ADVERTISEMENT

ಉದ್ಯಮವಾಗಿ ಆರೋಗ್ಯ, ಶಿಕ್ಷಣ; ಮನುಷ್ಯತ್ವ ನಾಶ

ಅಂತರ ಮಹಾವಿದ್ಯಾಲಗಳ ಯುವಜನೋತ್ಸವ ಕಲಾಶೃಂಗದಲ್ಲಿ ಪ್ರೊ.ಬರಗೂರು ರಾಮಚಂದ್ರಪ್ಪ ಕಳವಳ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 7:04 IST
Last Updated 1 ನವೆಂಬರ್ 2025, 7:04 IST
ಕೋಲಾರದಲ್ಲಿ ಶುಕ್ರವಾರ ನಡೆದ 16ನೇ ಅಂತರ ಮಹಾವಿದ್ಯಾಲಗಳ ಯುವಜನೋತ್ಸವ ಕಲಾಶೃಂಗ–2025 ಕಾರ್ಯಕ್ರಮವನ್ನು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು. ಎಂ.ಆರ್‌.ರವಿ, ನಿಖಿಲ್‌ ಬಿ., ಪ್ರವೀಣ್‌ ಪಿ.ಬಾಗೇವಾಡಿ, ವಿಷ್ಣುವರ್ಧನ್, ರಾಮಚಂದ್ರ ನಾಯ್ಕ ಕೆ., ರಾಘವೇಂದ್ರ ಕೆ.ಮೇಸ್ತ ಪಾಲ್ಗೊಂಡಿದ್ದರು
ಕೋಲಾರದಲ್ಲಿ ಶುಕ್ರವಾರ ನಡೆದ 16ನೇ ಅಂತರ ಮಹಾವಿದ್ಯಾಲಗಳ ಯುವಜನೋತ್ಸವ ಕಲಾಶೃಂಗ–2025 ಕಾರ್ಯಕ್ರಮವನ್ನು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು. ಎಂ.ಆರ್‌.ರವಿ, ನಿಖಿಲ್‌ ಬಿ., ಪ್ರವೀಣ್‌ ಪಿ.ಬಾಗೇವಾಡಿ, ವಿಷ್ಣುವರ್ಧನ್, ರಾಮಚಂದ್ರ ನಾಯ್ಕ ಕೆ., ರಾಘವೇಂದ್ರ ಕೆ.ಮೇಸ್ತ ಪಾಲ್ಗೊಂಡಿದ್ದರು   

ಕೋಲಾರ: ದೇಶದ ಜೀವನಾಡಿ ಎನಿಸಿರುವ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರ ಉದ್ಯಮವಾಗುತ್ತಿರುವುದು ದೊಡ್ಡ ಅಪಾಯಕಾರಿ ಸಂಗತಿ. ಈ ಎರಡು ಕ್ಷೇತ್ರಗಳು ಉದ್ಯಮವಾದರೆ ಮನುಷ್ಯತ್ವ ನಾಶವಾಯಿತು ಎಂದೇ ಅರ್ಥ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೋಲಾರ ತೋಟಗಾರಿಕಾ ಮಹಾವಿದ್ಯಾಲಯ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 16ನೇ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ ಕಲಾಶೃಂಗ–2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಡೀ ಸಮಾಜವನ್ನು ವಾಣಿಜ್ಯಮುಖಿಯನ್ನಾಗಿ ಮಾಡಲಾಗುತ್ತಿದೆ. ಶಿಕ್ಷಣ, ಆರೋಗ್ಯ ಉದ್ಯಮಗೊಳ್ಳುತ್ತಿರುವ ಕಾರಣ ಇಡೀ ಸಮಾಜದಲ್ಲಿ ಲಾಭ, ನಷ್ಟದ ಬಗ್ಗೆ ಯೋಚನೆ ಮಾಡಲಾಗುತ್ತಿದೆ. ಶಿಕ್ಷಣ ವ್ಯಾಪಾರಗಳ ಕೇಂದ್ರವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಬೇಕಿದೆ ಎಂದು ಎಚ್ಚರಿಸಿದರು.

