ADVERTISEMENT

ದತ್ತು ಮಗುವಿಗೆ ಕಾದಿರುವ 2,271 ಪೋಷಕರು

ರಾಜ್ಯದಲ್ಲಿ ಕೇವಲ 79 ಮಕ್ಕಳ ಲಭ್ಯತೆ: ಕನಿಷ್ಠ 2 ರಿಂದ 3 ವರ್ಷ ಕಾಯುವ ಪರಿಸ್ಥಿತಿ

ಸಿದ್ದು ಆರ್.ಜಿ.ಹಳ್ಳಿ
Published 14 ನವೆಂಬರ್ 2025, 2:21 IST
Last Updated 14 ನವೆಂಬರ್ 2025, 2:21 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಮಂಡ್ಯ: ಮಕ್ಕಳಿಲ್ಲದ ದಂಪತಿ ದತ್ತು ಮಗುವನ್ನು ಪಡೆಯಲು ಕನಿಷ್ಠ ಎರಡರಿಂದ ನಾಲ್ಕು ವರ್ಷಗಳವರೆಗೆ ಕಾಯಬೇಕಾದ ಪರಿಸ್ಥಿತಿ ಇದೆ. ಕಾರಣ, ರಾಜ್ಯದಲ್ಲಿ ಪ್ರಸ್ತುತ 79 ಮಕ್ಕಳು ಮಾತ್ರ ದತ್ತು ಪ್ರಕ್ರಿಯೆಗೆ ಲಭ್ಯವಿದ್ದು, ಬರೋಬ್ಬರಿ 2,271 ಪೋಷಕರು ಕಾಯುತ್ತಿದ್ದಾರೆ. 

ರಾಜ್ಯ ದತ್ತು ಸಂಪನ್ಮೂಲ ಸಂಸ್ಥೆಯು (SARA) ದತ್ತು ಸ್ವೀಕಾರ ಕಾರ್ಯಕ್ರಮವನ್ನು ನಿರ್ವಹಣೆ ಮಾಡುತ್ತಿದ್ದು, ಮಕ್ಕಳಿಗೆ ಶಾಶ್ವತ ಕುಟುಂಬ ವ್ಯವಸ್ಥೆಯನ್ನು ಒದಗಿಸಲು ಸಹಾಯ ಮಾಡುತ್ತಿದೆ. ರಾಜ್ಯದ 31 ಜಿಲ್ಲೆಗಳಲ್ಲಿ 21 ಸರ್ಕಾರಿ ಮತ್ತು 24 ಎನ್‌ಜಿಒ ಸೇರಿದಂತೆ ಒಟ್ಟು 45 ವಿಶೇಷ ದತ್ತು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.  

ದತ್ತು ಪ್ರಕ್ರಿಯೆಯು ಅನಾಥ, ಪರಿತ್ಯಕ್ತ ಮತ್ತು ನಿರ್ಗತಿಕ ಮಕ್ಕಳಿಗೆ ಪುನರ್ವಸತಿಗೆ ಸಹಾಯ ಮಾಡುವ ಕಾನೂನು ಬದ್ಧ ಕಾರ್ಯಕ್ರಮವಾಗಿದೆ. ಅನಾಥ, ಪರಿತ್ಯಕ್ತ, ಕಳ್ಳಸಾಗಾಣಿಕೆಗೆ ಗುರಿಯಾಗುವ ಮತ್ತು ಹೆತ್ತವರಿಗೆ ಬೇಡವಾದ ಮಕ್ಕಳು ಕಂಡು ಬಂದಲ್ಲಿ ವಿಶೇಷ ದತ್ತು ಕೇಂದ್ರಗಳ ಮುಂಭಾಗದಲ್ಲಿ ಸ್ಥಾಪಿಸಲಾಗಿರುವ ‘ಮಮತೆಯ ತೊಟ್ಟಿಲು’ಗಳಲ್ಲಿ ಬಿಡಲು ಅವಕಾಶ ಕಲ್ಪಿಸಲಾಗಿದೆ.

