ADVERTISEMENT

ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 2:47 IST
Last Updated 12 ನವೆಂಬರ್ 2025, 2:47 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಮೈಸೂರು: ‘ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು. ತಪ್ಪಿದವರ ವಿರುದ್ಧ ವರದಿ ನೀಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೊಲೀಸ್ ಅಧಿಕಾರಿಗಳಿಗೆ ಗೊತ್ತಿಲ್ಲದೆ ಸಂಘಟಿತ ಅಪರಾಧಗಳು ನಡೆಯಲು ಸಾಧ್ಯವಿಲ್ಲ. ಅಪರಾಧ ಪ್ರಮಾಣಗಳು ಹೆಚ್ಚಾದರೆ ಪೊಲೀಸ್ ಅಧಿಕಾರಿಗಳೇ ಹೊಣೆ ಆಗುತ್ತಾರೆ. ಜಿಲ್ಲೆಯನ್ನು ಡ್ರಗ್ ಮುಕ್ತ ಜಿಲ್ಲೆ ಮಾಡಲು ಸೂಚನೆ ನೀಡಿದ್ದೇನೆ. ಜಿಲ್ಲೆಯ ವಿವಿಧೆಡೆ 23 ಠಾಣೆಗಳಿದ್ದು, ಎಲ್ಲ ಕಡೆಗೆ ಭೇಟಿ ಕೊಡುವಂತೆ ಎಸ್.‌ಪಿ.ಗೆ ಸೂಚಿಸಿದ್ದೇನೆ’ ಎಂದರು.

ADVERTISEMENT

‘ಇನ್‌ಸ್ಪೆಕ್ಟರ್‌ಗಳು, ಪಿಡಿಒಗಳು, ವಿಎಗಳ ಮೇಲೆ ಸಿಕ್ಕಾಪಟ್ಟೆ ದೂರುಗಳು ಬರುತ್ತಿವೆ. ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ ಕಚೇರಿಗಳಿಗೆ ಗೌಪ್ಯ ಭೇಟಿ ನೀಡಿದರೆ ಕೆಲಸ ಕದಿಯುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿಕ್ಕಿ ಬೀಳುತ್ತಾರೆ ಎಂದು ಸೂಚಿಸಿದ್ದೇನೆ’ ಎಂದು ಹೇಳಿದರು.

‘ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ಶೀರ್ಘ ಇತ್ಯರ್ಥಪಡಿಸಲು ಸೂಚನೆ ನೀಡಿದ್ದೇನೆ. ಜಿಲ್ಲೆಯಲ್ಲಿ ಎರಡು ವರ್ಷದಲ್ಲಿ ಇದ್ದ 8 ಸಾವಿರ ಪ್ರಕರಣಗಳಲ್ಲಿ ಈಗಾಗಲೇ 7,540ರಷ್ಟು ಪ್ರಕಣಗಳು ಇತ್ಯರ್ಥ ಆಗಿವೆ. ಉಳಿದವೂ ಬೇಗ ಇತ್ಯರ್ಥಪಡಿಸುವಂತೆ ತಾಕೀತು ಮಾಡಿದ್ದೇನೆ’ ಎಂದರು.

‘ಗ್ರೇಟರ್ ಮೈಸೂರು ರಚನೆ ಇನ್ನೂ ಪ್ರಾಥಮಿಕ ಹಂತದ ಚರ್ಚೆಯಲ್ಲಿದೆ. ಇನ್ನಷ್ಟು ಸಮಗ್ರ ಚರ್ಚೆ ಬಳಿಕ ಸಂಪುಟ ಸಭೆಯಲ್ಲಿಟ್ಟು, ಚರ್ಚಿಸಿ ಅದರಂತೆ ತೀರ್ಮಾನಿಸಲಾಗುವುದು. ಮೈಸೂರು ನಗರದಲ್ಲಿ ಮೇಲ್ಸೇತುವೆಗಳ ನಿರ್ಮಾಣದ ಬಗ್ಗೆಯೂ ಅಂತಿಮ ತೀರ್ಮಾನ ಕೈಗೊಂಡಿಲ್ಲ’ ಎಂದು ಹೇಳಿದರು.

‘ಶಿಥಿಲಗೊಂಡಿರುವ ಪಾರಂಪರಿಕ ಕಟ್ಟಡಗಳಾದ ಲ್ಯಾನ್ಸ್‌ಡೌನ್ ಹಾಗೂ ದೇವರಾಜ ಮಾರುಕಟ್ಟೆ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲು ಉದ್ದೇಶಿಸಿದ್ದು, ಸದ್ಯ ಈ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿದೆ. ನ್ಯಾಯಾಲಯದ ತೀರ್ಪು ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ನಗರದ ರಸ್ತೆಗಳ ವೈಟ್‌ ಟ್ಯಾಪಿಂಗ್‌ಗೆ ₹400 ಕೋಟಿ ಅನುದಾನ ನೀಡಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ, ಶಾಸಕರಾದ ಕೆ. ಹರೀಶ್‌ ಗೌಡ, ರವಿಶಂಕರ್, ವಿಧಾನ ಪರಿಷತ್‌ ಸದಸ್ಯರಾದ ಡಾ. ಡಿ. ತಿಮ್ಮಯ್ಯ, ಕೆ. ಶಿವಕುಮಾರ್, ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಸಮಿತಿ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್, ನಗರ ಸಮಿತಿ ಅಧ್ಯಕ್ಷ ಆರ್. ಮೂರ್ತಿ, ಮುಖಂಡ ಎಂ.ಕೆ. ಸೋಮಶೇಖರ್ ಇದ್ದರು.

ಅತಿವೃಷ್ಟಿ: ತ್ವರಿತ ಪರಿಹಾರ
‘ ಈ ಬಾರಿ ಉತ್ತಮ ಮಳೆಯಿಂದಾಗಿ ಕೆಆರ್‌ಎಸ್‌ನಿಂದ ತಮಿಳುನಾಡಿಗೆ 150 ಟಿಎಂಸಿ ನೀರು ಹೆಚ್ಚುವರಿಯಾಗಿ ಹರಿದಿದೆ. ರಾಜ್ಯದಲ್ಲಿ ಅತಿವೃಷ್ಟಿಯಿಂದ 11-12 ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ಹಾನಿ ಆಗಿದೆ.‌ ಎನ್‌ಡಿಆರ್‌ಎಫ್‌– ಎಸ್‌ಡಿಆರ್‌ಎಫ್‌ ನಿಯಮಾವಳಿಯಂತೆ ರೈತರ ಖಾತೆಗೆ ಪರಿಹಾರ ಜಮೆ ಆಗುತ್ತಿದ್ದು, ವಾರ- ಹದಿನೈದು ದಿನದಲ್ಲಿ ಈ ಪ್ರಕ್ರಿಯೆ ಮುಗಿಯಲಿದೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.