ADVERTISEMENT

ಮಾನವಿಕ ವಿಷಯಗಳ ಅಧ್ಯಯನದಿಂದ ಸಮಾಜದ ಬಹುತ್ವ ಅರಿವು ಸಾಧ್ಯ. ಸಾಹಿತ್ಯ, ಇತಿಹಾಸ, ರಾಜಕೀಯ ಶಾಸ್ತ್ರ ಮತ್ತು ಸಮಾಜ ವಿಜ್ಞಾನಗಳ ಅರಿವು ಇಲ್ಲದೆ ಮನುಷ್ಯ ಪರಿಪೂರ್ಣತೆಯ ಕಡೆಗೆ ಸಾಗಲು ಸಾಧ್ಯವಿಲ್ಲ. ಆದರೆ, ದೇಶದಲ್ಲಿ 766 ವಿಶ್ವವಿದ್ಯಾಲಯಗಳಿದ್ದು, ಶೇಕಡವಾರು ಅಭ್ಯರ್ಥಿಗಳು ಯಾವ ಯಾವ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂಬುದನ್ನು ಸಮೀಕ್ಷೆ ಮಾಡಿದಾಗ ಶೇ 5ರಷ್ಟು ಮಂದಿ ಮಾತ್ರ ಮಾನವಿಕ ವಿಜ್ಞಾನ ಕಲಿಯುತ್ತಿದ್ದಾರೆ. ಇದು ಶಿಕ್ಷಣದಲ್ಲಿನ ದೊಡ್ಡ ದುರಂತ. ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ ಅನ್ನು ಶೇ 60 ಓದುತ್ತಿದ್ದಾರೆ. ವಾಸ್ತುಶಿಲ್ಪವನ್ನು ಶೇ 10, ಹೋಟೆಲ್‌ ಮ್ಯಾನೇಜ್‌ಮೆಂಟ್‌ ಅನ್ನು ಶೇ 15ರಷ್ಟು, ಫ್ಯಾಷನ್‌ ಟೆಕ್ನಾಲಜಿಯಲ್ಲಿ ಶೇ 10ರಷ್ಟನ್ನು ಕಲಿಯುತ್ತಿದ್ದಾರೆ. ಇದನ್ನು ಗಮನಿಸಿದರೆ ಶಿಕ್ಷಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಬೇಸರ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

‘ನಮ್ಮದು ಬಹುತ್ವ ಭಾರತ. ಈ ಯುವಜನೋತ್ಸವದ ಕಲಾ ಪ್ರದರ್ಶನದಲ್ಲಿ ಕಾಣುತ್ತಿರುವುದು ಕೂಡ ಬಹುತ್ವವೇ. ಏಕತ್ವ, ಬಹುತ್ವ ಎಲ್ಲಿರಬೇಕು ಎಂಬುದನ್ನು ಗಮನಿಸಬೇಕಾಗುತ್ತದೆ. ಭಿನ್ನಾಪಾಯಗಳ ನಡುವೆ ಬದುಕುವುದು, ಸಮಾನ ಅಭಿಪ್ರಾಯಕ್ಕೆ ಬರುವುದು ಈ ದೇಶದ ಸೌಂದರ್ಯ’ ಎಂದು ಉದಾಹರಣೆ ಸಮೇತ ವಿವರಿಸಿದರು.

ಜಿಲ್ಲಾಧಿಕಾರಿ ಎಂ.ಆರ್‌.ರವಿ ಮಾತನಾಡಿ, ಪ್ರತಿ ಜಿಲ್ಲೆಯೂ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಕೋಲಾರವನ್ನು ರಾಜಮಹಾರಾಜರು ಅಳ್ವಿಕೆ ನಡೆಸಿರುವ ಇತಿಹಾಸ ಇದೆ. ಈ ಜಿಲ್ಲೆಯು ಕಲೆ, ಸಾಹಿತ್ಯ, ಪರಂಪರೆಯ ನೆಲೆ ಎಂದು ಬಣ್ಣಿಸಿದರು.

ಜಿಲ್ಲೆಯಲ್ಲಿ ಜೀವಂತವಾಗಿರುವ ಒಂದೂ ನದಿ ಇಲ್ಲ. ಇಲ್ಲಿಯ ಜನರ ಸಾಮಾಜಿಕ, ಆರ್ಥಿಕ ಬದುಕನ್ನು ಹಸನು ಮಾಡಿರುವುದು 3,200 ಕೆರೆ ಕಟ್ಟೆಗಳು. ಇದರಿಂದ ಬೇಸಾಯ ಮಾಡಿಕೊಂಡು ಜಗತ್ತಿಗೆ ಟೊಮೆಟೊ ನೀಡುತ್ತಿದ್ದಾರೆ. ಲಭ್ಯವಿರುವ ನೀರನ್ನು ಹೇಗೆ ಉಪಯೋಗಿಸಬೇಕು ಎಂಬ ಪ್ರಜ್ಞೆ ಜನರಲ್ಲಿದ್ದು, ಇತರರಿಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಮನುಷ್ಯರ ನಡುವೆ ಸಂವಾದ ಏರ್ಪಡದೆ ಇರಲು ತಂತ್ರಜ್ಞಾನ ಕಾರಣ. ಹೆಚ್ಚು ತಂತ್ರಜ್ಞಾನ ಮೊರೆಯಿಂದ ಮೂರ್ಖರಾಗುತ್ತಿದ್ದೇವೆ ಎಂಬುದಾಗಿ ಬಹಳ ಹಿಂದೆಯೇ ಐನ್‍ಸ್ಟೈನ್ ‌ಹೇಳಿದ್ದರು. ತಂತ್ರಜ್ಞಾನದ ದಾಸರಾಗುತ್ತಿದ್ದೇವೆ ಎಂಬುದಾಗಿ ಈಗ ಬರಗೂರು ಕೂಡ ಹೇಳಿದ್ದಾರೆ. ಹಿಂದಿನವರಿಗೆ ಸಾಮಾಜಿಕ ಪ್ರಜ್ಞೆ ಇತ್ತು. ಈಗ ಏಕೆ ಇಲ್ಲ ಎಂದು ಪ್ರಶ್ನಿಸಿದರು.

