ADVERTISEMENT

ನ್ಯಾಯಾಲಯದಿಂದ ಹಿರಿಯ ನಾಗರಿಕರಿಗೆ ನ್ಯಾಯ: ನಾಜಿಯಾ ಕೌಸರ್

ವಿಶ್ವ ಹಿರಿಯರ ಮೇಲಿನ ದೌರ್ಜನ್ಯ ಜಾಗೃತಿ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 13:15 IST
Last Updated 24 ಜೂನ್ 2025, 13:15 IST
ಹಲಗೂರಿನ ಕುವೆಂಪು ಸಭಾಂಗಣದಲ್ಲಿ ನಡೆದ ವಿಶ್ವ ಹಿರಿಯರ ಮೇಲಿನ ದೌರ್ಜನ್ಯ ಜಾಗೃತಿ ದಿನಾಚರಣೆಯನ್ನು ಪ್ರಧಾನ ಸಿವಿಲ್ ನ್ಯಾಯಾಧೀಶೆ ನಾಜೀಯಾ ಕೌಸರ್ ಉದ್ಘಾಟಿಸಿದರು 
ಹಲಗೂರಿನ ಕುವೆಂಪು ಸಭಾಂಗಣದಲ್ಲಿ ನಡೆದ ವಿಶ್ವ ಹಿರಿಯರ ಮೇಲಿನ ದೌರ್ಜನ್ಯ ಜಾಗೃತಿ ದಿನಾಚರಣೆಯನ್ನು ಪ್ರಧಾನ ಸಿವಿಲ್ ನ್ಯಾಯಾಧೀಶೆ ನಾಜೀಯಾ ಕೌಸರ್ ಉದ್ಘಾಟಿಸಿದರು    

ಹಲಗೂರು: ಜೀವನದ ಸಂಧ್ಯಾಕಾಲದಲ್ಲಿ ಯಾರೂ ಕೈ ಹಿಡಿಯದಿದ್ದಾಗ, ಹಿರಿಯ ನಾಗರಿಕರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಲು ನ್ಯಾಯಾಲಯ ಮತ್ತು ಸರ್ಕಾರ ಸದಾ ಸಿದ್ಧವಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ನಾಜಿಯಾ ಕೌಸರ್ ತಿಳಿಸಿದರು.

ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಮಳವಳ್ಳಿ, ಪೊಲೀಸ್ ಇಲಾಖೆ ಮಳವಳ್ಳಿ ಮತ್ತು ಹಲಗೂರು ಗ್ರಾಮ ಪಂಚಾಯಿತಿ   ಸಂಯುಕ್ತ ಆಶ್ರಯದಲ್ಲಿ ಹಲಗೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಅವರಣದಲ್ಲಿರುವ ಕುವೆಂಪು ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಹಿರಿಯರ ಮೇಲಿನ ದೌರ್ಜನ್ಯ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಹಿರಿಯ ನಾಗರಿಕರು ಯಾವುದೇ ಬಗೆಯ ದೈಹಿಕ, ಮಾನಸಿಕ ಹಿಂಸೆಗೆ ಒಳಗಾದರೇ ನ್ಯಾಯಾಲಯಕ್ಕೆ ಬನ್ನಿ, ಅಗತ್ಯ ಉಳ್ಳವರಿಗೆ ಕಾನೂನು ಪ್ರಾಧಿಕಾರದ ವತಿಯಿಂದ ಉಚಿತವಾಗಿ ವಕೀಲರನ್ನು ನೇಮಿಸಿ, ನ್ಯಾಯ ದೊರಕಿಸಿಕೊಡಲು ಶ್ರಮಿಸಲಾಗುವುದು. ದೇಶದಲ್ಲಿ 2007ರಲ್ಲಿ ಹಿರಿಯ ನಾಗರಿಕರ ಹಕ್ಕುಗಳ ಕಾಯ್ದೆ ಜಾರಿಗೆ ಬಂದಿದೆ. 60 ವರ್ಷ ವಯಸ್ಸು ಮೇಲ್ಪಟ್ಟವರಿಗಾಗಿ ರಾಜ್ಯ ಮಟ್ಟದಲ್ಲಿ ಸಂಖ್ಯೆ 1090, ರಾಷ್ಟ್ರ ಮಟ್ಟದಲ್ಲಿ 145678 ಎರಡು ಉಚಿತ ಸಹಾಯವಾಣಿಗಳನ್ನು ತೆರೆದಿದೆ. ಅಗತ್ಯ ಉಳ್ಳವರು ಕರೆ ಮಾಡಿದರೇ ಹಿರಿಯರ ನೆರವಿಗೆ ನಿಲ್ಲಲಿದೆ’ ಎಂದರು.

