ಕೋಲಾರ: ಉಪವಿಭಾಗಾಧಿಕಾರಿಯೂ ಆಗಿರುವ ಡಾ.ಮೈತ್ರಿ ಕೋಲಾರ ಜಿಲ್ಲಾ ಹಾಲು ಒಕ್ಕೂಟದ ಆಡಳಿತಾಧಿಕಾರಿ ಆಗಿದ್ದ ಅವಧಿಯಲ್ಲಿ ಕೈಗೊಂಡ ನಿರ್ಧಾರಗಳಿಗೆ ಅನುಮೋದನೆ ಪಡೆಯುವ ವಿಚಾರದಲ್ಲಿ ಒಕ್ಕೂಟದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಪರ ವಿರೋಧ ಚರ್ಚೆ, ಮಾತಿನ ಚಕಮಕಿ ನಡೆಯಿತು.
ನಗರದ ಹೊರವಲಯದಲ್ಲಿ ಕೋಮುಲ್ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಹಲವು ನಾಟಕೀಯ ಬೆಳವಣಿಗೆಗಳು ನಡೆದವು. ನಂಜೇಗೌಡ ಎತ್ತಿದ ಹಲವು ವಿಚಾರಗಳಿಗೆ ನಿರ್ದೇಶಕರೂ ಆಗಿರುವ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆರಂಭದಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಲೇ ಸಾಗಿದರು. ಆಡಳಿತಾಧಿಕಾರ ಅವಧಿಯಲ್ಲಿ ಕೈಗೊಂಡ ತೀರ್ಮಾನಗಳಲ್ಲಿ ಹಲವಾರು ಲೋಪ, ಅಕ್ರಮಗಳು ನಡೆದಿವೆ ಎಂಬುದು ಅವರ ಆರೋಪ.
ಆಡಳಿತಾಧಿಕಾರಿ ಅವಧಿಯಲ್ಲಿನ ಹಣಕಾಸು ವಿಚಾರಗಳಿಗೆ ನಂಜೇಗೌಡ ಅನುಮೋದನೆ ಪಡೆಯಲು ಮುಂದಾದಾಗ ನಾರಾಯಣಸ್ವಾಮಿ ವಿರೋಧಿಸಿದರು. ಅನುಮೋದನೆ ಸಿಕ್ಕರೆ ಆ ವಿಚಾರ ಅಲ್ಲಿಯೇ ಮುಚ್ಚಿ ಹೋಗುತ್ತದೆ, ಹೀಗಾಗಿ ಅನುಮೋದನೆ ನೀಡಲೇಬಾರದು ಎಂದು ಹಟ ಹಿಡಿದರು.
ನಿರ್ದೇಶಕ ವಡಗೂರು ಹರೀಶ್ ಕೂಡ ಅಸಮ್ಮತಿ ಪತ್ರ (ಡಿಸೆಂಟ್ ನೋಟು) ನೀಡಿರುವುದಾಗಿ ಹೇಳಿದರು. ಈ ಲೆಕ್ಕಾಚಾರಗಳಿಗೆ ಅನುಮೋದನೆ ನೀಡಬಾರದೆಂದು ನಿರ್ದೇಶಕರಾದ ಕಾಡೇನಹಳ್ಳಿ ನಾಗರಾಜ್ ಹಾಗೂ ಶಾಮೇಗೌಡ ಕೂಡ ಪಟ್ಟು ಹಿಡಿದರು.
ಆಗ ಅಧ್ಯಕ್ಷರು, ‘ಈ ಹಿಂದೆ ಆಡಳಿತ ಮಂಡಳಿಯಲ್ಲಿ ಈ ವಿಚಾರ ಪ್ರಸ್ತಾಪವಾದಾಗ ಸಮಿತಿ ನೇಮಿಸಲಾಗಿದೆ. ಅಲ್ಲದೆ, ತನಿಖೆಗೆ ಕೋರಿ ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿಗೆ ಪತ್ರ ಕೂಡ ಬರೆದಿದ್ದಾರೆ. ಸಮಿತಿ ವರದಿ ಹಾಗೂ ಸರ್ಕಾರದ ವರದಿ ಬಂದ ಮೇಲೆ ಕ್ರಮ ವಹಿಸಲಾಗುವುದು ಎಂದರು.
ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ‘ಹಿಂದಿನ ಆಡಳಿತ ಮಂಡಳಿ ಕೈಗೊಂಡ ತೀರ್ಮಾನಗಳಿಗೆ ನಮ್ಮ ಅಭ್ಯಂತರ ಇಲ್ಲ. ಆದರೆ, ಒಕ್ಕೂಟಕ್ಕೆ ಆಗಿರುವ ನಷ್ಟ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಗೆ ನಮ್ಮ ವಿರೋಧವಿದೆ’ ಎಂದರು.