ಬಿಕ್ಕಟ್ಟುಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಿದ್ದೇವೆ. ಒಳಿತು ಕೆಡುಕುಗಳ ನಡುವೆ ಸಂಘರ್ಷ ಇದ್ದೇ ಇರುತ್ತದೆ. ಅದರ‌ ನಡುವೆ ಬದುಕುವುದನ್ನು ಕಲಿಯಬೇಕು. ಜನಪರ,‌ ಜನಮುಖಿಯಾಗಿ‌ ಬೆಳೆಯಲು ಕಲಾ ಪ್ರಕಾರಗಳು ಸಹಾಯ‌ ಮಾಡುತ್ತವೆ. ಸಮಾಜ ಕಟ್ಟುವಿಕೆಯಲ್ಲಿ‌ ಪಾಲ್ಗೊಳ್ಳಬೇಕು ಎಂದು ನುಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಮಾತನಾಡಿ, ‘ಜಿಲ್ಲೆಯ ರೈತರು ಶ್ರಮಪಟ್ಟು ತೋಟಗಾರಿಕೆ ಹಾಗೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ವಿದ್ಯಾರ್ಥಿಗಳು ರೈತರಿಗೆ ಸೂಕ್ತ ಕಾಲಕ್ಕೆ ಮಾರ್ಗದರ್ಶನ ನೀಡುವ ಮೂಲಕ ಜಾಗೃತಿಗೊಳಿಸಬೇಕು. ಸಂಶೋಧನೆ‌ಗಳು ಕೃಷಿ ಹಾಗೂ ತೋಟಗಾರಿಕೆಗೆ ಪೂರಕವಾಗಿರಬೇಕು’ ಎಂದು ಸಲಹೆ ನೀಡಿದರು.

ಜಾನಪದ ‌ಕಲೆಗಳ‌ ಬಗ್ಗೆ ಕಾಳಜಿ‌ ಬೆಳೆಸಿಕೊಳ್ಳಿ. ಈ ಮೂಲಕ ಈ ಕಲೆಗಳನ್ನು ಉಳಿಸಿಕೊಳ್ಳಬೇಕು,‌ ಇತಿಹಾಸ‌ ಸೇರಲು ಬಿಡಬಾರದು ಎಂದು ಮನವಿ‌ ಮಾಡಿದರು.

ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ವಿಷ್ಣುವರ್ಧನ್ ಮಾತನಾಡಿದರು. 10 ಮಹಾವಿದ್ಯಾಲಯಗಳು ನಡುವೆ ಮೂರು ದಿನ 20 ಸ್ಪರ್ಧೆಗಳು ‌ನಡೆಯಲಿವೆ. ಇಲ್ಲಿ ಗೆದ್ದವರು ರಾಷ್ಟ್ರ‌ಮಟ್ಟದ ಯುವಜನೋತ್ಸವಕ್ಕೆ ಆಯ್ಕೆಯಾಗಲಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್‌ ಪಿ.ಬಾಗೇವಾಡಿ, ಮಹಾವಿದ್ಯಾಲಯದ ಡೀನ್‌ ರಾಘವೇಂದ್ರ ಕೆ.ಮೇಸ್ತಾ, ವ್ಯವಸ್ಥಾಪನಾ ಮಂಡಳಿ ಸದಸ್ಯ ಎಚ್‌.ಜೆ.ಮನೋಹರ್‌, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್‌ ಹಾಗೂ ಯುವಜನೋತ್ಸವದ ಸಂಘಟನಾ ಅಧ್ಯಕ್ಷ ರಾಮಚಂದ್ರ ನಾಯ್ಕ, ಎಸ್.ಎಲ್‌.ಜಗದೀಶ್,‌ ನಾಸೀರ್,‌ ಶ್ರೀನಿವಾಸ್, ಅಧಿಕಾರಿಗಳು, ಉಪನ್ಯಾಸಕರು, 10 ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು

