
ಮೈಸೂರು: ‘ಸಮಾನತೆ ಹಾಗೂ ಶಕ್ತಿ ತುಂಬಿದ ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶ–ವ್ಯಕ್ತಿತ್ವ ನಮಗೆಲ್ಲ ಪ್ರೇರಣೆ’ ಎಂದು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಇಲ್ಲಿನ ಪುರಭವನ ಆವರಣದ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಅವರು ಮಾತನಾಡಿದರು.
‘ಭಾರತದ ಎಲ್ಲಾ ವರ್ಗದ ಜನರಿಗೆ ಸಮಾನತೆಯನ್ನು ಸಾರುವ ಸಂವಿಧಾನವನ್ನು ನೀಡಿದ ಬಾಬಾಸಾಹೇಬರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ, ಕಟ್ಟಕಡೆಯ ಭಾರತೀಯನಿಗೂ ಸಂವಿಧಾನದ ಮೂಲಕ ಶಕ್ತಿ ತುಂಬಿದ್ದಾರೆ’ ಎಂದರು.
ಭವನ ಪೂರ್ಣಗೊಳ್ಳಲಿ:
‘ಸಂವಿಧಾನದ ಆಶಯಗಳನ್ನು ಯಥಾವತ್ತಾಗಿ ಜಾರಿಗೊಳಿಸಲು ನಮ್ಮ ಸರ್ಕಾರ ಪ್ರತಿ ಶಾಲಾ–ಕಾಲೇಜುಗಳಲ್ಲಿ, ಸಭೆ–ಸಮಾರಂಭಗಳಲ್ಲಿ ಸಂವಿಧಾನದ ಪೀಠಿಕೆ ಬೋಧನೆ ಕಡ್ಡಾಯಗೊಳಿಸಿದೆ. ನಗರದಲ್ಲಿ ಅಂಬೇಡ್ಕರ್ ಭವನದ ಕಾಮಗಾರಿ ತ್ವರಿತವಾಗಿ ಪೂರ್ಣಗೊಂಡು ಸೇವೆಗೆ ದೊರೆಯುವಂತಾಗಲಿ’ ಎಂದು ಹೇಳಿದರು.
ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ‘ಅಂಬೇಡ್ಕರ್ ನೀಡಿದ ಸಂವಿಧಾನವನ್ನು ದೇಶದ ಜನರೆಲ್ಲರೂ ಪಾಲಿಸುತ್ತಾ ಬದುಕುತ್ತಿದ್ದೇವೆ. ಅವರ ತತ್ವಗಳು ನಮಗೆ ಆದರ್ಶ’ ಎಂದರು.
ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ, ‘ದಲಿತರು ಹಾಗೂ ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಅವಕಾಶ ಕಲ್ಪಿಸಿದ ಮೇರು ವ್ಯಕ್ತಿತ್ವ ಅವರದು. ಅವರ ಹಾದಿ ನಮಗೆಲ್ಲರಿಗೂ ಸ್ಫೂರ್ತಿದಾಯಕ’ ಎಂದು ನುಡಿದರು.
ಎಲ್ಲರೂ ಒಪ್ಪಬಹುದಾದ ರತ್ನ:
ವಿಶ್ವಮೈತ್ರಿ ಬುದ್ಧವಿಹಾರದ ಕಲ್ಯಾಣಸಿರಿ ಭಂತೇಜಿ, ‘ಅಂಬೇಡ್ಕರ್ ಆಧುನಿಕ ಯುಗದಲ್ಲಿ ನಮಗೆ ಸಿಕ್ಕ ಭಾಗ್ಯವಿದಾತ ಹಾಗೂ ಎಲ್ಲರೂ ಒಪ್ಪಬಹುದಾದ ರತ್ನ’ ಎಂದರು.
‘ಅವರ ಚಿಂತನೆಗಳು ಸಾಮಾಜಿಕ ಮತ್ತು ಮಾನಸಿಕ ಆರೋಗ್ಯ ನೀಡುವಂತಹ ಪ್ರಬುದ್ಧವಾದ ಆಲೋಚನೆಯಾಗಿವೆ. ಧರ್ಮಾತೀತ, ಜಾತ್ಯತೀತ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಾವು ಪ್ರಬುದ್ಧರಾಗಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
‘ಮಾನವೀಯತೆ ಎಂಬುದು ಧರ್ಮದ ಪ್ರಮುಖ ದಾರಿಯಾಗಬೇಕು. ಇಡೀ ಜಗತ್ತಿನಲ್ಲಿ ಎಲ್ಲರನ್ನೂ ಮನುಷ್ಯರಂತೆ ಕಾಣಲು ಮಾನವೀಯತೆಯಿಂದ ಮಾತ್ರ ಸಾಧ್ಯ’ ಎಂದು ಪ್ರತಿಪಾದಿಸಿದರು.
ಬೋಧಿರತ್ನ ಭಂತೇಜಿ, ಕಲ್ಯಾಣಸಿರಿ ಭಂತೇಜಿ, ಬುದ್ಧಪ್ರಕಾಶ ಭಂತೇಜಿ ಬುದ್ಧ, ಧರ್ಮ ಹಾಗೂ ಸಂಘ ವಂದನೆ ಬೋಧಿಸಿದರು.
ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ. ಸವಿತಾ, ಡಿಸಿಪಿ ಬಿಂದುಮಣಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ, ಸಹಾಯಕ ನಿರ್ದೇಶಕ ಜನಾರ್ಧನ್, ಮುಖಂಡರಾದ ಅಶೋಕಪುರಂ ರಾಜು, ಅಹಿಂದ ಜವರಪ್ಪ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.