ADVERTISEMENT

ಕೊಪ್ಪಳ: ಬೇಡಿಕೆಗಳ ಈಡೇರಿಕೆಗೆ ಧರಣಿ ಆರಂಭ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 6:56 IST
Last Updated 1 ನವೆಂಬರ್ 2025, 6:56 IST
ಕೊಪ್ಪಳದ ಅಶೋಕ ವೃತ್ತದಲ್ಲಿ ಶುಕ್ರವಾರ ಜಿಲ್ಲಾ ಬಚಾವೊ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು
ಕೊಪ್ಪಳದ ಅಶೋಕ ವೃತ್ತದಲ್ಲಿ ಶುಕ್ರವಾರ ಜಿಲ್ಲಾ ಬಚಾವೊ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು   

Protest begins for fulfillment of various demands

ಕೊಪ್ಪಳ: ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ನೀಡಬಾರದು ಎಂಬುದೂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಚಾವೊ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ಸಮಿತಿ ಇಲ್ಲಿನ ನಗರಸಭೆ ಸಂಕೀರ್ಣದ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಶುಕ್ರವಾರ ಆರಂಭಿಸಿತು.

ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಮಾತನಾಡಿ, ‘ಉದ್ಯೋಗ ಸೃಷ್ಟಿ ಮಾಡಲು ಕಾರ್ಖಾನೆಗಳೇ ಬೇಕು ಎಂದೇನಿಲ್ಲ. ಅವುಗಳಿಂದ ಎಲ್ಲಾ ಸಮಸ್ಯೆ ಪರಿಹಾರ ಆಗಿದೆ ಎಂಬುದು ಕೇವಲ ಭ್ರಮೆ. ಹಣದ ಲೆಕ್ಕದಲ್ಲಿ ಜನರಿಗೆ ಬದುಕು ಸಿಗುವುದಿಲ್ಲ. ಉದ್ಯೋಗಕ್ಕಿಂತ ಮೊದಲು ಆರೋಗ್ಯ ಹಾಗೂ ಬದುಕು ಮುಖ್ಯ’ ಎಂದರು.

ADVERTISEMENT

‘ಕಲ್ಯಾಣಿ, ಕಿರ್ಲೋಸ್ಕರ್, ಮುಕುಂದ ಸುಮಿ, ಎಕ್ಸ್ ಇಂಡಿಯಾ ಹಾಗೂ ಬಲ್ಡೋಟಾ ಈ ಎಲ್ಲ ಕಾರ್ಖಾನೆಗಳು ವಿಸ್ತರಣೆಗೆ ಮುಂದಾಗಿದ್ದಕ್ಕೆ ನಮ್ಮ ವಿರೋಧವಿದೆ’ ಎಂದು ಹೋರಾಟಗಾರರು ಹೇಳಿದರು.

ರೈತ ಚಳವಳಿಯ ನಾಯಕ ಚಾಮರಸ ಮಾಲಿಪಾಟೀಲ್ ಮಾತನಾಡಿ, ‘ಕಾರ್ಖಾನೆಗಳಿಂದ ಬರುತ್ತಿರುವ ದೂಳು ಮತ್ತು ಹೊಗೆಯಿಂದ ಪರಿಸರ ವಿನಾಶವಾಗಿದೆ. ಬೆಳೆ ವಿಷಕಾರಿಯಾಗಿವೆ. ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೋರಾಟಕ್ಕೆ ಕೊಟ್ಟ ಚಾಲನೆ ನಿಲ್ಲಿಸಬಾರದು’ ಎಂದು ಮನವಿ ಮಾಡಿದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಅಶೋಕ ವೃತ್ತದಲ್ಲಿ ಪ್ರತಿಭಟನಾರ್ಥವಾಗಿ ಘೋಷಣೆ ಕೂಗಿ ಅಲ್ಲಿಂದ ಮೆರವಣಿಗೆ ಮೂಲಕ ನಗರಸಭೆ ಮುಂದೆ ಬಂದು ಧರಣಿ ನಡೆಸಿದರು.

ಸಾಹಿತಿ ಎ.ಎಂ. ಮದರಿ, ಮಹಿಳಾ ಹೋರಾಟಗಾರ್ತಿ ಶಶಿಕಲಾ, ಜಂಟಿ ಕ್ರಿಯಾ ವೇದಿಕೆ ಹೋರಾಟ ಸಂಚಾಲಕ ಕೆ. ಬಿ. ಗೋನಾಳ, ಡಿ. ಎಚ್. ಪೂಜಾರ, ಕಾಂಗ್ರೆಸ್‌ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ, ಮಂಜುನಾಥ ಜಿ. ಗೊಂಡಬಾಳ, ಮಹಾಂತೇಶ ಕೊತಬಾಳ, ನಜೀರಸಾಬ್ ಮೂಲಿಮನಿ, ಶರಣು ಗಡ್ಡಿ, ಎಸ್.ಎ.ಗಫಾರ್, ಬಸವರಾಜ ಶೀಲವಂತರ, ಎಸ್.ಬಿ. ರಾಜೂರ, ರವಿ ಕಾಂತನವರ, ಚಿಟ್ಟಿಬಾಬು ಸಿಂಧನೂರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Highlights - null

Quote - ಹಲವು ತಿಂಗಳಿನಿಂದ ಹೋರಾಟ ನಡೆದಿದ್ದು ನಿರಂತರವಾಗಿ ನಡೆಯಲಿದೆ. ಜಿಲ್ಲಾಕೇಂದ್ರದ ಕೂಗಳತೆ ದೂರದಲ್ಲಿ ಕಾರ್ಖಾನೆಗಳು ಬರುತ್ತಿರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಅಲ್ಲಮಪ್ರಭು ಬೆಟ್ಟದೂರು ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.