ಅಂತರ ಮಹಾವಿದ್ಯಾಲಗಳ ಯುವಜನೋತ್ಸವವದಲ್ಲಿ ಪಾಲ್ಗೊಂಡಿದ್ದ ಕೋಲಾರ ತಂಡ
ವಿವಿಧ ಮಹಾವಿದ್ಯಾಲಯಗಳ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು
ವಿವಿಧ ಮಹಾವಿದ್ಯಾಲಯಗಳ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು

ತಂತ್ರಜ್ಞಾನದಿಂದ ಮನುಷ್ಯ ಸಂಬಂಧ ನಾಶ

ತಂತ್ರಜ್ಞಾನ ಕೂಡ‌ ಮನುಷ್ಯತ್ಯ ಮನುಷ್ಯ ಸಂಬಂಧವನ್ನು ನಾಶ ಮಾಡುತ್ತಿದೆ. ನಾನು ತಂತ್ರಜ್ಞಾನದ ವಿರೋಧಿ ಅಲ್ಲ. ಆದರೆ ಅದಕ್ಕೆ ನಾವು ಸಂಪೂರ್ಣ ದಾಸರಾಗುತ್ತಿದ್ದೇವೆ. ತಂತ್ರಜ್ಞಾನ ಸೃಷ್ಟಿ ಮಾಡಿದ ಮುನುಷ್ಯ ಜ್ಞಾನವನ್ನೇ ಮರೆಯುತ್ತಿದ್ದೇವೆ. ಮನುಷ್ಯ ಜ್ಞಾನವಿಲ್ಲದಿದ್ದರೆ ಎಐ ಸೃಷ್ಟಿಯಾಗುತ್ತದೆಯೇ? ಮನುಷ್ಯನ ಆದೇಶದಂತೆ ತಂತ್ರಜ್ಞಾನ ನಡೆಯಬೇಕೇ ಹೊರತು ತಂತ್ರಜ್ಞಾನದ ಆದೇಶದಂತೆ‌ ಮನುಷ್ಯ ನಡೆಯಬಾರದು ಎಂದು ಪ್ರೊ.ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು. ವಿಜ್ಞಾನಕ್ಕಿಂತ ತಂತ್ರಜ್ಞಾನ ‌ಹೆಚ್ಚಾಗುತ್ತಿದೆ ಅದಕ್ಕೆ ಧಕ್ಕೆ‌ ಉಂಟು ಮಾಡುತ್ತಿದೆ. ತಂತ್ರಜ್ಞಾನ ಎಷ್ಟು ಬೇಕು ಎಂಬ ಅರಿವು ಇರಬೇಕು. ಹೆಚ್ಚು ತೊಡಗಿಸಿಕೊಂಡರೆ ಮೆದುಳಿನ ಮೇಲೆ ‌ಪರಿಣಾಮ ಉಂಟಾಗುತ್ತದೆ ಮೆದುಳು‌ ಸೃಜನಶೀಲತೆ ಕಳೆದುಕೊಳ್ಳುವ ಅಪಾಯವಿರುತ್ತದೆ. ಮನುಷ್ಯ ಜ್ಞಾನ ಹಾಗೂ ತಂತ್ರಜ್ಞಾನದ ನಡುವಿನ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಯುವಜನತೆ ದಾರಿ ತಪ್ಪುತ್ತಾರೆ ಎಂದು ಎಚ್ಚರಿಸಿದರು.

ಮೌಲ್ಯಕಟ್ಟೆಯಿಂದ ಮಾರುಕಟ್ಟೆ ಕಡೆಗೆ

ಮೌಲ್ಯಕಟ್ಟೆಯ ಜಾಗವನ್ನು ಮಾರುಕಟ್ಟೆ ಶಿಕ್ಷಣ ತಜ್ಞರ ಜಾಗವನ್ನು ಶಿಕ್ಷಣೋದ್ಯಮ ಮಾನವೀಯ ಜಾಗವನ್ನು ಮತೀಯತೆ ವಿವೇಕದ ಜಾಗವನ್ನು ಅವಿವೇಕ ಸಮರಸ್ಯದ ಜಾಗವನ್ನು ದ್ವೇಷ ಆವರಿಸಿಕೊಂಡಿದೆ. ಮನಸ್ಸು ಮೌಲ್ಯಕಟ್ಟೆ ಆಗಬೇಕೇ ಹೊರತು ಮಾರುಕಟ್ಟೆ ಆಗಬಾರದು. ಶಿಕ್ಷಣವು ವ್ಯಾಪಾರ ಉದ್ಯಮವಾಗಿ ರೂಪುಕೊಂಡು ಮಾನವೀಯ ಮೌಲ್ಯ ಇಲ್ಲದಂತಾಗಿದೆ ಎಂದು ಪ್ರೊ.ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.