‘ಸೌರಘಟಕವನ್ನು ಕಾನೂನು ಪ್ರಕಾರ ಮಾಡಿದ್ದೀರಾ? ಕಾನೂನು ಬಾಹಿರವಾಗಿಲ್ಲ ಎಂದರೆ ಹೇಳಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಕೃಷ್ಣಬೈರೇಗೌಡ ಕೂಡ ಕಾನೂನು ಬಾಹಿರ ಎಂದು ಸದನದಲ್ಲಿ ಹೇಳಿದ್ದಾರೆ’ ಎಂಬುದನ್ನು ತಿಳಿಸಿದರು.
ಆಗ ನಂಜೇಗೌಡ, ‘ಜಿಲ್ಲಾಧಿಕಾರಿಯು ವಿವಿಧ ಉದ್ದೇಶಕ್ಕೆ ನೀಡಿದ ಜಾಗವಿದು. ಅಲ್ಲಿ ಬೇರೆ ಉದ್ದೇಶಗಳಿಗೂ ಜಾಗ ನೀಡಿದ್ದಾರೆ. ರೈತರ ಹಿತದೃಷ್ಟಿಯಿಂದ ಸೌರಘಟಕ ಅಲ್ಲದೇ, ಹುಲ್ಲು ಕೂಡ ಬೆಳೆಯಲಾಗುವುದು’ ಎಂದು ಸಮಜಾಯಿಷಿ ನೀಡಿದರು.
ಆಗ ವಿವಿಧ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಎದ್ದು ನಿಂತು, ಈ ಚರ್ಚೆಗೆ ಆಕ್ಷೇಪ ವ್ಯಕ್ತಪಡಿಸಿ, ಆಡಳಿತ ಮಂಡಳಿಯಲ್ಲಿ ಚರ್ಚೆ ಆಗಬೇಕಾದ ವಿಚಾರವನ್ನು ಇಲ್ಲೇಕೆ ತಂದಿರಿ ಎಂದು ಪ್ರಶ್ನಿಸಿದರು.
ಇದಾಗುತ್ತಿದ್ದಂತೆ ಜಾತಿ ವಿಚಾರ ಪ್ರಸ್ತಾಪವಾಯಿತು. ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ‘ನಾನೊಬ್ಬ ದಲಿತ ಸಮುದಾಯದ ನಿರ್ದೇಶಕ. ಇದೇ ಮೊದಲ ಬಾರಿ ಒಕ್ಕೂಟಕ್ಕೆ ದಲಿತರೊಬ್ಬರು ನಿರ್ದೇಕರಾಗಿ ಬಂದಿದ್ದಾರೆ’ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಂಜೇಗೌಡ, ತಮ್ಮದು ಬರೀ ಇದೇ ಆಯಿತು ಎಂದು ಹೇಳಿದರು. ಈ ಹಂತದಲ್ಲಿ ವಿವಿಧ ಸಂಘಗಳ ಅಧ್ಯಕ್ಷರು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದಾಗ ಗೊಂದಲದ ವಾತಾವರಣ ನಿರ್ಮಾಣವಾಯಿತು. ಮಾತಿನ ಚಕಮಕಿ ನಡೆದು ಪೊಲೀಸರು ಮಧ್ಯ ಪ್ರವೇಶಿಸಿದರು.
ಸಭೆಯಲ್ಲಿ ಸಣ್ಣಪುಟ್ಟ ಗಲಾಟೆ ನಡೆದಾಗಲೂ ಪೊಲೀಸರು ಬಂದರು. ಪೊಲೀಸರು ಬಂದಿದ್ದಕ್ಕೆ ವಿವಿಧ ಡೇರಿಗಳ ಅಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದರು. ‘ನಾವು ಕಳ್ಳರಲ್ಲ, ಅಡ್ಡ ಹಾಕಬೇಡಿ’ ಎಂದರು. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ನಂಜೇಗೌಡ, ‘ನನ್ನುನ್ನು ಕಳ್ಳ ಅಂತಾರೆ. ನಾನು ಒಕ್ಕೂಟದಲ್ಲಿ ಹಲವು ಅಭಿವೃದ್ಧಿ ಮಾಡಿದ್ದೇನೆ’ ಎಂದರು.
ನಾರಾಯಣಸ್ವಾಮಿ ಮಾತನಾಡಿ, ‘ಸಂಘಗಳ ಅಧ್ಯಕ್ಷರು ಸಮಾಧಾನದಿಂದಲೇ ಪ್ರಶ್ನೆ ಕೇಳಿ. ಕೋಮುಲ್ ಅಧ್ಯಕ್ಷರು ಸಮರ್ಥರಿದ್ದು, ಎಲ್ಲದಕ್ಕೂ ಉತ್ತರ ಕೊಡುತ್ತಾರೆ’ ಎಂದು ನುಡಿದರು.
ಇನ್ನು ಹಲವಾರು ವಿಚಾರಗಳು ಸಭೆಯಲ್ಲಿ ಚರ್ಚೆಯಾದವು. ತುರಾಂಡಹಳ್ಳಿ ವೆಂಕಟೇಶ್ ಮಾತನಾಡಿ, ಮದುವೆ, ಶುಭ ಸಮಾರಂಭಗಳಲ್ಕಿ ಡೇರಿ ಉತ್ಪನ್ನ ಪ್ರಚಾರ ಮಾಡಿ, ಆಗ ಮಾರುಕಟ್ಟೆ ಮತ್ತಷ್ಟು ವಿಸ್ತರಿಸುತ್ತದೆ ಎಂದು ಸಲಹೆ ನೀಡಿದರು.
