
ಶ್ರೀರಂಗಪಟ್ಟಣ: ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ, ರಾಷ್ಟ್ರ ಮಟ್ಟದ ಒಂದು ಅಥವಾ ಎರಡು ಸ್ಪರ್ಧೆಯ ಸಾಧನೆ ಮಾಡುವುದೇ ದುಸ್ತರ. ಇದಕ್ಕೆ ಅಪವಾದ ಎಂಬಂತೆ ತಾಲ್ಲೂಕಿನ ಮೊಗರಹಳ್ಳಿಯ ದಿ ಆಕ್ಸ್‌ಫರ್ಡ್ ಶಾಲೆಯ ವಿದ್ಯಾರ್ಥಿ ಪುಣ್ಯಸ್ವರೂಪ ರಾಷ್ಟ್ರಮಟ್ಟದ ನಾಲ್ಕಾರು ಸ್ಪರ್ಧೆಗಳಲ್ಲಿ ಸ್ಥಾನ ಗಳಿಸುತ್ತಾ ಮಿಂಚು ಹರಿಸಿದ್ದಾರೆ.
ತಾಲ್ಲೂಕಿನ ಹೊಸ ಆನಂದೂರು ಗ್ರಾಮದ ಹನುಮಂತಾಚಾರಿ ಮತ್ತು ಕಲಾವತಿ ದಂಪತಿಯ ಪುತ್ರ ಪುಣ್ಯಸ್ವರೂಪ ಮೊಗರಹಳ್ಳಿಯ ದಿ ಆಕ್ಸ್‌ಫರ್ಡ್ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದು, 2024ನೇ ಸಾಲಿನಲ್ಲಿ ನಡೆದ ಕಾರ್ಫ್ ಬಾಲ್, ಫ್ಲೈಯಿಂಗ್ ಬಾಲ್, ವೇಯ್ಟ್ ಲಿಫ್ಟಿಂಗ್, ಫುಟ್‌ಬಾಲ್, ಬ್ಯಾಡ್ಮಿಂಟನ್, ಬಾಸ್ಟೆಕ್ ಬಾಲ್ ಮತ್ತು ಅಥ್ಲೆಟಿಕ್ಸ್‌ಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ.
ಪಂಜಾಬ್‌ನಲ್ಲಿ 2024ರಲ್ಲಿ ನಡೆದ 19ವರ್ಷದೊಳಗಿನವರ ರಾಷ್ಟ್ರಮಟ್ಟದ ಕಾರ್ಫ್ ಬಾಲ್ ಟೂರ್ನಿಯಲ್ಲಿ ಮೂರನೇ ಸ್ಥಾನ, ತೆಲಂಗಾಣದಲ್ಲಿ ನಡೆದ ಫ್ಲೈಯಿಂಗ್ ಟೂರ್ನಿಯಲ್ಲಿ ಮೂರನೇ ಸ್ಥಾನ, ಮೈಸೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಕಿರಿಯರ ವಿಭಾಗದ ಕೆಟಲ್‌ಬೆಲ್ (ವೇಯ್ಟ್ ಲಿಫ್ಟಿಂಗ್) ವಿಭಾಗದ ಸಿಂಗಲ್ ಆರ್ಮ್ ಜರ್ಕ್ (8 ಕೆ.ಜಿ) ಮತ್ತು ಡಬಲ್ ಆರ್ಮ್ ಜರ್ಕ್ (16 ಕೆ.ಜಿ) ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಉತ್ತರಾಖಂಡದಲ್ಲಿ ಕಳೆದ ವರ್ಷ ನಡೆದ 16 ವರ್ಷ ಒಳಗಿನವರ ಸ್ಕಾರ್ಫ್ ಬಾಲ್ ಟೂರ್ನಿಯಲ್ಲಿ ಕೂಡ ಮೂರನೇ ಸ್ಥಾನ ಗಳಿಸಿದ್ದಾರೆ. 2024ರಲ್ಲಿ ರಾಜಸ್ತಾನದ ಜೈಪುರದಲ್ಲಿ ನಡೆದ ಡ್ಯೂ ಬಾಲ್ ಟೂರ್ನಿಯಲ್ಲಿ ಇವರಿಗೆ ಮೂರನೇ ಸ್ಥಾನ ಸಿಕ್ಕಿದೆ.
ಹರಿದ್ವಾರದಲ್ಲಿ 2026ರಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಆರ್ಚರಿ (70 ಮೀಟರ್) ಸ್ಪರ್ಧೆಗೆ ಪುಣ್ಯಸ್ವರೂಪ ಆಯ್ಕೆಯಾಗಿದ್ದಾರೆ. ಶಾಲಾ ಶಿಕ್ಷಣ ಇಲಾಖೆ ಕಳೆದ ವರ್ಷ ನಡೆಸಿದ ರಾಜ್ಯಮಟ್ಟದ ಫುಟ್‌ಬಾಲ್ ಟೂರ್ನಿಯಲ್ಲಿ ಗೋಲ್ ಕೀಪರ್ ಆಗಿ ಗಮನ ಸೆಳೆದಿದ್ದಾರೆ. ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕೂಟಗಳಲ್ಲಿ 100 ಮತ್ತು 200 ಮಿಟರ್ ಓಟದಲ್ಲಿ ಪ್ರಥಮ ಹಾಗೂ 400 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಭರವಸೆ ಮೂಡಿಸಿದ್ದಾರೆ.
‘ಪುಣ್ಯಸ್ವರೂಪ ಕ್ರೀಡೆಯಲ್ಲಿ ಮಾತ್ರವಲ್ಲದೆ ಓದಿನಲ್ಲೂ ಮುಂದೆ ಇದ್ದಾರೆ. ಪ್ರಸಕ್ತ ಸಾಲಿನಲ್ಲಿ ‘ಸ್ಟಾರ್ ಆಫ್ ದಿ ಸ್ಟೋಡೆಂಟ್ಸ್’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಆರ್ಚರಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಬೇಕು ಎಂಬ ಗುರಿ ಹೊಂದಿದ್ದು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ’ ಎಂದು ಪುಣ್ಯಸ್ವರೂಪ ಅವರ ತರಬೇತುದಾರ ಮನೋಹರ್ ಹೇಳುತ್ತಾರೆ.
‘ಸ್ಕಾರ್ಫ್ ಬಾಲ್, ಕೆಟಲ್‌ಬೆಲ್ ಮತ್ತು ಆರ್ಚರಿ ಸ್ಪರ್ಧೆಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂಬುದು ನನ್ನ ಹೆಬ್ಬಯಕೆ. ಅದಕ್ಕಾಗಿ ನಿರಂತರ ಅಭ್ಯಾಸದಲ್ಲಿ ತೊಡಗಿದ್ದೇನೆ. ಸೇನೆಗೆ ಸೇರಿ ದೇಶ ಸೇವೆ ಮಾಡಬೇಕು ಎಂಬ ಗುರಿ ನನ್ನದು’ ಎಂದು ಪುಣ್ಯಸ್ವರೂಪ ತಮ್ಮ ಮನದಾಸೆ ವ್ಯಕ್ತಪಡಿಸಿದ್ದಾರೆ. ಸಂಪರ್ಕಕ್ಕೆ ಮೊ:8660121520.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.