ADVERTISEMENT

ಹೆಣ್ಣು ಮಗುವಿಗೆ ಬೇಡಿಕೆ:

‘ದತ್ತು ಮಗು ಬಯಸುವ ದಂಪತಿ ‘ಸೆಂಟ್ರಲ್‌ ಅಡಾಪ್ಶನ್‌ ರೀಸೋರ್ಸ್‌ ಅಥಾರಿಟಿ’ (CARA) ಹಾಗೂ ‘ಮಿಷನ್‌ ವಾತ್ಸಲ್ಯ’ ಜಾಲತಾಣಗಳ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಮಗುವಿನ ಲಿಂಗತ್ವ, ವಯಸ್ಸು ಮತ್ತು ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ವಿಶೇಷವೆಂದರೆ, ದತ್ತು ಪ್ರಕ್ರಿಯೆಯಲ್ಲಿ 2 ವರ್ಷದೊಳಗಿನ ‘ಹೆಣ್ಣು ಮಗು’ ಬೇಕು ಎಂದು ಹೆಚ್ಚು ಅರ್ಜಿಗಳು ಬರುತ್ತವೆ’ ಎಂದು ಮಂಡ್ಯದ ವಿಕಸನ ಜೋಗುಳ ದತ್ತು ಸೇವಾ ಕೇಂದ್ರದ ಸಂಯೋಜಕಿ ಅನಸೂಯಾ ಮಾಹಿತಿ ನೀಡಿದರು. 

ವಿದೇಶಕ್ಕೆ 207 ಮಕ್ಕಳು: 

‘ದತ್ತು ಪ್ರಕ್ರಿಯೆ ಮೂಲಕ ಕಳೆದ ಎಂಟು ವರ್ಷಗಳಲ್ಲಿ 1704 ಮಕ್ಕಳು ದೇಶದೊಳಗಡೆ ‘ಸ್ವದೇಶಿ ದತ್ತು’ ಆಗಿವೆ. 207 ಮಕ್ಕಳು ಬೆಲ್ಜಿಯಂ, ದುಬೈ, ಸ್ಪೇನ್‌, ಸಿಂಗಾಪುರ ಸೇರಿದಂತೆ ವಿದೇಶಿ ಪೋಷಕರ ಮಡಿಲು ಸೇರಿವೆ. ಕಳೆದ ಐದು ವರ್ಷಗಳಲ್ಲಿ ವಿಶೇಷ ಕಾಳಜಿ ಅಗತ್ಯವಿರುವ ಮಕ್ಕಳನ್ನು ಸ್ವದೇಶಿಯರು 21 ಮತ್ತು ವಿದೇಶಿಯರು 108 ಮಕ್ಕಳನ್ನು ದತ್ತು ಪಡೆದಿದ್ದಾರೆ. ಅಂಗವೈಕಲ್ಯ ಹೊಂದಿರುವ ಮಕ್ಕಳನ್ನೂ ವಿದೇಶಿಯರು ಪ್ರೀತಿಯಿಂದ ದತ್ತು ಪಡೆದು, ಉತ್ತಮ ಚಿಕಿತ್ಸೆ ಕೊಡಿಸಿ ಆರೈಕೆ ಮಾಡುತ್ತಿದ್ದಾರೆ’ ಎನ್ನುತ್ತಾರೆ ಅಧಿಕಾರಿಗಳು. 

‘ತೊಟ್ಟಿಗಲ್ಲ ಮಮತೆಯ ತೊಟ್ಟಿಲಿಗೆ’ 

‘ಮಗು ಬೇಡವಾದಲ್ಲಿ ಕಸದ ತೊಟ್ಟಿ ಆಸ್ಪತ್ರೆ ಆವರಣ ಶೌಚಾಲಯ ರಸ್ತೆ ಬದಿ ಹಾಗೂ ಪೊದೆಗಳಲ್ಲಿ ಬಿಸಾಡಿ ಎಳೆಯ ಜೀವಗಳನ್ನು ಹಿಂಸಿಸಬೇಡಿ. ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿ ಇರುವ ವಿಶೇಷ ಮಮತೆಯ ತೊಟ್ಟಿಲುಗಳಲ್ಲಿ ಮಕ್ಕಳನ್ನು ಬಿಡಿ. ಜಿಲ್ಲೆಯಲ್ಲಿರುವ ಬಾಲಮಂದಿರ ದತ್ತು ಕೇಂದ್ರ ಆಸ್ಪತ್ರೆ ಮುಂಭಾಗದಲ್ಲಿ ಮಮತೆಯ ತೊಟ್ಟಿಲು ಇಡಲಾಗಿದೆ. ಇಂಥ ಮಕ್ಕಳು ಕಂಡುಬಂದರೆ ಉಚಿತ ಮಕ್ಕಳ ಸಹಾಯವಾಣಿ 1098/112ಗೆ ಕರೆ ಮಾಡಿ ತಿಳಿಸಿ. ಮಾಹಿತಿ ನೀಡಿದವರ ಹೆಸರನ್ನು ಗೋಪ್ಯವಾಗಿ ಇಡಲಾಗುವುದು’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ ಎಸ್‌. ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.