
ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು
ಕೊಪ್ಪಳ: ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ವಿವಿಧ ಇಲಾಖೆಗಳು ಮತ್ತು ಸ್ಥಳಗಳಿಗೆ ಭೇಟಿ ನೀಡಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು 24 ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,‘ಮೂರು ದಿನಗಳಲ್ಲಿ ಜಿಲ್ಲೆಯ 43 ಇಲಾಖೆಗಳ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿಕೊಳ್ಳಲಾಗಿದೆ. ಸೂಕ್ತ ದಾಖಲಾತಿಗಳಿಲ್ಲದ ಹಾಗೂ ಚಾಲನೆಗೆ ಯೋಗ್ಯವಲ್ಲದ 98 ಶಾಲಾ ಬಸ್‌ಗಳನ್ನು ಜಪ್ತಿ ಮಾಡಿ ₹1.63 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಒಟ್ಟು 384 ಪ್ರಕರಣಗಳ ದೂರುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿ ಅದರಲ್ಲಿ 62 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಲೋಕಾಯುಕ್ತ ವ್ಯಾಪ್ತಿಯಲ್ಲಿ ಬಾಕಿ ಇದ್ದ 120 ಪ್ರಕರಣಗಳಲ್ಲಿ 46 ಪ್ರಕರಣಗಳನ್ನು ಪರಿಹರಿಸಲಾಗಿದೆ’ ಎಂದು ತಿಳಿಸಿದರು.
‘ವಿದ್ಯಾರ್ಥಿಗಳ ವಸತಿ ನಿಲಯಗಳ ಭೇಟಿ ನಂತರ ಬಿಸಿ ನೀರು ಸೌಲಭ್ಯ ಒದಗಿಸಲಾಗಿದೆ. ಕಿಮ್ಸ್, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಜಿಲ್ಲಾ ತರಬೇತಿ ಕೇಂದ್ರ, ತಹಶೀಲ್ದಾರ್ ಕಚೇರಿ, ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಎಪಿಎಂಸಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಇಲಾಖೆ, ತಾಲ್ಲೂಕು ಪಂಚಾಯಿತಿ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಅಬಕಾರಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪ್ರವಾಸೋದ್ಯಮ, ಪ್ರಾದೇಶಿಕ ಸಾರಿಗೆ ಇಲಾಖೆ, ಕ್ವಾರಿಗಳ ಮೇಲೆ ಸುಮೋಟೊ ಕೇಸ್ ದಾಖಲಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಕರ್ನಾಟಕ ಲೋಕಾಯುಕ್ತದ ವಿಚಾರಣೆ ಹೆಚ್ಚುವರಿ ನಿಬಂಧಕ ಕಸನಪ್ಪ ನಾಯ್ಕ, ರಮಾಕಾಂತ್ ಚವ್ಹಾಣ ಹಾಗೂ ಅರವಿಂದ ಎನ್.ವಿ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ್ ಎಸ್.ದರಗದ, ರಾಯಚೂರು ಲೋಕಾಯುಕ್ತ ಎಸ್.ಪಿ.ಸತೀಶ್ ಎಸ್.ಚಿಟಗುಬ್ಬಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ಸೇರಿದಂತೆ ಅನೇಕರು ಇದ್ದರು.
ಸೌಲಭ್ಯಗಳ ’ಬೆಳಕು’ ಕಂಡು ಸಾರ್ವಜನಿಕರು
ಕೊಪ್ಪಳ: ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಕರಣಗಳನ್ನು ವೀರಪ್ಪ ಅವರು ಸ್ಥಳದಲ್ಲಿಯೇ ಪರಿಹರಿಸಿದರೆ ಕೆಲವರಿಗೆ ಪಿಂಚಣಿ ಸೌಲಭ್ಯ ಒದಗಿಸಿದರೆ ಇನ್ನೂ ಕೆಲವರಿಗೆ ಕಾಲಾವಕಾಶ ನೀಡಿ ಕಾಲಮಿತಿಯೊಳಗೆ ಕೆಲಸ ಮುಗಿಸುವಂತೆ ತಾಕೀತು ಮಾಡಿದರು. ತಪ್ಪು ಮಾಹಿತಿ ನೀಡಿದವರು ಸರಿಯಾದ ಸಮಯಕ್ಕೆ ಕೆಲಸ ಮಾಡಿಕೊಡದವರು ವಿನಾಕಾರಣ ವಿಳಂಬ ಮಾಡುತ್ತಿರುವ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಅವರು ಕೆಲ ಸಾರ್ವಜನಿಕರಿಗೆ ತಮಗೆ ಲಭಿಸಬೇಕಿದ್ದ ಸೌಲಭ್ಯಗಳನ್ನು ಒದಗಿಸಿಕೊಟ್ಟು ಜನರಲ್ಲಿ ಭರವಸೆ ಮೂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.