ADVERTISEMENT

ನಾಲೆ ಅಭಿವೃದ್ಧಿಗೆ ದುಡ್ಡಿಲ್ಲ ಎನ್ನುವ ಸರ್ಕಾರ: ಆರ್.ಅಶೋಕ

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 13:52 IST
Last Updated 12 ಜೂನ್ 2025, 13:52 IST
ಎನ್‌.ಶಂಕರೇಗೌಡ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ದ್ವಿಚಕ್ರ ವಾಹನ ಸವಾರಿಗೆ ಉಚಿತವಾಗಿ ಹೆಲ್ಮೆಟ್‌ ನೀಡುತ್ತಿದ್ದು, ಇದರ ಭಾಗವಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಂಡ್ಯ ನಗರದಲ್ಲಿ ವಿವಿಧ ಕಂಪನಿಗಳ ಹೆಲ್ಮೆಟ್‌ ಸೆಲೆಕ್ಷನ್‌ ಮಾಡಿದರು
ಎನ್‌.ಶಂಕರೇಗೌಡ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ದ್ವಿಚಕ್ರ ವಾಹನ ಸವಾರಿಗೆ ಉಚಿತವಾಗಿ ಹೆಲ್ಮೆಟ್‌ ನೀಡುತ್ತಿದ್ದು, ಇದರ ಭಾಗವಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಂಡ್ಯ ನಗರದಲ್ಲಿ ವಿವಿಧ ಕಂಪನಿಗಳ ಹೆಲ್ಮೆಟ್‌ ಸೆಲೆಕ್ಷನ್‌ ಮಾಡಿದರು   

ಮಂಡ್ಯ: ‘ಜಿಲ್ಲೆಯಲ್ಲಿ ನಾಲೆಗಳ ಅಭಿವೃದ್ಧಿ ಮಾಡಲು ದುಡ್ಡಿಲ್ಲ ಎಂದು ಹೇಳುವ ರಾಜ್ಯ ಸರ್ಕಾರ ರೈತರ ವಿರೋಧದ ನಡುವೆಯೂ ಪರಿಸರ ಹಾಳು ಮಾಡುವ ಅಮ್ಯೂಸ್‌ಮೆಂಟ್‌ ಪಾರ್ಕ್‌ ನಿರ್ಮಾಣ ಮತ್ತು ಕಾವೇರಿ ಆರತಿ ಮಾಡಲು ಮುಂದಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕಿಸಿದರು.

ನಗರದಲ್ಲಿ ಎನ್‌.ಶಂಕರೇಗೌಡ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ದ್ವಿಚಕ್ರ ವಾಹನ ಸವಾರಿಗೆ ಉಚಿತವಾಗಿ 10 ಸಾವಿರ ಹೆಲ್ಮೆಟ್‌ ನೀಡುವ ಸಂಬಂಧ ವಿವಿಧ ಕಂಪನಿಗಳ ಹೆಲ್ಮೆಟ್‌ಗಳನ್ನು ಆಯ್ಕೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಕೆಆರ್‌ಎಸ್‌ನಲ್ಲಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ನಿರ್ಮಾಣಕ್ಕೆ ನಮ್ಮ ವಿರೋಧವಿದೆ. ಕಾವೇರಿ ಆರತಿಯನ್ನು ಪ್ರಚಾರ, ಆಡಂಬರಕ್ಕೆ ಮಾಡೋದಲ್ಲ. ಬೇರೆ ಜಾಗದಲ್ಲಿ ಉದ್ಯೋಗ ಸೃಷ್ಟಿ ಮಾಡಲಿ, ಮೊದಲು ಅಣೆಕಟ್ಟು ಸುರಕ್ಷತೆ ಮುಖ್ಯ’ ಎಂದರು.

ADVERTISEMENT

ಕಾವೇರಿ ಆರತಿ ಮಾಡಲೇಬೇಕಿಂದಿದ್ದರೆ ಇಲ್ಲಿನ ರೈತರ ಮನವೊಲಿಸಿ ಮಾಡಲಿ, ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿಯ ಹತ್ಯೆ ಮಾಡಿದವರು ಯಾರು? ಡಿ.ಕೆ.ಶಿವಕುಮಾರ್ ನಾನಲ್ಲ ಎನ್ನುತ್ತಾರೆ, ಮುಖ್ಯಮಂತ್ರಿಯೂ ನಾನಲ್ಲಾ ಎನ್ನುತ್ತಾರೆ, ಆದರೆ ಹತ್ಯೆಗೆ ಕಾರಣರಾದವರು ಯಾರು, ಏನೇ ಆಗಲಿ ಇವರಿಗೆ ಜನರ ಶಾಪ ತಟ್ಟೇ ತಟ್ಟುತ್ತದೆ’ ಎಂದು ಕಿಡಿಕಾರಿದರು.

‘ಗುಜರಾತ್ ವಿಮಾನ ದುರಂತ ಪ್ರಕರಣ ಹೃದಯ ಕಲಕುವ ಘಟನೆ. ಅಲ್ಲಿನ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಈ ಘಟನೆಯಿಂದ ಇಡೀ ದೇಶ ದಿಗ್ಭ್ರಮೆಗೊಂಡಿದೆ. ತನಿಖೆ ಬಳಿಕ ಉಗ್ರ ಕೃತ್ಯವೇ ಎಂಬುದು ಗೊತ್ತಾಗುತ್ತದೆ. ಸತ್ಯಾಂಶ ಹೊರಬಂದ ನಂತರ ಅದರ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ’ ಎಂದರು.

ಎನ್‌.ಶಂಕರೇಗೌಡ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಇಂಡುವಾಳು ಸಚ್ಚಿದಾನಂದ ಮಾತನಾಡಿ, ‘ಸದ್ಯಕ್ಕೆ ಹೆಲ್ಮೆಟ್‌ ಪರಿಶೀಲಿಸುವ ಕಾರ್ಯ ನಡೆದಿದ್ದು, ಈ ತಿಂಗಳ ಕೊನೆಯಲ್ಲಿ ಹತ್ತು ಸಾವಿರ ಹೆಲ್ಮೆಟ್‌ಗಳನ್ನು ಉಚಿತವಾಗಿ ನೀಡುವ ಮೂಲಕ ದ್ವಿಚಕ್ರ ವಾಹನ ಸವಾರರಿಗೆ ಕಾನೂನು ಅರಿವು ಹಾಗೂ ಜೀವ ರಕ್ಷಣೆ ಬಗ್ಗೆ ತಿಳಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.