ADVERTISEMENT

ಮಂಡ್ಯ | ಪೌತಿಖಾತೆ ಆಂದೋಲನ ಬಳಸಿಕೊಳ್ಳಿ: ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 2:59 IST
Last Updated 12 ನವೆಂಬರ್ 2025, 2:59 IST
ಮಂಡ್ಯ ತಾಲ್ಲೂಕಿನ ಯಲಿಯೂರು ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಜನತಾ ದರ್ಶನದಲ್ಲಿ ಶಾಸಕ ಎ.ಬಿ. ರಮೇಶ್ ಬಂಡಿಸಿದ್ದೇಗೌಡ ಸಾರ್ವಜನಿಕರ ಅರ್ಜಿ ಸ್ವೀಕರಿಸಿದರು
ಮಂಡ್ಯ ತಾಲ್ಲೂಕಿನ ಯಲಿಯೂರು ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಜನತಾ ದರ್ಶನದಲ್ಲಿ ಶಾಸಕ ಎ.ಬಿ. ರಮೇಶ್ ಬಂಡಿಸಿದ್ದೇಗೌಡ ಸಾರ್ವಜನಿಕರ ಅರ್ಜಿ ಸ್ವೀಕರಿಸಿದರು   

ಮಂಡ್ಯ: ‘ಜನರಿಗೆ ಅನುಕೂಲವಾಗಲೆಂದು ಪೌತಿಖಾತೆ ಆಂದೋಲನವನ್ನು ಸರ್ಕಾರ ಮಾಡುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಿ’ ಎಂದು ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಸಲಹೆ ನೀಡಿದರು.

ತಾಲ್ಲೂಕಿನ ಯಲಿಯೂರು ಆಂಜನೇಯಸ್ವಾಮಿ ದೇವಾಲಯದಲ್ಲಿ ಕಂದಾಯ ಇಲಾಖೆ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಯಲಿಯೂರು ಗ್ರಾಮ ಪಂಚಾಯಿತಿ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಲಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 51 ಪೌತಿಖಾತೆ ಪ್ರಕರಣಗಳು ನ್ಯಾಯಾಲಯದಲ್ಲಿರುವುದು ತಿಳಿದು ಬಂದಿದೆ. ಇಂತಹ ಸಮಸ್ಯೆಗಳನ್ನು ತಾವೇ ಅಥವಾ ಅಧಿಕಾರಿಗಳ ಮೂಲಕ ಕುಳಿತು ಬಗೆಹರಿಸಿಕೊಂಡು ಒಂದು ದಿನಾಂಕ ನಿಗದಿ ಮಾಡಿ ಪೌತಿ ಖಾತೆ ಮಾಡಿಸಿಕೊಳ್ಳಿ’ ಎಂದರು.

ADVERTISEMENT

‘ಸರ್ಕಾರದ ಸೌಲಭ್ಯ ಹಾಗೂ ಸಹಾಯಧನ ಪಡೆಯಲು ಆರ್‌ಟಿಸಿ ಬೇಕು, ಅದಕ್ಕಾಗಿ ಸಂಬಂಧಪಟ್ಟವರು ತಮ್ಮ ವಾರಸುದಾರರೂ ಪೌತಿಖಾತೆ ಮಾಡಿಸಿಕೊಳ್ಳಿ, ರೈತ ಸಮುದಾಯ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಇಲಾಖಾ ಅಧಿಕಾರಿಗಳನ್ನು ಮನೆಬಾಗಿಲಿಗೆ ಬಂದು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಜನಸಂಪರ್ಕ ಸಭೆಯನ್ನು ನಡೆಸಲಾಗುತ್ತಿದೆ’ ಎಂದು ತಿಳಿಸಿದರು.‌

ಜನತಾ ದರ್ಶನದಲ್ಲಿ 50 ಅರ್ಜಿ ಸ್ವೀಕೃತವಾದವು, ಅದರಲ್ಲಿ ನಾಲ್ಕು ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಪಟ್ಟಿದ್ದು ಅವುಗಳನ್ನು ವಿಲೇಮಾರಿ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ಎಸ್.ವಿಶ್ವನಾಥ್, ತಾಲ್ಲೂಕು ಪಂಚಾಯಿತಿ ಇಒ ಲೋಕೇಶ್ ಮೂರ್ತಿ, ಎಡಿಎಲ್‌ಆರ್ ಮಮತಾ, ಸಹಾಯಕ ಕೃಷಿ ಅಧಿಕಾರಿ ಸುನಿತಾ, ಉಪ ತಹಶೀಲ್ದಾರ್ ಗೌರಮ್ಮ, ತಾಲ್ಲೂಕು ಆರೋಗ್ಯಾಧಿಕಾರಿ ಜವರೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಕುಮಾರ್, ಕಂದಾಯ ಅಧಿಕಾರಿ ವೆಂಕಟೇಶ್, ಪಿಡಿಒ ಸಿ.ಬಿ.ಪ್ರಸನ್ನ ಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.