ADVERTISEMENT

‌ಗುಂಪುಗಾರಿಕೆಯಿಂದ ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಸೋಲು: CM ರಾಜಕೀಯ ಕಾರ್ಯದರ್ಶಿ

ಹರಿಯಾಣ ಚುನಾವಣೆ– ಪರಿಸ್ಥಿತಿ ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ್ದೇವೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 14:31 IST
Last Updated 8 ಅಕ್ಟೋಬರ್ 2024, 14:31 IST
ನಸೀರ್ ಅಹಮದ್
ನಸೀರ್ ಅಹಮದ್   

ಕೋಲಾರ: ಪಕ್ಷದೊಳಗಿನ ಗುಂಪುಗಾರಿಕೆಯಿಂದಾಗಿ ಹರಿಯಾಣದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನಡೆಯಾಗಿದೆ. ಅಲ್ಲಿನ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ್ದೇವೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬುದಾಗಿ ಎಲ್ಲ ಸಮೀಕ್ಷೆಗಳು ಹೇಳಿದ್ದವು. ಈಗ ನೋಡಿದರೆ ಭಾರಿ ವ್ಯತ್ಯಾಸವಾಗಿದೆ. ಬಹಳ ಅಚ್ಚರಿ ಫಲಿತಾಂಶ ಬಂದಿದೆ. ಕಾಂಗ್ರೆಸ್‌ ಮುಖಂಡರಾದ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ‌ಹೂಡಾ, ಕುಮಾರಿ ಸೆಲ್ಜಾ ಹಾಗೂ ರಣದೀಪ್‌ ಸುರ್ಜೇವಾಲಾ ಅವರ ನಡುವೆ ಹೊಂದಾಣಿಕೆ ಆಗಿಲ್ಲ. ಆಡಳಿತ ವಿರೋಧಿ ಅಲೆ ಅರಿಯುವಲ್ಲಿ ಎಡವಿದ್ದೇವೆ. ಗೆಲ್ಲುವ ಅತಿ ವಿಶ್ವಾಸ ಮುಳುವಾಗಿದೆ’ ಎಂದು ಒಪ್ಪಿಕೊಂಡರು.

‘ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ 400ಕ್ಕೂ ಅಧಿಕ ಸ್ಥಾನಗಳು ಬರುತ್ತವೆ ಎಂದು ಹೇಳಲಾಗಿತ್ತು. ಕೊನೆಗೆ ಫಲಿತಾಂಶ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದರು.

ADVERTISEMENT

‘ಚುನಾವಣೆಯು ಸ್ಥಳೀಯ ಮುಖಂಡತ್ವದ ಮೇಲೆಯೂ ನಿರ್ಧಾರವಾಗುತ್ತದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದರಿಂದಾಗಿ 136 ಸ್ಥಾನ ಗೆಲ್ಲಲು ಸಾಧ್ಯವಾಯಿತು. ನಮ್ಮಲ್ಲಿ ಯಾವುದೇ ಗೊಂದಲ ಇರಲಿಲ್ಲ. ಆದರೆ, ಹರಿಯಾಣದಲ್ಲಿ ಮೂರು ಗುಂಪುಗಳಿಂದಾಗಿ ಪಕ್ಷಕ್ಕೆ ಹಿನ್ನಡೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಮ್ಮುವಿನಲ್ಲಿ ನಿರೀಕ್ಷೆಗೂ ಮೀರಿ ಕಾಂಗ್ರೆಸ್‍ ಮೈತ್ರಿಕೂಟಕ್ಕೆ ಸ್ಥಾನಗಳು ಲಭಿಸಿವೆ. 35ರಿಂದ 40 ಸ್ಥಾನ ಬರಬಹುದೆಂದು ಅಂದಾಜಿಸಿದ್ದೆವು’ ಎಂದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ‘ಈ ವಿಚಾರವಾಗಿ ಹರಿದಾಡುತ್ತಿರುವ ಊಹಾಪೋಹವನ್ನು ಯಾರೂ ನಂಬಬೇಡಿ. ಜನರನ್ನು ತಪ್ಪು ದಾರಿಗೆ ಎಳೆಯುವುದು ಬೇಡ. ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಸಚಿವ ಸತೀಶ ಜಾರಕಿಹೊಳಿ ಉತ್ತಮ ನಾಯಕರು, ಎಐಸಿಸಿ ನಾಯಕರನ್ನು ಭೇಟಿ ಮಾಡುವುದು ತಪ್ಪೇ? ಡಿಸೆಂಬರ್ ತಿಂಗಳಿನಲ್ಲಿ ಬೆಳಗಾವಿಯಲ್ಲಿ ಗಾಂಧೀಜಿ ವಿಚಾರವಾಗಿ ದೊಡ್ಡ ಕಾರ್ಯಕ್ರಮ ನಡೆಯಲಿದೆ. ಆ ಬಗ್ಗೆ ಚರ್ಚಿಸಲು ತೆರಳಿರಬಹುದು’ ಎಂದು ಹೇಳಿದರು.

ಜಾತಿ ಗಣತಿಗೆ ₹ 136 ಕೋಟಿ ಖರ್ಚಾಗಿದೆ. ಮನೆಮನೆಗೆ ಹೋಗಿ ಸಮೀಕ್ಷೆ ನಡೆಸಲಾಗಿದೆ. ರಾಜ್ಯದ ಜನಸಂಖ್ಯೆ 7 ಕೋಟಿ ಇದೆ. ಅದರಲ್ಲಿ ಒಂದಿಬ್ಬರು ತಪ್ಪಿ ಹೋದರೆ ಏನು ಮಾಡಲಾಗುತ್ತದೆ?
ನಸೀರ್‌ ಅಹಮದ್‌, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ

‘ಜಾತಿಗಣತಿ ರಾಜಕೀಯ ವಿಷಯವೇ ಅಲ್ಲ. ಯಾವುದೇ ಸಮಾಜಕ್ಕೆ ಅನ್ಯಾಯವಾಗಬಾರದು ಎಂಬುದು ಜಾತಿ ಗಣತಿ ಹಿಂದಿರುವ ಉದ್ದೇಶ. ಎಲ್ಲ ಜಾತಿಯಲ್ಲಿನ ‌ಬಡವರಿಗೆ ಅನ್ಯಾಯವಾಗಬಾರದು. ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಜಾತಿ ಗಣತಿ ವರದಿ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅ.18ರಂದು ಸಚಿವ ಸಂಪುಟದ ಮುಂದೆ ವರದಿ ಇಡುವುದಾಗಿ ಹೇಳಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.