ADVERTISEMENT

ಎಲ್ಲ ಕ್ಷೇತ್ರದಲ್ಲೂ ಜ್ಞಾನಪ್ರೌಢಿಮೆ ಹರಿಸಿದವರು

ಕಾಂಗ್ರೆಸ್‌ ಭವನ: ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನದಲ್ಲಿ ಪ್ರಸನ್ನಕುಮಾರ್

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 4:22 IST
Last Updated 7 ಡಿಸೆಂಬರ್ 2025, 4:22 IST
ಮೈಸೂರಿನ ಕಾಂಗ್ರೆಸ್‌ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮವನ್ನು ಚಲನಚಿತ್ರ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್‌ ಬಾಬು ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ
ಮೈಸೂರಿನ ಕಾಂಗ್ರೆಸ್‌ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮವನ್ನು ಚಲನಚಿತ್ರ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್‌ ಬಾಬು ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ   

ಮೈಸೂರು: ‘ಅಂಬೇಡ್ಕರ್ ಅವರು ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಜ್ಞಾನ ಪ್ರೌಢಿಮೆ ಹರಿಸಿದವರು. ಬಹಳಷ್ಟು ಜನರಿಗೆ ಅವರ ಕೊನೆಯ ದಿನಗಳ ಬಗ್ಗೆ ಭಿನ್ನ ಅಭಿಪ್ರಾಯಗಳಿದ್ದು, ಅದನ್ನು ಅಧ್ಯಯನದ ಮೂಲಕ ನಿವಾರಿಸಿಕೊಳ್ಳಬೇಕು’ ಎಂದು ಸಹಾಯಕ ಪ್ರಾಧ್ಯಾಪಕ ಪ್ರಸನ್ನಕುಮಾರ್‌ ಎಂ. ಕೆರಗೋಡು ಹೇಳಿದರು.

ಕಾಂಗ್ರೆಸ್ ನಗರ ಹಾಗೂ ಗ್ರಾಮಾಂತರ ಜಿಲ್ಲಾ ಸಮಿತಿಯಿಂದ ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಮುಖ್ಯಭಾಷಣ ಮಾಡಿದರು.

‘ಅವರ ಆಶಯಗಳನ್ನು ಪಠ್ಯಪುಸ್ತಕಗಳಿಂದ ಹಂತ ಹಂತವಾಗಿ ತೆಗೆಯುವ ಹುನ್ನಾರ ನಡೆಯುತ್ತಿದೆ. ಅವರ ಆಶಯದಂತೆ ದಲಿತರೆಲ್ಲರೂ ಶಿಕ್ಷತರಾಗಿ ಉನ್ನತ ಜೀವನ ನಡೆಸಿ, ಹಳ್ಳಿಗಳತ್ತ ಮುಖ ಮಾಡಿ ಅಲ್ಲಿರುವ ಅಶಕ್ತರನ್ನು ಮೇಲೆತ್ತಬೇಕು. ಆಗ, ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ’ ಎಂದು ಪ್ರತಿಪಾದಿಸಿದರು.

ADVERTISEMENT

ನಮ್ಮಲ್ಲೂ ಆಗಲಿ:

‘ಅಂಬೇಡ್ಕರ್ ಚಿಂತನೆಗಳನ್ನು ಒಳಗೊಂಡ ಚಿತ್ರಗಳು ಮತ್ತು ಸರಣಿಗಳು ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ. ತಮಿಳು, ಮಲಯಾಳಂನಲ್ಲಿ ಅಂತಹ ಪ್ರಯೋಗಗಳು ನಡೆದಿವೆ. ಕನ್ನಡ ಚಲನಚಿತ್ರ ರಂಗದಲ್ಲೂ ಇದು ಆಗಬೇಕು’ ಎಂದು ಆಶಿಸಿದರು.

ಚಲನಚಿತ್ರ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು, ‘ನನ್ನ ಹಲವು ಸಿನಿಮಾಗಳಲ್ಲಿ ಅಸ್ಪೃಶ್ಯತೆ ವಿರುದ್ಧದ ಸಂದೇಶ ನೀಡಿದ್ದೇನೆ. ಅಂಬೇಡ್ಕರ್‌ ಅವರು ಭೂಮಿ ಇರುವವರೆಗೂ ಉಳಿಯುವ ಮಹಾಚೇತನ’ ಎಂದು ನುಡಿದರು.