ADVERTISEMENT

ಸರ್ಕಾರಿ ವಕೀಲ ಎಂ.ಎಸ್.ಶ್ರೀಕಂಠಸ್ವಾಮಿ ಮಾತನಾಡಿ, ‘ಹಿರಿಯರು ವಯಸ್ಸಾದ ನಂತರ ಮಕ್ಕಳನ್ನು ಪ್ರೀತಿ ಮಾಡುವ ಜೊತೆಗೆ ಅಲ್ಪ ಪ್ರಮಾಣದ ಆಸ್ತಿಯನ್ನಾದರೂ ನಿಮ್ಮ ಬಳಿ ಉಳಿಸಿಕೊಳ್ಳಬೇಕು. ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿ, ಸಮಾನ ಮನಸ್ಕರರು ಒಂದು ಗುಂಪು ರಚಿಸಿಕೊಂಡು ಕಷ್ಟ ಸುಖವನ್ನು ಹಂಚಿಕೊಂಡು ಮಾನಸಿಕವಾಗಿ ಹಗುರಾಗಿ, ಉತ್ತಮ ಜೀವನ ನಡೆಸಿ’ ಎಂದು ಕಿವಿಮಾತು ಹೇಳಿದರು.

ಪ್ಯಾನಲ್ ವಕೀಲ ಎಂ.ಪಿ.ಮೋಹನ್ ಕುಮಾರ್ ಮಾತನಾಡಿ, ‘ಹಿರಿಯರಿಗೆ ಸಂಧ್ಯಾ ಸುರಕ್ಷಾ ಮತ್ತು ವೃದ್ಧಾಪ್ಯ ಯೋಜನೆಯಡಿಯಲ್ಲಿ ಹಿರಿಯರಿಗೆ ಮಾಸಿಕ ₹1200 ಗೌರವಧನ, ಸಾರಿಗೆಯಲ್ಲಿ ಪ್ರಯಾಣಿಕರಿಗೆ ರಿಯಾಯಿತಿ, ಬ್ಯಾಂಕ್ ನಲ್ಲಿ ಅಕರ್ಷಕ ಬಡ್ಡಿದರ, ಉಚಿತ ಆರೋಗ್ಯ ತಪಾಸಣೆ ಸೌಲಭ್ಯಗಳಿದ್ದು, ಸದ್ಬಳಕೆ ಮಾಡಿಕೊಳ್ಳಿ’ ಎಂದು ಸಲಹೆ ನೀಡಿದರು.

ಹೆಚ್ಚುವರಿ ನ್ಯಾಯಾಧೀಶರಾದ ಕಾವ್ಯಶ್ರೀ ಹಲಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆರ್.ಶಶಿಕಲಾ, ಉಪಾಧ್ಯಕ್ಷೆ ಸಿ.ಲತಾ, ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್, ಪಿಎಸ್ಐ ಲೋಕೇಶ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಚಂದಿಲ್, ಕಾರ್ಯದರ್ಶಿ ಶಿವಕುಮಾರ್, ಸೇರಿದಂತೆ ನೂರಾರು ಹಿರಿಯ ನಾಗರೀಕರು ಭಾಗವಹಿಸಿದ್ದರು.

ಸರ್ಕಾರ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಹಿರಿಯರಿಗಾಗಿ ‘ಹಗಲು ಯೋಗ ಕ್ಷೇಮ ಕೇಂದ್ರ' ಆರಂಭಿಸಿದ್ದು ಹಿರಿಯ ನಾಗರಿಕರಿಗೆ ಊಟದ ವ್ಯವಸ್ಥೆಯ ಜೊತೆಗೆ ಹಲವು ಬಗೆಯ ಚಟುವಟಿಕೆಗಳನ್ನು ಒದಗಿಸಿಕೊಡಲಾಗುತ್ತದೆ
-ಎಂ.ಎಸ್.ಶ್ರೀಕಂಠಸ್ವಾಮಿ, ಸರ್ಕಾರಿ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.