
ಎಚ್.ಡಿ.ಕೋಟೆ: ಬಸವ ಜಯಂತಿ ಕೇವಲ ಆಚರಣೆಗೆ ಸೀಮಿತವಾಗದೆ ಮಹನೀಯರ ಬೋಧನೆಗಳನ್ನು ಸ್ಮರಿಸುವ ಮತ್ತು ಹರಡುವ ಒಂದು ಸಂದರ್ಭವಾಗಿದೆ ಎಂದು ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ತಿಳಿಸಿದರು.
ಪಟ್ಟಣದ ಚಾಮುಂಡೇಶ್ವರಿ ದೇವಸ್ಥಾನದ ಸಮೀಪದ ಬಸವ ಭವನ ನಿವೇಶನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಹಾಗೂ ಬಸವ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾತಿ ಜಾತಿ ಮತ್ತು ಧರ್ಮ ಧರ್ಮಗಳ ನಡುವೆ ಬ್ಯಾರಿಕೇಡ್ ಹಾಕಿಕೊಂಡಿರುವ ಇಂಥ ಸಂದರ್ಭದಲ್ಲಿ ಬಸವಣ್ಣನವರ ಆದರ್ಶಗಳು ಪ್ರಸ್ತುತವಾಗಿವೆ. ಅವುಗಳನ್ನು ಪಾಲಿಸುವ ಮೂಲಕ ಸಮಾಜದಲ್ಲಿ ಸುಂದರ ಬದುಕು ರೂಪಿಸಿಕೊಳ್ಳಬಹುದು ಎಂದರು.
ಸಮಾನತೆ ಮತ್ತು ಸಾಮಾಜಿಕ ನ್ಯಾಯ, ಶ್ರಮದ ಪ್ರಾಮುಖ್ಯತೆಯನ್ನು ಕಾಯಕವೇ ಕೈಲಾಸ ಎಂದರು, ಅನುಭವ ಮಂಟಪವನ್ನು ಸ್ಥಾಪಿಸಿ ಸರ್ವರಿಗೂ ಸಮಾನತೆಯನ್ನು ಸಾರಿದ ಮಹಾನ್ ದಾರ್ಶನಿಕ ಬಸವಣ್ಣ ಎಂದು ಹೇಳಿದರು.
ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಜಾತಿ, ಧರ್ಮ ಎಂದು ಕೇಳದೆ ಎಲ್ಲರಿಗೂ ಶಿಕ್ಷಣ ಮತ್ತು ದಾಸೋಹವನ್ನು ನಮ್ಮ ಸಮಾಜದ ಸ್ವಾಮೀಜಿಗಳು ನೀಡುತ್ತಿದ್ದಾರೆ. ಸರ್ಕಾರಗಳೇ ಮಾಡಲು ಸಾಧ್ಯವಾಗದ ಬಹು ದೊಡ್ಡ ಕಾರ್ಯಕ್ರಮಗಳನ್ನು ಮಠ ಮಾನ್ಯಗಳು ಮಾಡುತ್ತಿವೆ ಎಂದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಬಸವಣ್ಣನವರು ನುಡಿದ ಆಶಯದಂತೆ ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿದ್ದು, ಸರ್ವರಿಗೂ ಸಮಾನತೆ, ಸಮಬಾಳು ಸಿಗಬೇಕು, ಎಲ್ಲರನ್ನೂ ಸಹೋದರತ್ವದಿಂದ ಕಾಣಬೇಕು ಎಂದರು.
