ADVERTISEMENT

ಸರ್ಕಾರಿ ಕುಂಟೆ ಒತ್ತುವರಿ: ರೆಡ್ಡಿ ಕಲ್ಯಾಣ ಮಂಟಪದ ಅಧ್ಯಕ್ಷ, ಕಾರ್ಯದರ್ಶಿಗೆ ಜೈಲು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 5:04 IST
Last Updated 14 ನವೆಂಬರ್ 2025, 5:04 IST

ಕೆಜಿಎಫ್‌: ರಾಬರ್ಟಸನ್‌ಪೇಟೆಯ ವಿವೇಕನಗರದಲ್ಲಿರುವ ಸರ್ಕಾರಿ ಕುಂಟೆಯನ್ನು ರೆಡ್ಡಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲು ಒತ್ತುವರಿ ಮಾಡಿಕೊಂಡ ಆರೋಪದ ಮೇರೆಗೆ ರೆಡ್ಡಿ ಕಲ್ಯಾಣ ಮಂಟಪದ ಅಧ್ಯಕ್ಷ ಮತ್ತು ಕಾರ್ಯದರ್ಶಿಗೆ ಎರಡು ವರ್ಷ ಶಿಕ್ಷೆ ಮತ್ತು ತಲಾ ₹10 ಸಾವಿರ ದಂಡ ವಿಧಿಸಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ನಗರದಲ್ಲಿರುವ 12 ಗುಂಟೆ ಜಮೀನನ್ನು ರೆಡ್ಡಿ ಕಲ್ಯಾಣ ಮಂಟಪ ನಿರ್ಮಿಸಲು ಸಂಘದ ಅಧ್ಯಕ್ಷ ಶೇಖರ ರೆಡ್ಡಿ ಮತ್ತು ಕಾರ್ಯದರ್ಶಿ ಸಿ.ಎಲ್‌.ಕೃಷ್ಣಾರೆಡ್ಡಿ ಅವರು ಒತ್ತುವರಿ ಮಾಡಿಕೊಂಡಿರುವುದು ನಿರೂಪಿತವಾಗಿರುವುದರಿಂದ ಅವರನ್ನು ತಪ್ಪಿತಸ್ಥ ಎಂದು ನ್ಯಾಯಾಲಯ ಘೋಷಿಸಿದೆ.

ವಿವೇಕನಗರದ ಬಳಿ ಇರುವ ದೇವಾಲಯಕ್ಕೆ ಸೇರಿದ ಜಾಗದ ಪಕ್ಕದಲ್ಲಿರುವ ಕುಂಟೆ ಒತ್ತುವರಿ ಮಾಡಿಕೊಂಡು ರೆಡ್ಡಿ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಾಬು ಎಂಬುವರು ದೂರು ನೀಡಿದ್ದರು. ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯದ ಆಕ್ಟಿಂಗ್‌ ಛೇರ್ಮನ್‌ ನಾಗಲಿಂಗನಗೌಡ ಮತ್ತು ಕಂದಾಯ ಸದಸ್ಯ ಎಸ್‌.ಪಾಲಯ್ಯ ನ.4 ರಂದು ತೀರ್ಪು ಪ್ರಕಟಿಸಿದ್ದಾರೆ.

ADVERTISEMENT

ರೆಡ್ಡಿ ಕಲ್ಯಾಣ ಮಂಟಪವನ್ನು ದಾನಿಗಳು ನೀಡಿದ ಜಾಗದಲ್ಲಿ ಕಟ್ಟಲಾಗಿದೆ ಎಂದು ರೆಡ್ಡಿ ಕಲ್ಯಾಣ ಮಂಟಪದ ಪರವಾಗಿ ವಾದ ಮಾಡಲಾಗಿತ್ತು. ಆದರೆ, ಅದನ್ನು ರೆಡ್ಡಿ ಸಾರ್ವಜನಿಕ ಸಂಘಕ್ಕೆ ದಾನ ನೀಡಿದ ಜಿ.ಕೆ.ರಾಮಚಂದ್ರ ಶೆಟ್ಟಿ ಅವರಿಗೆ ಜಾಗ ಹೇಗೆ ಬಂದಿದೆ. ಅದರ ವಿಸ್ತೀರ್ಣ ಮತ್ತು ನಿಖರ ಜಾಗ ಯಾವುದು ಎಂಬುದನ್ನು ನಮೂದಿಸಿಲ್ಲ ಎಂಬುದನ್ನು ನ್ಯಾಯಾಲಯ ಹೇಳಿದೆ. ಇದಕ್ಕೆ ಪೂರಕವಾಗಿ ಜಾಗದ ಸರ್ವೆ ನಡೆಸಿದ ಕಂದಾಯ ಅಧಿಕಾರಿ ರಘುರಾಮಸಿಂಗ್‌, ಸರ್ವೆಯರ್‌ ಮೌಲಖಾನ್‌ ಮತ್ತು ಇತರ ಅಧಿಕಾರಿಗಳು ಸ್ವತ್ತು ಸರ್ಕಾರಕ್ಕೆ ಸೇರಿದ್ದು ಎಂದು ದಾಖಲೆ ಸಮೇತ ಸಾಕ್ಷಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.