
ಮೈಸೂರು: ನಗರದಲ್ಲಿರುವ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರ ಕಚೇರಿ ಹಾಗೂ ಮನೆಯಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಶುಕ್ರವಾರ ತಪಾಸಣೆ ನಡೆಸಿದರು.
ಮುಡಾ ಮಾಜಿ ಆಯುಕ್ತ, ಕೆಎಎಸ್ ಅಧಿಕಾರಿ ಡಿ.ಬಿ.ನಟೇಶ್ ಅವರು ನೀಡಿದ ದೂರು ಆಧರಿಸಿ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರಿನಲ್ಲಿ ಬಂಧಿಸಗಿದ್ದು. ಇನ್‌ಸ್ಪೆಕ್ಟರ್ ಪಿ.ಗೌರಿಶಂಕರ್ ನೇತೃತ್ವದಲ್ಲಿ 9 ಅಧಿಕಾರಿ ಹಾಗೂ ಸಿಬ್ಬಂದಿಗಳ ಮತ್ತೊಂದು ತಂಡ ಭೈರವೇಶ್ವರ ನಗರಕ್ಕೆ ಮಧ್ಯಾಹ್ನ 2.45ಕ್ಕೆ ಸರ್ಚ್ ವಾರಂಟ್‌ನೊಂದಿಗೆ ಆಗಮಿಸಿತು.
ಸ್ನೇಹಮಯಿ ಕೃಷ್ಣ ಅವರ ಶಿವಕೃಪಾ ಫೈನಾನ್ಸ್ ಕಾರ್ಪೊರೇಷನ್ಸ್ ಕಚೇರಿಯಲ್ಲಿ ಹುಡುಕಾಟ ನಡೆಸಿದ ಬಳಿಕ ಮನೆಯಲ್ಲಿ ಮೂರು ಗಂಟೆ ಪರಿಶೀಲನೆ ನಡೆಸಿದರು. ಕಂಪ್ಯೂಟರ್ ಪರಿಶೀಲನೆ ಬಳಿಕ ಹಾರ್ಡ್‌ಡಿಸ್ಕ್ ವಶಕ್ಕೆ ಪಡೆದರು. ಅವರ ಅಂಗಿಯ ಜೇಬಿನಲ್ಲಿದ್ದ ಪೆನ್‌ಡ್ರೈವ್, ನಟೇಶ್ ನೀಡಿರುವ ದೂರಿಗೆ ಸಂಬಂಧಿಸಿದ ಪತ್ರ ದಾಖಲೆಗಳನ್ನು ವಶಕ್ಕೆ ಪಡೆದರು.
ಬಂಡೀಪಾಳ್ಯದಲ್ಲಿರುವ ಸ್ನೇಹಮಯಿ ತಾಯಿ ಜಯಮ್ಮ ಮನೆಗೆ ತೆರಳಿ, ಪರಿಶೀಲಿಸಿದರು. ಅಲ್ಲಿ ಯಾವುದೇ ದಾಖಲೆ ವಶಪಡಿಸಿಕೊಂಡಿಲ್ಲ. ಇಬ್ಬರು ವಿಡಿಯೊಗ್ರಾಫರ್‌ಗಳು ಪರಿಶೀಲನೆ ವಿಡಿಯೊ ದಾಖಲಿಸಿಕೊಂಡರು.
‘ಪತಿ ಪ್ರತೀ ವಾರ ಎರಡು ಬಾರಿ ಬೆಂಗಳೂರಿಗೆ ನ್ಯಾಯಾಲಯಕ್ಕೆ ತೆರಳುತ್ತಿದ್ದರು. ಈ ಬಾರಿ ಮಗನೊಂದಿಗೆ ಹೋಗಿದ್ದರು. ಪೊಲೀಸರು ಮಧ್ಯಾಹ್ನ ಮನೆಗೆ ಸರ್ಚ್ ವಾರಂಟ್‌ನೊಂದಿಗೆ ಬಂದಾಗ, ಅವರು ಪೊಲೀಸ್ ವಶದಲ್ಲಿರುವುದು ತಿಳಿಯಿತು. ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿರುವುದರಿಂದ ಅವರನ್ನು ಸಿಕ್ಕಿಸಿ ಹಾಕಬೇಕೆಂದು, ಅವರಿಲ್ಲದ ಸಮಯದಲ್ಲಿ ಪೊಲೀಸರು ಮನೆಗೆ ಬಂದಿದ್ದಾರೆ. ಸಣ್ಣ– ಪುಟ್ಟ ವಿಚಾರಕ್ಕೆ ಬಂಧಿಸಿ ದೌರ್ಜನ್ಯ ಮಾಡುತ್ತಿರುವುದು ನನಗೂ ಭಯ ಮೂಡಿಸಿದೆ. ಇದಕ್ಕೆಲ್ಲಾ ಅವರು ಹೆದರುವುದಿಲ್ಲ. ಹೋರಾಟ ಮುಂದುವರೆಸುತ್ತಾರೆ’ ಎಂದು ಸ್ನೇಹಮಯಿ ಸ್ನೇಹಮಯಿ ಕೃಷ್ಣ ಪತ್ನಿ ವಿನೋದಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.