ADVERTISEMENT

ಮಳವಳ್ಳಿ: ಬೇಡಿಕೆಗಳ ಈಡೇರಿಕೆಗೆ ಕೃಷಿ ಕೂಲಿಕಾರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 14:19 IST
Last Updated 1 ಜುಲೈ 2025, 14:19 IST
ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮ ಪಂಚಾಯಿತಿ ಮುಂಭಾಗ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು 
ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮ ಪಂಚಾಯಿತಿ ಮುಂಭಾಗ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು    

ಮಳವಳ್ಳಿ: ನರೇಗಾ ಯೋಜನೆಯಡಿ ಸಮರ್ಪಕ ಕೂಲಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ಬಂಡೂರು ಗ್ರಾಮ ಪಂಚಾಯಿತಿ ಮುಂಭಾಗ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಳಗವಾದಿ ವಲಯ ಸಮಿತಿಯ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ನೂರಾರು ಸಂಖ್ಯೆಯಲ್ಲಿ ಸೇರಿದ ಕೂಲಿಕಾರರು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ ಮಾತನಾಡಿ, ಕಳೆದ ಮೂರು ತಿಂಗಳಲ್ಲಿ ಕೆಲವೇ ದಿನಗಳು ಕೂಲಿ ನೀಡಿ ಅದಕ್ಕೂ ಕಡಿಮೆ ಹಣ ಹಾಕಲಾಗಿದೆ. ಕೂಲಿಯನ್ನೇ ನಂಬಿ ಜೀವನ ನಡೆಸುವವರ ಸ್ಥಿತಿ ಏನಾಗಬೇಕು. ತಕ್ಷಣದಲ್ಲಿಯೇ ದಂಡದೊಡನೆ ಹಣ ಪಾವತಿಸಬೇಕು. ಗಟ್ಟಿಕೊಪ್ಪಲು ಗ್ರಾಮದಲ್ಲಿ ಸ್ಮಶಾನದ ದಾರಿ ಒತ್ತುವರಿಯಾಗಿರುವುದನ್ನು ತೆರವುಗೊಳಿಸಿ ಮೂಲ ಸೌಲಭ್ಯ ಕಲ್ಪಿಸಬೇಕು. ಪಂಚಾಯಿತಿ ವ್ಯಾಪ್ತಿಯ ಬೀದಿ ದೀಪಗಳನ್ನು ದುರಸ್ತಿಗೊಳಿಸಬೇಕು. ಚರಂಡಿಯ ಹೂಳು ತೆಗೆಸಬೇಕು. ಕುಡಿಯುವ ನೀರು ಕಲ್ಪಿಸಬೇಕು. ನಿವೇಶನ ರಹಿತರಿಗೆ ನಿವೇಶನ ಹಾಗೂ ಮನೆ ನೀಡಬೇಕು ಎಂದು ಒತ್ತಾಯಿಸಿದರು.

ನರೇಗಾ ₹600 ಕೂಲಿ ನೀಡಿ 200 ಮಾನವ ದಿನಗಳು ಕೆಲಸ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜು.4ರಂದು ಜಿಲ್ಲಾ ಪಂಚಾಯಿತಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಅಭಿವೃದ್ಧಿ ಅಧಿಕಾರಿ ಗಂಗಾಧರ್ ಮನವಿ ಸ್ವೀಕರಿಸಿ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗುವುದು ಎಂದರು.

ತಳಗವಾದಿ ವಲಯ ಸಮಿತಿ ಅಧ್ಯಕ್ಷ ರಾಮಯ್ಯ, ಪದಾಧಿಕಾರಿಗಳಾದ ಟಿ.ಎಚ್.ಆನಂದ್, ಕೆ.ಬಸವರಾಜು, ಮುಖಂಡರಾದ ಪುಟ್ಟಮಾದೇಗೌಡ, ಮಹದೇವು, ಕುಮಾರ್, ಗಿರಿಜಮ್ಮ, ಚನ್ನಾಜಮ್ಮ, ನಾಗೇಶ್, ಕಾಳಯ್ಯ, ಮಹದೇವು, ಲಲಿತಮ್ಮ, ಲೊಕೇಶ್, ಪ್ರಸನ್ನ, ಶಿವಣ್ಣ ಪಾಲ್ಗೊಂಡಿದ್ದರು.

ADVERTISEMENT

Highlights - ನರೇಗಾ ₹600 ಕೂಲಿ ನೀಡಬೇಕು 200 ದಿನಗಳ ಕೆಲಸ ನೀಡಬೇಕು ಸ್ಮಶಾನದ ದಾರಿ ಒತ್ತುವರಿ ತೆರವಾಗಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.