ಸಭೆಯಲ್ಲಿ ನಿರ್ದೇಶಕರಾದ ಜೈಸಿಂಹ ಕೃಷ್ಣಪ್ಪ, ಕಾಡೇನಹಳ್ಳಿ ನಾಗರಾಜ್, ಹನುಮೇಶ್, ವಡಗೂರು ಡಿ.ವಿ.ಹರೀಶ್, ಕಾಂತಮ್ಮ, ಚಂಜಿಮಲೆ ಜೆ.ರಮೇಶ್, ಚೆಲುವನಹಳ್ಳಿ ನಾಗರಾಜಪ್ಪ, ಶ್ರೀನಿವಾಸ್, ಕೆ.ಕೆ.ಮಂಜುನಾಥ್, ಶಾಮೇಗೌಡ, ಮಹಾಲಕ್ಷ್ಮಿ, ನಾಮಿನಿ ನಿರ್ದೇಶಕ ಶಂಷೀರ್, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಗೋಪಾಲಮೂರ್ತಿ, ಆಡ್ಮಿನ್ ನಾಗೇಶ್, ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು, ಕೋಮುಲ್ ಸಿಬ್ಬಂದಿ ಇದ್ದರು.
ಆಡಳಿತಾಧಿಕಾರಿ ಪರ ವಕಾಲತ್ತು ಏಕೆ?
‘ಕೋಮುಲ್ ಆಡಳಿತಾಧಿಕಾರಿ ಮಾಡಿರುವ ತಪ್ಪಿನಲ್ಲಿ ನೀವು (ನಂಜೇಗೌಡ) ಪಾಲುದಾರರಲ್ಲ. ಇದು ರೈತರು ಹಾಗೂ ಮಹಿಳೆಯರ ಶ್ರಮದ ವಿಚಾರ. ನೀವು ಏಕೆ ಆಡಳಿತಾಧಿಕಾರಿ ಪರ ವಕಾಲತ್ತು ವಹಿಸುತ್ತೀರಿ’ ಎಂದು ಎಸ್.ಎನ್.ನಾರಾಯಣಸ್ವಾಮಿ ಪ್ರಶ್ನಿಸಿದರು. ಆಗ ಕೆ.ವೈ.ನಂಜೇಗೌಡ ಪ್ರತಿಕ್ರಿಯಿಸಿ ‘ಆಡಳಿತ ಮಂಡಳಿಯಲ್ಲಿ ಕೈಗೊಂಡ ನಿರ್ಧಾರಗಳನ್ನು ಆಡಳಿತಾಧಿಕಾರಿ ಅನುಷ್ಠಾನಗೊಳಿಸಿರುತ್ತಾರೆ. ಏನಾದರೂ ವ್ಯತ್ಯಾಸಗಳಿದ್ದರೆ ತನಿಖಾ ವರದಿಯಲ್ಲಿ ಗೊತ್ತಾಗುತ್ತದೆ. ಆ ಸಮಿತಿಯಲ್ಲಿ ತಾವೂ ಸದಸ್ಯರಾಗಿದ್ದೀರಿ. ವರದಿ ಬಂದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಅಂತರ ಕಾಯ್ದುಕೊಂಡ ಶಾಸಕರು!
ಶಾಸಕರಾದ ನಂಜೇಗೌಡ ಹಾಗೂ ಎಸ್.ಎನ್.ನಾರಾಯಣಸ್ವಾಮಿ ಸಭೆಯ ಆರಂಭದಿಂದಲೇ ವೇದಿಕೆ ಮೇಲೆ ಪರಸ್ಪರ ಅಂತರ ಕಾಯ್ದುಕೊಂಡು ದೂರ ದೂರ ಕುಳಿತುಕೊಂಡರು. ದೀಪ ಬೆಳಗುವ ವೇಳೆ ನಂಜೇಗೌಡ ತಮ್ಮ ಪಕ್ಕದಲ್ಲಿ ನಿಲ್ಲುವಂತೆ ಕರೆದರೂ ನಾರಾಯಣಸ್ವಾಮಿ ಬರಲಿಲ್ಲ. ಬದಲಾಗಿ ಇನ್ನೊಂದು ಬದಿಯಿಂದ ಬಂದು ದೀಪ ಬೆಳಗಿದರು. ಮಾತುಕತೆ ಸಂದರ್ಭದಲ್ಲಿ ಒಮ್ಮೆ ನಂಜೇಗೌಡರು ನಾರಾಯಣಸ್ವಾಮಿ ಅವರ ಕೈಹಿಡಿದು ಸಮಾಧಾನಪಡಿಸಲು ಪ್ರಯತ್ನಿಸಿದ್ದು ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.