ಎಲ್ಲರೂ ಒಟ್ಟಿಗೆ ಸೇರುವುದು, ಸಮಾಜದ ಒಳಿತಿಗೆ ಬೇಕಾದ ಯೋಜನೆಗಳನ್ನು ರೂಪಿಸುವುದೇ ಜಯಂತಿ ಆಚರಣೆ ಉದ್ದೇಶವಾಗಿದೆ. ಆದ್ದರಿಂದ ಸಮಾಜದ ಕಾರ್ಯಕ್ರಮಗಳನ್ನು ನಡೆಸಲು ಪಟ್ಟಣದ ಕೇಂದ್ರಸ್ಥಾನದಲ್ಲಿ ಬಸವ ಭವನ ನಿರ್ಮಿಸಲು ಎಲ್ಲಾ ರೀತಿಯ ನೆರವುಗಳನ್ನು ನಮ್ಮ ಸರ್ಕಾರದ ವತಿಯಿಂದ ನೀಡಲಾಗುವುದು ಎಂದರು.
ಮೆರವಣಿಗೆಯು ನಂದಿ ಧ್ವಜ ಪೂಜೆಯೊಂದಿಗೆ ಆರಂಭವಾಯಿತು. ಬಸವೇಶ್ವರರ ಪುತ್ಥಳಿಯನ್ನು ಬೆಳ್ಳಿ ರಥದಲ್ಲಿ ಕೂರಿಸಿ, ಶರಣರ ವಚನಗಳು, ಅಲಂಕೃತ ಸ್ತಬ್ಧ ಚಿತ್ರಗಳು, ಭಜನಾ ಮೇಳ, ವೀರಗಾಸೆ ಕುಣಿತ, ವೀರಭದ್ರ ನೃತ್ಯ, ಮಹಿಳಾ ಜಾನಪದ ಕಲಾವಿದರಿಂದ ವೀರಗಾಸೆ ಕುಣಿತ, ಡೊಳ್ಳು ಕುಣಿತ, ಮಂಗಳವಾದ್ಯ, ಚಂಡೆಮದ್ದಳೆ, ನಗಾರಿ, ತಮಟೆ, ಬ್ಯಾಂಡ್‌ಸೆಟ್, ಗಾಡಿಗೊಂಬೆ, ಡಿ.ಜೆ. ಜಾನಪದ ಕಲಾತಂಡಗಳೊಂದಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಪದವಿ ಪೂರ್ವ ಕಾಲೇಜು ಮೈದಾನದಿಂದ ಹೊರಟು ಹುಣಸೂರು ಮುಖ್ಯ ರಸ್ತೆಯ ಮೂಲಕ ಸಾಗಿ ಸಮಾಜದ ನಿವೇಶನದಲ್ಲಿ ಸಮಾವೇಶಗೊಂಡಿತು.
ಸಮಾಜದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಮುಖಂಡರಾದ ಬಸವನಗೌಡ ಪಾಟೀಲ್, ಸಮಾಜದ ಅಧ್ಯಕ್ಷ ಎಸ್.ರುದ್ರಪ್ಪ, ಗೌರವಾಧ್ಯಕ್ಷರಾದ ನಾಗೇಂದ್ರ ಸ್ವಾಮೀಜಿ, ಚೆನ್ನಬಸವ ಸ್ವಾಮೀಜಿ, ಷಡಕ್ಷರಿ ಸ್ವಾಮೀಜಿ, ಮಹದೇವ ಸ್ವಾಮೀಜಿ, ತೋಂಟದಾರ್ಯ ಸ್ವಾಮೀಜಿ, ಗುರುಮಲ್ಲೇಶ್ವರ ಸ್ವಾಮೀಜಿ, ಮೊತ್ತ ಬಸವರಾಜಪ್ಪ, ವರುಣಾ ಮಹೇಶ್, ಕೆ.ಎಸ್.ವೀರಭ್ರದಪ್ಪ, ಎಚ್.ಪಿ.ಶಿವರಾಜಪ್ಪ, ಸತೀಶ್, ಬಿ.ವಿ.ಬಸವರಾಜು, ಶಿವಕುಮಾರ್, ಜೆ.ಎಂ.ಮಹದೇವಪ್ಪ, ಕೆಂಡಗಣ್ಣಸ್ವಾಮಿ, ಗುರುಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.