ಕೋಲಾರ: ‘ಯಾರೂ ಅಮಾನತು ಆಗಿಲ್ಲ. ಅಮಾನತು ಮಾಡುವ ಅಧಿಕಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಇಲ್ಲ. ಇಲ್ಲಿಂದ ಶಿಫಾರಸು ಮಾಡಿ ಕಳುಹಿಸಿದರೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕ್ರಮ ವಹಿಸುತ್ತಾರೆ. ಏನೂ ಇಲ್ಲದೆಯೇ ಅಧ್ಯಕ್ಷರು ಹೇಳಿಕೆ ನೀಡಿದರೆ ಹೇಗೆ?’ ಎಂದು ಶಾಸಕ ಕೊತ್ತೂರು ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಸಭೆ ನಡೆದರೆ ಊಟದ ವ್ಯವಸ್ಥೆ ನಾನು ಮಾಡಬೇಕು. ಕಲ್ಯಾಣ ಮಂಟಪದ ಖರ್ಚು ನಂಜೇಗೌಡರು ನೋಡಿಕೊಳ್ಳಬೇಕು. ಕನಿಷ್ಠ ಅದು ಯಾವ ಸಭೆ ಎನ್ನುವ ಬ್ಯಾನರ್ ಹಾಕಲೂ, ಸಂಬಂಧಪಟ್ಟವರ ಫೋಟೊ ಹಾಕಲು ಆಗದವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಲಾಯಕ್ಕು ಹೇಗೆ?’ ಎಂದು ವ್ಯಂಗ್ಯವಾಡಿದರು.
‘ಅಮಾನತು ಮಾಡಿರುವುದಕ್ಕೆ ಏನಾದರೂ ದಾಖಲೆ ಇದೆಯೇ? ಅಮಾನತು ಮಾಡಿದ್ದರೂ ಉಪಯೋಗಕ್ಕೆ ಬರಲ್ಲ. ಏಕೆಂದರೆ ಈಗಾಗಲೇ ಕೆಪಿಸಿಸಿ ಉಪಾಧ್ಯಕ್ಷರು ತಡೆ ನೀಡಿದ್ದಾರೆ. ಅವರಲ್ಲಿ ಯಾರು, ಯಾವಾಗ ಏನೇನು ಮಾಡಿದ್ದಾರೆ ಎನ್ನುವ ಬಗ್ಗೆ ನಾವೂ ಹೈಕಮಾಂಡ್‍ಗೆ ವರದಿ ಸಲ್ಲಿಸುತ್ತೇವೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಯಾರು ಏನು ಮಾತನಾಡಿದರು ಎಂಬುದರ ಬಗ್ಗೆ ಆಡಿಯೊ ದಾಖಲೆ ಸಲ್ಲಿಸುತ್ತೇವೆ’ ಎಂದು ತಿರುಗೇಟು ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಸಂಬಂಧ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆದರೆ ಜಿಲ್ಲೆಯಲ್ಲಿ ಬಣ ರಾಜಕೀಯ ನಿಲ್ಲಲ್ಲ ನಾವು ಅವರೊಂದಿಗೆ ಕುಳಿತು ಮಾತನಾಡಲ್ಲ.ಕೊತ್ತೂರು ಮಂಜುನಾಥ್, ಶಾಸಕ
‘ನಮಗೂ ಕಾಂಗ್ರೆಸ್ ಸಭೆಯಲ್ಲಿ ನಡೆದ ಘಟನೆಗೂ ಸಂಬಂಧ ಇಲ್ಲ. ಘಟನೆಗೆ ಕಾರಣರಾದವರಿಗೆ ರೋಗಗಳು ತಟ್ಟಲಿ ಎಂದು ಈಗಾಗಲೇ ಶಾಪ ಹಾಕಿದ್ದೇನೆ’ ಎಂದರು.
