
ಬೇತಮಂಗಲ: ಗ್ರಾಮದ ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಆವರಣದಲ್ಲಿ ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ಕಾನೂನು ಅರಿವು ಮತ್ತು ಪೋಕ್ಸೊ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು.
ಕೆಜಿಎಫ್ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಪೊಲೀಸ್ ಇಲಾಖೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಸರ್ಕಾರಿ ಪ್ರೌಢಶಾಲೆ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಿತು.
ಕೆಜಿಎಫ್ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮುಜಾಫರ್ ಎ. ಮಂಜರಿ ಮಾತನಾಡಿ, ‘ಸಮಾಜದಲ್ಲಿ ಪ್ರತಿಯೊಂದು ಹೆಣ್ಣು ಮಗು ಶೈಕ್ಷಣಿಕ ಅಭಿವೃದ್ಧಿ ಹೊಂದಬೇಕು. ಹೀಗಾದಲ್ಲಿ, ಹೆಣ್ಣು ಮಕ್ಕಳು ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿದೆ’ ಎಂದರು.
ಗ್ರಾಮೀಣ ಭಾಗದ ಜನರು ತಮ್ಮ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು. ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದು ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸಿದಾಗ ಮಾತ್ರ ಸಮಾಜದಲ್ಲಿ ಅವರಿಗೆ ಗೌರವ ಸಿಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶೆಮಿದಾ, ಕೌಶಿಕ್, ರಾಜಗೋಪಾಲ್ ಗೌಡ, ಮಣಿವಣ್ಣನ್, ಕೆ.ಸಿ. ನಾಗರಾಜ್, ರಂಗಶಾಮಯ್ಯ, ಗುರುರಾಜ್ ಚಿಂತಕಲ್, ರಾಜೇಶ್, ಅಂಜುಮ್ ಮಹಮದ್, ವಿದ್ಯಾ, ವಸಂತ್ ಕುಮಾರ್, ಶ್ರೀನಿವಾಸ್, ವೆಂಕಟರಾಮೇಗೌಡ, ರಾಜಣ್ಣ, ಕಾಲೇಜು ಹಾಗೂ ಶಾಲಾ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.