
ಮುಳಬಾಗಿಲು: ಆಂಧ್ರಪ್ರದೇಶದ ಕುಪ್ಪಂ ಕಡೆಗೆ ಹರಿಯುತ್ತಿರುವ ಕೃಷ್ಣಾನದಿ ನೀರಿನಲ್ಲಿ ಕೇಂದ್ರ ಸರ್ಕಾರ ಕೋಲಾರ ಜಿಲ್ಲೆಗೆ 14.5 ಟಿಎಂಸಿ ನೀರನ್ನು ಹರಿಸಬೇಕೆಂದು ಒತ್ತಾಯಿಸಿ ರೈತ ಸಂಘ ಗುರುವಾರ ನಂಗಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿತು.
ಮಳೆಗಾಲದಲ್ಲಿ ತಾಲ್ಲೂಕಿನ ಬಹುತೇಕ ಕೆರೆಗಳ ನೀರು ವ್ಯರ್ಥವಾಗಿ ಆಂಧ್ರ, ತಮಿಳುನಾಡಿಗೆ ಹರಿಯುತ್ತಿವೆ. ಹಾಗಾಗಿ ಮಳೆ ನೀರು ಸಂಗ್ರಹ ಚೆಕ್ ಡ್ಯಾಂ ನಿರ್ಮಿಸಬೇಕು. ಜೊತೆಗೆ ಆಂಧ್ರಪ್ರದೇಶದ ಕೃಷ್ಣ ನದಿ ನೀರನ್ನು ಜಿಲ್ಲೆಗೆ ಹರಿಸಿ ಶುದ್ಧ ಕುಡಿಯುವ ನೀರು ಉತ್ಪಾದನೆ ಮಾಡಬೇಕೆಂದು ಪ್ರತಿಭಟನಾಕಾರರು ತಹಶೀಲ್ದಾರ್ ವಿ.ಗೀತಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
600 ಕಿ.ಮೀ ದೂರದಿಂದ ಜಿಲ್ಲೆಗೆ ಹೊಂದಿಕೊಂಡಿರುವ ಆಂಧ್ರದ ಕುಪ್ಪಂಗೆ ಕೃಷ್ಣ ನೀರು ಹರಿಯುತ್ತಿದೆ. ಆದರೆ, ಜಿಲ್ಲೆಯ ಪ್ರತಿನಿಧಿಗಳು ಕೆ.ಸಿ.ವ್ಯಾಲಿ, ಎತ್ತಿನಹೊಳೆ ನೀರಾವರಿ ಯೋಜನೆಗಳಿಂದ ಜನರನ್ನು ದಿಕ್ಕುತಪ್ಪಿಸಿ, ಬೆಂಗಳೂರು ತ್ಯಾಜ್ಯ ನೀರನ್ನು ಕೋಲಾರದ ಕೆರೆಗಳಿಗೆ ಹರಿಸಿ ರೈತರ ಜೀವನದ ಜೊತೆ ಚಲ್ಲಾಟವಾಡುತ್ತಿದ್ದಾರೆ. ಹಾಗಾಗಿ ಕುಪ್ಪಂಗೆ ಹೋಗುತ್ತಿರುವ ನೀರನ್ನು ಜನ ಪ್ರತಿನಿಧಿಗಳು ಕೋಲಾರ ಜಿಲ್ಲೆಗೆ ಹರಿಯುವಂತೆ ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣ ಗೌಡ ಒತ್ತಾಯಿಸಿದರು.
ಕೃಷ್ಣಾನದಿ ನೀರಿನಲ್ಲಿ ಜಿಲ್ಲೆಗೆ 14.5 ಟಿಎಂಸಿ ನೀರನ್ನು ಹರಿಸುವಂತೆ ಆಂಧ್ರಪ್ರದೇಶ ಹಾಗೂ ಕೇಂದ್ರದ ಸಚಿವರಿಗೆ ಮನವಿ ಮಾಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ವಿ. ಗೀತಾ ಮಾತನಾಡಿ, ಮನವಿಯನ್ನು ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.
ತಾಲ್ಲೂಕು ಅಧ್ಯಕ್ಷ ಯಲುವಹಳ್ಳಿ ಪ್ರಭಾಕರ್, ಬಂಗಾರಿ ಮಂಜು, ರಾಜೇಶ, ಪಾರುಖ ಪಾಷ, ನಾಗರಾಜ, ಜುಬೇರ ಪಾಷ, ಅಜಯ್, ನಂಗಲಿ ಕಿಶೋರ್, ಮಂಜುನಾಥ, ತಿಮ್ಮಣ್ಣ, ರಾಮಕೃಷ್ಣಪ್ಪ, ಗಣೇಶ್, ನಾಗೇಶ್, ಧರ್ಮ, ರಾಮಪ್ಪ, ನಾರಾಯಣಪ್ಪ, ಯಲುವಳ್ಳಿ ಪ್ರಭಾಕರ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.