
ಮದ್ದೂರು: ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನ ಬಳಿ ₹3.50 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆಡಿಟೋರಿಯಂ ನಿರ್ಮಾಣಕ್ಕೆ ಶಾಸಕ ಕೆ.ಎಂ. ಉದಯ್ ಬುಧವಾರ ಚಾಲನೆ ನೀಡಿದರು.
‘25 ವರ್ಷಗಳ ಇತಿಹಾಸವಿರುವ ಸರ್ಕಾರಿ ಮಹಿಳಾ ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗೆ ಮಹತ್ವದ ಹೆಜ್ಜೆ ಇಡಲಾಗಿದ್ದು, ಒಂದು ವರ್ಷದಿಂದ ಇದರ ಬಗ್ಗೆ ಆಲೋಚಿಸಿದ್ದು, ಅದಕ್ಕಾಗಿ ಶ್ರಮಿಸಿದ ಪರಿಣಾಮ ಇಂದು ಮಹತ್ವದ ಆಡಿಟೋರಿಯಂನ ನಿರ್ಮಾಣಕ್ಕೆ ಇಂದು ಚಾಲನೆ ನೀಡಿದ್ದೇನೆ’ ಎಂದರು.
‘ಉನ್ನತ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಗೃಹ ಮಂಡಳಿಯ ಸಹಯೋಗದೊಂದಿಗೆ ಅನುಮೋದನೆ ಪಡೆದು ಆಡಿಟೋರಿಯಂ ಹಾಗೂ ಹೆಚ್ಚುವರಿ ತರಗತಿ ಕೋಣೆಗಳ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಕಾಲೇಜಿನಲ್ಲಿ ಮೂಲಸೌಕರ್ಯಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದ್ದು, ಗ್ರಾಮೀಣ ಭಾಗದ ರೈತರ ಮಕ್ಕಳಿಗೆ ಸುಲಭವಾಗಿ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯುವ ಅವಕಾಶ ಇದರಿಂದ ಹೆಚ್ಚಾಗಲಿದೆ. ಮುಂದಿನ ದಿನಗಳಲ್ಲಿ ಈ ನಿರ್ಮಾಣ ಕಾರ್ಯಗಳು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಹಪಠ್ಯ ಚಟುವಟಿಕೆಗೆ ಹೆಚ್ಚಿನ ಉತ್ತೇಜನ ನೀಡಲಿವೆ’ ಎಂದರು.
ಪುರಸಭಾಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಪ್ರಸನ್ನ, ಪುರಸಭಾ ಸದಸ್ಯರಾದ ಸರ್ವಮಂಗಳ, ಸಚ್ಚಿನ್, ಸಿದ್ದರಾಜು, ಮನ್‌ಮುಲ್ ಸದಸ್ಯ ಹರೀಶ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆಲುವರಾಜು, ತಾಲ್ಲೂಕು ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶಂಕರೇಗೌಡ, ಕಾಲೇಜಿನ ಪ್ರಾಂಶುಪಾಲ ನಾರಾಯಣ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.