ದೇವರಾಜ್, ಗಿರೀಶ್, ನಾಗೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.