
ಹುಣಸೂರು: ಹುಣಸೂರು ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ 72ನೇ ಸಹಕಾರಿ ಸಪ್ತಾಹ ಅದ್ದೂರಿಯಾಗಿ ಆಚರಿಸಿ ಸಹಕಾರಿಗಳ ಕೊಡುಗೆ ಸ್ಮರಿಸಲಾಗುವುದು ಎಂದು ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಮತ್ತು ಮೈಮುಲ್ ನಿರ್ದೇಶಕ ಕೆ.ಎಸ್.ಕುಮಾರ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಸಹಕಾರಿ ಕ್ಷೇತ್ರ ಇಂದು ಅಗಾಧವಾಗಿ ಬೆಳೆದು ಲಕ್ಷಾಂತರ ಸಹಕಾರಿಗಳಿಗೆ ಧ್ವನಿಯಾಗಿದೆ. ಈ ಕ್ಷೇತ್ರ ಪಕ್ಷಾತೀತವಾಗಿ ಆಡಳಿತ ನಡೆಸಿ ಶ್ರೀಸಾಮಾನ್ಯರ ಆಗು ಹೋಗುಗಳಿಗೆ ಸ್ಪಂದಿಸುತ್ತಿದೆ ಎಂದರು. ಮೈಸೂರು ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ತನ್ನದೇ ಛಾಪು ಮೂಡಿಸಿ ರಾಜ್ಯದ ಗಮನ ಸೆಳೆಯುತ್ತಿದ್ದು, ಶಾಸಕ ಜಿ.ಡಿ.ಹರೀಶ್ ಗೌಡ ಅವರನ್ನು ಮೈಸೂರು ಜಿಲ್ಲಾ ಸಹಕಾರಿ ಯೂನಿಯನ್‌ಗೆ ಅವಿರೋಧವಾಗಿ ಅಧ್ಯಕ್ಷರನ್ನಾಗಿ ಹಾಗೂ ಅಪೆಕ್ಸ್ ಬ್ಯಾಂಕ್‌ಗೆ ಉಪಾಧ್ಯಕ್ಷರಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಹೈನುಗಾರಿಕೆ: ಮೈಸೂರು ಜಿಲ್ಲೆಯಲ್ಲಿ ಹುಣಸೂರಿನಲ್ಲಿ 214 ಸಹಕಾರಿ ಸಂಘ ಸ್ಥಾಪಿಸಿ ದಾಖಲೆ ನಿರ್ಮಿಸಿ 39 ಸಾವಿರ ಸದಸ್ಯರನ್ನು ಹೊಂದಿದ್ದೇವೆ. ಈ ಪೈಕಿ 19 ಸಾವಿರ ಸದಸ್ಯರು ನೇರವಾಗಿ ಹಾಲು ಉತ್ಪಾದಕರಿದ್ದಾರೆ. ತಾಲ್ಲೂಕಿನಲ್ಲಿ 140 ಹಾಲು ಉತ್ಪಾದಕ ಸಹಕಾರಿ ಸಂಘಗಳು ಸ್ವಂತ ಕಟ್ಟಡ ಹೊಂದಿದೆ ಎಂದರು.
ಮೈಸೂರು ಜಿಲ್ಲೆಯಲ್ಲಿ ಪ್ರತಿ ದಿನ 9 ಲಕ್ಷ ಲೀಟರ್ ಹಾಲು ಉತ್ಪತ್ತಿಯಾಗುತ್ತಿದ್ದು, ಈ ಪೈಕಿ ಅತಿ ಹೆಚ್ಚು ಹುಣಸೂರು ನಂತರದಲ್ಲಿ ಪಿರಿಯಾಪಟ್ಟಣ ತಾಲ್ಲೂಕು ಉತ್ಪತ್ತಿ ಮಾಡುತ್ತಿದೆ. ಕೆಎಂಎಫ್ ದಿನಕ್ಕೆ 1 ಕೋಟಿ ಲೀಟರ್ ಹಾಲು ಸಂಗ್ರಹಿಸಿ ವಹಿವಾಟು ನಡೆಸುತ್ತಿದೆ ಎಂದರು.
ದರ: ನಂದಿನ ಉತ್ಪನ್ನಗಳಿಗೆ ಸರ್ಕಾರ ದರ ಹೆಚ್ಚಿಸಿ ಗ್ರಾಹಕರಿಗೆ ಹೊರೆ ಆಗುತ್ತಿರುವ ಬಗ್ಗೆ ಕೆಎಂಎಫ್‌ಗೆ ಅನುಕಂಪವಿದೆ. ಆದರೆ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಶಕ್ತಿ ತುಂಬಿಸುವ ಉದ್ದೇಶದಿಂದ ನಂದಿನಿ ಉತ್ಪನ್ನಗಳ ದರ ಎಚ್ಚಿಸಿದೆ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಪ್ರೇಮಕುಮಾರ್, ಉಪಾಧ್ಯಕ್ಷ ಹೊನ್ನಪ್ಪ ಕಾಳಿಂಗೆ, ಅಸ್ವಾಳು ಕೆಂಪೇಗೌಡ, ಇಂದುಕಲಾ, ವೆಂಕಟೇಶ್, ರೇವಣ್ಣ, ಸೋಮಶೇಕರ್, ಮಹೇಶ್ ಮತ್ತು ಅಧಿಕಾರಿಗಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.