
ಕೋಲಾರ: ಸಂವಿಧಾನ ಶಿಲ್ಪಿ, ಮಹಾನ್ ಸಮಾಜ ಪರಿವರ್ತಕ, ಸಾಮಾಜಿಕ ನ್ಯಾಯದ ಹೋರಾಟಗಾರ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ (ಪರಿನಿಬ್ಬಾಣ) ದಿನವನ್ನು ಜಿಲ್ಲೆಯ ವಿವಿಧೆಡೆ ಶನಿವಾರ ಆಚರಿಸಲಾಯಿತು.
ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಅಂಬೇಡ್ಕರ್ ಪುತ್ಥಳಿ, ಪ್ರತಿಮೆ, ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಹಾರ ಹಾಕಿ, ಪುಷ್ಪಾರ್ಚನೆ ಮಾಡಿ ಅವರ ತತ್ವ ಸಿದ್ಧಾಂತ, ಚಿಂತನೆಗಳನ್ನು ಸ್ಮರಿಸಲಾಯಿತು.
ನಗರದ ಬಂಗಾರಪೇಟೆ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಶಾಸಕ ಕೊತ್ತೂರು ಜಿ.ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾಲಾರ್ಪಣೆ ಮಾಡಿದರು. ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ದಲಿತ ಮುಖಂಡರು ಪಾಲ್ಗೊಂಡಿದ್ದರು.
ನಗರದ ನಚಿಕೇತ ನಿಲಯದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೂ ಜನಪ್ರತಿನಿಧಿಗಳು, ಅಧಿಕಾರಿಗಳು, ಮುಖಂಡರು ಮಾಲಾರ್ಪಣೆ ಮಾಡಿದರು. ಪಂಡಿತ್ ಮುನಿವೆಂಕಟಪ್ಪ, ಟಿ.ವಿಜಯಕುಮಾರ್ ಸೇರಿದಂತೆ ಹಲವರು ಇದ್ದರು.
ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಅಂಬೇಡ್ಕರ್ ಅವರ 69ನೇ ಪರಿನಿರ್ವಾಣ ದಿನ ಕಾರ್ಯಕ್ರಮ ನಡೆಯಿತು.
ಅಂಬೇಡ್ಕರ್ ಸಮಾಜದ ಎಲ್ಲಾ ಶೋಷಿತರ ಆಶಾಕಿರಣ. ಅವರು ನೀಡಿರುವ ವಿಶ್ವಶ್ರೇಷ್ಠವಾದ ಸಂವಿಧಾನವು ಅಸಮಾನತೆ ತೊಡೆದು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ ಅಭಿಪ್ರಾಯಪಟ್ಟರು.
ಅಂಬೇಡ್ಕರ್ ಆದರ್ಶ ಪಾಲಿಸೋಣ, ಅವರ ಹಾದಿಯಲ್ಲಿ ಸಾಗುವ ಮೂಲಕ ಸಮಾಜದಲ್ಲಿನ ಅಸಮಾನತೆ ತೊಡೆದುಹಾಕಲು ಸಂಕಲ್ಪ ಮಾಡೋಣ ಎಂದರು.
ಎಸ್‌ಟಿ ಘಟಕದ ಜಿಲ್ಲಾಧ್ಯಕ್ಷ ಅಂಬರೀಷ್ ಮಾತನಾಡಿ, ‘ಸಂವಿಧಾನದ ಮಹತ್ವ ಪ್ರತಿಯೊಬ್ಬರ ಬದುಕಿನ ಪ್ರತಿ ಆಚರಣೆಯಲ್ಲೂ ಪ್ರತಿಫಲಿಸುವಂತಾದರೆ ದೇಶದ ಪ್ರಗತಿ ಸಾಧ್ಯ. ಜೀವಮಾನವಿಡೀ ದೇವರ ಅಸ್ತಿತ್ವವನ್ನೇ ನಂಬದ ಅಂಬೇಡ್ಕರ್ ಕೋಟ್ಯಂತರ ಜನರ ಬದುಕಿಗೆ ದೇವರಾಗಿರುವುದು ಅವರ ಬದುಕಿನ ಶ್ರೇಷ್ಠತೆಯ ಸಂಕೇತವಾಗಿದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸೀತಿಹೊಸೂರು ಮುರಳಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ, ಸೈಯದ್ ಅಪ್ಸರ್, ರಾಮಯ್ಯ, ಮುನಿವೆಂಕಟಪ್ಪ, ಮಂಜುಳಾ, ಲಾಲ್ ಬಹುದ್ದೂರು ಶಾಸ್ತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.