‘ಹಿರಿಯರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ನಾನೇ ಮುಂದಾಳತ್ವ ವಹಿಸಿಕೊಳ್ಳಲು ಸಿದ್ಧ. ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಸುಮ್ಮನೆ ಇಲ್ಲ. ಮನೆಯಲ್ಲಿದ್ದುಕೊಂಡೇ ಎಲ್ಲವನ್ನೂ ಗಮನಿಸುತ್ತಿದ್ದಾರೆ’ ಎಂದು ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ಕುರಿತು, ‘ಮುಖ್ಯಮಂತ್ರಿ ಸೀಟ್ ಸದ್ಯಕ್ಕೆ ಖಾಲಿ ಇಲ್ಲ. ಖಾಲಿಯಾಗುವ ಪ್ರಶ್ನೆಯೂ ಇಲ್ಲ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎನ್ನುವ ಮಾತುಗಳನ್ನು ವಿರೋಧ ಪಕ್ಷದವರು ಆಗಾಗ್ಗೆ ಹೇಳುತ್ತಿರಬೇಕು. ಆಗಲೇ ನಾವು ಹುಷಾರಾಗಿ ಇರಲು ಸಾಧ್ಯ. ಊಹಾಪೋಹಗಳು ಇದ್ದೇ ಇರುತ್ತವೆ. ಸಿದ್ದರಾಮಯ್ಯ ಸ್ಥಾನ ಗಟ್ಟಿಯಾಗಿದೆ. 5 ವರ್ಷ ಅವರೇ ಮುಖ್ಯಮಂತ್ರಿ’ ಎಂದರು.
‘ಲೋಕೋಪಯೋಗಿ ಇಲಾಖೆಯಿಂದ ಇಡೀ ರಾಜ್ಯದಲ್ಲೇ ಕೋಲಾರ ಕ್ಷೇತ್ರಕ್ಕೆ ಹೆಚ್ಚು ಅನುದಾನವನ್ನು ತಂದಿದ್ದೇನೆ. ಮುಖ್ಯಮಂತ್ರಿ ಕ್ಷೇತ್ರಕ್ಕೂ ಇಷ್ಟು ಅನುದಾನ ಸಿಕ್ಕಿಲ್ಲ’ ಎಂದು ತಿಳಿಸಿದರು.
ಉಸ್ತುವಾರಿಯಿಂದ ಅಮಾನತಿಗೆ ತಡೆ
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ ಅವರು ನಾಲ್ವರನ್ನು ಅಮಾನತುಗೊಳಿಸಿರುವ ಸಂಬಂಧ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎಂ.ನಾರಾಯಣಸ್ವಾಮಿ ತಡೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಈ ವಿಚಾರವಾಗಿ ಮಾತನಾಡುವಾಗ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರು ಕೊತ್ತೂರು ಮಂಜುನಾಥ್ ಗಮನಕ್ಕೆ ತಂದರು. ಕೆಲ ನಿಮಿಷಗಳಲ್ಲಿ ನಾರಾಯಣಸ್ವಾಮಿ ಅವರೇ ಕೊತ್ತೂರು ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದರು.
ಅಧ್ಯಕ್ಷರ ದಿನಕ್ಕೊಂದು ಹೇಳಿಕೆ: ಆಕ್ರೋಶ
‘ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ ದಿನಕ್ಕೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಅವರ ಮಾತನ್ನು ನಂಬುವುದು ಹೇಗೆ’ ಎಂದು ಕೊತ್ತೂರು ಮಂಜುನಾಥ್ ಪ್ರಶ್ನಿಸಿದರು. ‘ತಮ್ಮ ಮೇಲೆ ಹಲ್ಲೆಯೇ ನಡೆದಿಲ್ಲ ಎಂಬುದಾಗಿ ಮೊದಲ ದಿನ ಹೇಳಿದರು. ಆ ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಬಳಿಕ ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ. ಈಗ ನನ್ನ ಮೇಲೂ ಆರೋಪ ಮಾಡಿರುವುದು ಗೊತ್ತಾಗಿದೆ. ಹೀಗೆ ಒಂದೊಂದು ಬಾರಿ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ’ ಎಂದು ಹರಿಹಾಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.