‘ಸಂವಿಧಾನಕ್ಕೆ ಸಂಬಂಧಿಸಿದ 10 ಗಂಟೆಗಳ ಸಂಚಿಕೆ ಸಿದ್ಧಪಡಿಸಿದ್ದೇನೆ. ಇದನ್ನು ಅಧಿಕಾರಿಗಳು ಮತ್ತು ಸಚಿವರ ಗಮನಕ್ಕೂ ತಂದಿದ್ದೇನೆ. ಆದರೆ, ಅವರು ಶಾಲಾ- ಕಾಲೇಜುಗಳಲ್ಲಿ ಪ್ರಸಾರಕ್ಕೆ ಸಹಕರಿಸಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಮೂರ್ತಿ, ಎಸ್‌ಸಿ ಘಟಕದ ಅಧ್ಯಕ್ಷ ರಮೇಶ್, ಸಿದ್ದರಾಜು, ಉಪಾಧ್ಯಕ್ಷ ಎಡತಲೆ ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಎಂ., ಗಿರೀಶ್ ಪಿ.ತೊರೆಮಾವು, ಈಶ್ವರ್ ಚಕ್ಕಡಿ, ಮಾಜಿ ಮೇಯರ್‌ಗಳಾದ ಪುಷ್ಪಲತಾ ಚಿಕ್ಕಣ್ಣ, ಚಿಕ್ಕಣ್ಣ, ಮೋದಾಮಣಿ, ಪದಾಧಿಕಾರಿಗಳಾದ ಸುರೇಶ್ ಪಾಳ್ಯ, ಶಿವಶಂಕರಮೂರ್ತಿ, ಸಿದ್ದಯ್ಯ, ಮಹೇಶ್ ನಾಯಕ್, ಶಾಮ, ಯೋಗೇಶ್, ಎಂ.ಕೆ. ಅಶೋಕ್, ಮುರುಡೇಶ್, ರಾಮು, ಮೋಹನ್, ಸುಶೀಲಾ ಭಾಗವಹಿಸಿದ್ದರು.

ಮತ್ತೆ ಕಟ್ಟಬೇಕಾಗಿದೆ ಕಾಂಗ್ರೆಸ್

 ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್ ಮಾತನಾಡಿ ‘ದೇಶದಲ್ಲೀಗ ಕಾಂಗ್ರೆಸ್‌ಗೆ ಅಲ್ಪ ಹಿನ್ನಡೆ ಆಗಿರಬಹುದು. ಆದರೆ ಇದು ಶಾಶ್ವತವಲ್ಲ. ಅಂಬೇಡ್ಕರ್ ಹಾಗೂ ಗಾಂಧೀಜಿಯವರ ಸಿದ್ಧಾಂತದ ಆಧಾರದಲ್ಲಿ ಪಕ್ಷವನ್ನು ಮತ್ತೆ ಕಟ್ಟುವ ದೊಡ್ಡ ನೈತಿಕ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದರು. ‘ಸೈದ್ಧಾಂತಿಕ ಗಟ್ಟಿತನವಿಲ್ಲದ ಚುನಾವಣೆಗಳ ಗೆಲುವು ದೇಶವನ್ನು ಒಗ್ಗೂಡಿಸುವುದು ಅಸಾಧ್ಯ. ಯಾವ ರಾಜಕೀಯ ಪಕ್ಷಕ್ಕೆ ಸಂವಿಧಾನದ ವಿಚಾರವಾಗಿ ಅಸಹನೆ ಇರುತ್ತದೆಯೋ ಆಗ ಆಡಳಿತದಲ್ಲಿ ಸಾಮಾಜಿಕ ಅಶಾಂತಿಯೇ ಮೇಲುಗೈ ಸಾಧಿಸುತ್ತದೆ’ ಎಂದು ವಿಶ್ಲೇಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.