ADVERTISEMENT

ಕುಕನೂರು | ಫುಟ್‌ಪಾತ್‌ನಲ್ಲಿ ವ್ಯಾಪಾರ; ಪರದಾಟ

ಹಲವೆಡೆ ರಸ್ತೆ ಆವರಿಸಿದ ಅಂಗಡಿಗಳ ವಹಿವಾಟು; ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಕುತ್ತು

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 6:46 IST
Last Updated 16 ಜೂನ್ 2025, 6:46 IST
ಕುಕನೂರಿನ ಬಸ್ ನಿಲ್ದಾಣದ ಎದುರಿನ ಅಂಗಡಿಗಳ ವಹಿವಾಟಿನಿಂದ ಸಾರ್ವಜನಿಕರು ನಡು ರಸ್ತೆಯಲ್ಲೆ ಸಂಚರಿಸಿದರು
ಕುಕನೂರಿನ ಬಸ್ ನಿಲ್ದಾಣದ ಎದುರಿನ ಅಂಗಡಿಗಳ ವಹಿವಾಟಿನಿಂದ ಸಾರ್ವಜನಿಕರು ನಡು ರಸ್ತೆಯಲ್ಲೆ ಸಂಚರಿಸಿದರು   

ಕುಕನೂರು: ಬೀದಿ ಬದಿ ವ್ಯಾಪಾರಸ್ಥರಿಂದ ಪಟ್ಟಣದಲ್ಲಿ ಪಾದಚಾರಿ ಮಾರ್ಗ ಇದ್ದರೂ ಇಲ್ಲದಂತಾಗಿದೆ!

ಹೂವು-ಹಣ್ಣು, ಚಹಾದ ಅಂಗಡಿ, ಪಾನಿಪೂರಿ, ಗೋಬಿ ಮಂಚೂರಿ, ಮಿರ್ಚಿ ಭಜಿ, ಎಗ್‌ರೈಸ್ ಸೇರಿದಂತೆ ವಿವಿಧ ವ್ಯಾಪಾರಿಗಳು ಫುಟ್‌ಪಾತ್‌ನಲ್ಲೇ ಸಣ್ಣ–ಪುಟ್ಟ ಉದ್ಯೋಗ ನಡೆಸುತ್ತ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಅವರ ವ್ಯಾಪಾರ ಚಟುವಟಿಕೆಗಳಿಂದ ಪಾದಚಾರಿ ಮಾರ್ಗ ಕಾಣೆಯಾಗಿ, ಜನರ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಫುಟ್‌ಪಾತ್‌ಗೆ ಹೊಂದಿಕೊಂಡು ಸಾಲು–ಸಾಲು ದ್ವಿಚಕ್ರ ವಾಹನಗಳು ಸೇರಿದಂತೆ ಇತರೆ ವಾಹನ ನಿಲ್ಲುತ್ತಿವೆ. ಇದರಿಂದ ಪಾದಚಾರಿಗಳು ನಡುರಸ್ತೆಯಲ್ಲೇ ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಪಟ್ಟಣ ಪಂಚಾಯಿತಿಯಿಂದ ಬಸ್ ನಿಲ್ದಾಣದವರೆಗೆ ಪಾದಚಾರಿಗಳಿಗೇ ಮಾರ್ಗವೇ ಇಲ್ಲ.

‘ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬೇಕೆಂಬ ಹಂಬಲದೊಂದಿಗೆ ರಸ್ತೆ ಬದಿ ಸಂಜೆ ಮಿರ್ಚಿ ಭಜಿ ಮಾರುತ್ತಿರುವೆ. ಇದರಿಂದ ನೂರಾರು ರೂಪಾಯಿ ಸಂಪಾದಿಸುತ್ತಿದ್ದು, ಕುಟುಂಬ ಸದಸ್ಯರು ನೆಮ್ಮದಿಯ ಜೀವನ ಸಾಗಿಸುವಂತಾಗಿದೆ’ ಎಂದು ವ್ಯಾಪಾರಿಯೊಬ್ಬರು ಕೃತಜ್ಞರಾಗಿ ಹೇಳುತ್ತಾರೆ.

ADVERTISEMENT

‘ರಸ್ತೆಯ ಬದಿಯ ಎಗ್ ರೈಸ್ ಅಂಗಡಿಗಳಿಂದ ರಸ್ತೆಯಲ್ಲಿ ತಿರುಗಾಡುವ ಪ್ರಯಾಣಿಕರಿಗೆ ಬಹಳ ತೊಂದರೆಯಾಗುತ್ತಿದೆ. ಜನರ ಕಣ್ಣಿಗೆ ಎಗ್‌ರೈಸ್‌ಗೆ ಬಳಸುವ ಕಾರದ ಪುಡಿ ಬೀಳುತ್ತಿದೆ. ಬಸ್ ನಿಲ್ದಾಣದ ಮುಂದೆ ಇರುವ ಎಗ್ ರೈಸ್ ಅಂಗಡಿಗಳ ಒಗ್ಗರಣೆಯ ಹಸಿವಾಸನೆಯಿಂದಲೂ ಕಿರಿಕಿರಿಯಾಗುತ್ತಿದೆ’ ಎಂದು ಪ್ರಯಾಣಿಕರೊಬ್ಬರು ಬೇಸರಿಸಿದರು.

‘ಫುಟ್‌ಪಾತ್‌ ನೆಚ್ಚಿ ನೂರಾರು ಜನರು ಬದುಕು ಕಟ್ಟಿಕೊಂಡಿದ್ದಾರೆ. ಅವರಿಗೆ ಅನ್ಯಾಯ ಆಗದಂತೆ ವಿಶಾಲ ಬಯಲು ಜಾಗಗಳನ್ನು ಗುರುತಿಸಿ ಗೂಡಂಗಡಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು. ಭವಿಷ್ಯದ ದೃಷ್ಟಿಯಿಂದ ಫುಟ್‌ಪಾತ್‌ ಅನ್ನು ಪಾದಚಾರಿಗಳ ಓಡಾಟಕ್ಕೆ ಮುಕ್ತಗೊಳಿಸಿಕೊಡಬೇಕು. ವಾಹನಗಳ ನಿಲುಗಡೆಗೆ ನಿರ್ದಿಷ್ಟ ಸ್ಥಳ ಗುರುತಿಸುವ ಕೆಲಸ ಆಗಬೇಕು’ ಎಂದು ಪಟ್ಟಣದ ನಿವಾಸಿ ಶಂಕರ ಭಂಡಾರಿ ಒತ್ತಾಯಿಸಿದರು.

ಕುಕನೂರು ಪಟ್ಟಣದ ರಸ್ತೆ ಬದಿ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ತಿಳಿ ಹೇಳಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿ ಕೊಡಲಾಗುವುದು

-ನಬೀಸಾಬ್ ಕಂದಗಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.