
ಮಂಡ್ಯ: ಜಿಲ್ಲೆಯಲ್ಲಿ ನಾಲ್ಕು ತಿಂಗಳಲ್ಲಿ (ಜನವರಿಯಿಂದ ಏಪ್ರಿಲ್ ಅಂತ್ಯದವರೆಗೆ) ಬರೋಬ್ಬರಿ 6,900 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದು, ಇವರಲ್ಲಿ ಬಹುತೇಕರು ‘ಮಕ್ಕಳು’ ಎಂಬುದು ಆಘಾತಕಾರಿ ಸಂಗತಿಯಾಗಿದೆ.
ಬೀದಿನಾಯಿಗಳ ಹಾವಳಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಮಿತಿ ಮೀರಿದ್ದು, ಮಕ್ಕಳ ಮೇಲೆ ದಾಳಿ ನಡೆಸುತ್ತಿರುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಆಟವಾಡುವ ಮಕ್ಕಳು ಮತ್ತು ಶಾಲೆಗೆ ಹೋಗುವ ವಿದ್ಯಾರ್ಥಿಗಳನ್ನು ಬೆನ್ನತ್ತಿ ಬೀದಿನಾಯಿಗಳು ಕಚ್ಚುತ್ತಿವೆ. ಇದರಿಂದ ಪೋಷಕರು ಚಿಕ್ಕ ಮಕ್ಕಳನ್ನು ಒಂಟಿಯಾಗಿ ಹೊರಗಡೆ ಕಳುಹಿಸಲು ಬೆಚ್ಚಿ ಬೀಳುವಂತಾಗಿದೆ.
ಪ್ರಸಕ್ತ ವರ್ಷ ಜನವರಿಯಲ್ಲಿ 1680, ಫೆಬ್ರುವರಿಯಲ್ಲಿ 1558, ಮಾರ್ಚ್‌ನಲ್ಲಿ 1816 ಹಾಗೂ ಏಪ್ರಿಲ್‌ನಲ್ಲಿ 1846 ನಾಯಿ ಕಡಿತ ಪ್ರಕರಣಗಳು ಆರೋಗ್ಯ ಇಲಾಖೆ ಕಡತದಲ್ಲಿ ದಾಖಲಾಗಿವೆ. 2023ರಲ್ಲಿ 14,016 ಮಂದಿಗೆ ನಾಯಿ ಕಡಿತವಾಗಿದ್ದರೆ, 2024ರಲ್ಲಿ ಬರೋಬ್ಬರಿ 18,355 ಮಂದಿ ನಾಯಿ ದಾಳಿಗೆ ಗುರಿಯಾಗಿದ್ದರು. ವರ್ಷದಿಂದ ವರ್ಷಕ್ಕೆ ಪ್ರಕರಣಗಳು ಏರಿಕೆಯಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ರೇಬಿಸ್ ಆತಂಕ: ನಾಯಿ ಕಡಿತದಿಂದ ಉಂಟಾಗುವ ರೇಬಿಸ್‌ನಿಂದ ದೇಶದಲ್ಲಿ ಪ್ರತಿವರ್ಷ 18 ಸಾವಿರದಿಂದ 20 ಸಾವಿರ ಸಾವುಗಳು ಸಂಭವಿಸುತ್ತವೆ ಎಂದು ಅಧ್ಯಯನಗಳು ತಿಳಿಸುತ್ತವೆ. ಇವುಗಳಲ್ಲಿ ಶೇ 30ರಿಂದ 60ರಷ್ಟು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಂಭವಿಸುತ್ತಿವೆ.
‘ನಾಯಿ ಕಡಿತಕ್ಕೆ ನೀಡುವ ಔಷಧಗಳಾದ ಎಆರ್‌ವಿ (2170 ಶೀಶ) ಮತ್ತು ರಿಗ್ ಚುಚ್ಚುಮದ್ದು (781) ಸಾಕಷ್ಟು ದಾಸ್ತಾನು ಇದೆ. ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ನಾಯಿ ಕಡಿತದಿಂದ ಯಾವುದೇ ಸಾವುಗಳು ಸಂಭವಿಸಿಲ್ಲ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್ ಮಾಹಿತಿ ನೀಡಿದ್ದಾರೆ.
1256 ಮಂದಿಗೆ ಹಾವು ಕಡಿತ: ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 1256 ಮಂದಿ ಹಾವು ಕಡಿತಕ್ಕೆ ಒಳಗಾಗಿದ್ದು, ಇವರಲ್ಲಿ ಬಹುತೇಕರು ರೈತರಾಗಿದ್ದಾರೆ.
ಹೊಲ, ಗದ್ದೆ, ತೋಟಗಳಲ್ಲಿ ಕೆಲಸ ಮಾಡುವ ವೇಳೆ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಹಾವು ಕಚ್ಚಿರುವ ಘಟನೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇವೆ. ಮೂರು ವರ್ಷಗಳಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ತುರ್ತು ಸಂದರ್ಭಗಳಲ್ಲಿ ಬೇಕಿರುವ ಔಷಧಗಳು ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನಿರಬೇಕು. ಪರಿಶೀಲಿಸಲು ಟಿಎಚ್‌ಒಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ – ಕುಮಾರ ಜಿಲ್ಲಾಧಿಕಾರಿ ಮಂಡ್ಯ
ತುರ್ತು ಸಂದರ್ಭಗಳಲ್ಲಿ ಬೇಕಿರುವ ಔಷಧಗಳು ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನಿರಬೇಕು. ಪರಿಶೀಲಿಸಲು ಟಿಎಚ್‌ಒಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ– ಕುಮಾರ ಜಿಲ್ಲಾಧಿಕಾರಿ ಮಂಡ್ಯ
ನಾಯಿ ಕಡಿತ ಮತ್ತು ಹಾವು ಕಡಿತಕ್ಕೆ ತಾಲ್ಲೂಕು ಆಸ್ಪತ್ರೆಗಳಲ್ಲಿ ಸಾಕಷ್ಟು ಔಷಧ ದಾಸ್ತಾನು ಇದೆ. ಸಕಾಲದಲ್ಲಿ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚಿಸಲಾಗಿದೆ– ಡಾ.ಕೆ.ಮೋಹನ್ ಡಿಎಚ್‌ಒ ಮಂಡ್ಯ
‘ಜಾಗೃತ ದಳ ರಚಿಸಿ ಮಕ್ಕಳನ್ನು ರಕ್ಷಿಸಿ’
‘ಬೀದಿನಾಯಿಗಳ ಕಡಿತಕ್ಕೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ತುತ್ತಾಗುತ್ತಿರುವುದು ಆಘಾತಕಾರಿ ವಿಷಯ. ಮದ್ದೂರು ತಾಲ್ಲೂಕು ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಸಮರ್ಪಕ ಚಿಕಿತ್ಸೆ ನೀಡಿದ್ದರೆ ಗೊರವನಹಳ್ಳಿಯ ರಿತೀಕ್ಷಾ (3) ಎಂಬ ಮಗುವಿನ ಜೀವ ಉಳಿಯುತ್ತಿತ್ತು. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಶು ಸಂಗೋಪನಾ ಇಲಾಖೆ ಸಹಯೋಗದಲ್ಲಿ ‘ಜಾಗೃತ ದಳ’ ರಚನೆಯಾಗಬೇಕು. ಬೀದಿನಾಯಿಗಳ ನಿಯಂತ್ರಣಕ್ಕೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಬೇಕು. ಮಾಂಸದ ಅಂಗಡಿಗಳ ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿಯಾಗಬೇಕು’ ಎಂದು ಸಿಐಟಿಯು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.