ADVERTISEMENT

ಪಿರಿಯಾಪಟ್ಟಣ | 'ಮಣ್ಣಿನ ಫಲವತ್ತತೆಗೆ ಕಾಳಜಿ ವಹಿಸಿ'

ರೈತರಿಗೆ ಹೊರಾಂಗಣ ತರಬೇತಿ ಕಾರ್ಯಕ್ರಮದಲ್ಲಿ ಜೆ.ಜಿ.ರಾಜಣ್ಣ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 16:17 IST
Last Updated 22 ಜೂನ್ 2025, 16:17 IST
ಪಿರಿಯಾಪಟ್ಟಣ ತಾಲ್ಲೂಕಿನ ನಂದಿನಾಥಪುರ ಪಿಎಸಿಸಿ ಸಹಕಾರ ಸಂಘದಲ್ಲಿ ಕೃಷಿ ಇಲಾಖೆ ಮತ್ತು ಕೃಷಿಕ ಸಮಾಜ ಸಹಯೋಗದಲ್ಲಿ ನಡೆದ ರೈತ ತರಬೇತಿ ಶಿಬಿರವನ್ನು ಮಹಾದೇವ ಸ್ವಾಮಿ ಉದ್ಘಾಟಿಸಿದರು. ರಾಜಣ್ಣ, ವೈ.ಪ್ರಸಾದ್, ಶಫಿ ಉಲ್ಲಾಖಾನ್, ಮಹೇಶ್ ಪಾಲ್ಗೊಂಡಿದ್ದರು
ಪಿರಿಯಾಪಟ್ಟಣ ತಾಲ್ಲೂಕಿನ ನಂದಿನಾಥಪುರ ಪಿಎಸಿಸಿ ಸಹಕಾರ ಸಂಘದಲ್ಲಿ ಕೃಷಿ ಇಲಾಖೆ ಮತ್ತು ಕೃಷಿಕ ಸಮಾಜ ಸಹಯೋಗದಲ್ಲಿ ನಡೆದ ರೈತ ತರಬೇತಿ ಶಿಬಿರವನ್ನು ಮಹಾದೇವ ಸ್ವಾಮಿ ಉದ್ಘಾಟಿಸಿದರು. ರಾಜಣ್ಣ, ವೈ.ಪ್ರಸಾದ್, ಶಫಿ ಉಲ್ಲಾಖಾನ್, ಮಹೇಶ್ ಪಾಲ್ಗೊಂಡಿದ್ದರು   

ಪಿರಿಯಾಪಟ್ಟಣ: ‘ಇತ್ತೀಚಿನ ದಿನಗಳಲ್ಲಿ ರೈತರು ಕಳೆ ಹಾಗೂ ಕೀಟ ನಿರ್ವಹಣೆ ಮಾಡಲು ಹೆಚ್ಚಾಗಿ ಔಷಧ ಸಿಂಪಡಣೆ ಮಾಡುತ್ತಿರುವುದರಿಂದ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳು ನಶಿಸಿ ಹೋಗುತ್ತಿವೆ’ ಎಂದು ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ನಿವೃತ್ತ ಕೃಷಿ ವಿಜ್ಞಾನಿ ಜೆ.ಜಿ.ರಾಜಣ್ಣ ಹೇಳಿದರು.

ತಾಲ್ಲೂಕಿನ ನಂದಿನಾಥಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಜಿ.ಪಂ, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜ ತಾಲ್ಲೂಕು ಘಟಕದ ಸಹಯೋಗದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಆಯೋಜಿಸಲಾಗಿದ್ದ ರೈತರಿಗೆ ಹೊರಾಂಗಣ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಣ್ಣಿನ ಫಲವತ್ತತೆ ಹೆಚ್ಚಿಸಲು ಮಣ್ಣಿಗೆ ಸಾವಯವ ಗೊಬ್ಬರಗಳಾದ ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರಗಳನ್ನು ಹೆಚ್ಚಾಗಿ ಬಳಕೆ ಮಾಡಿ ಮಣ್ಣಿನ ಅರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಸಿಟಿಆರ್‌ಐ ನಿವೃತ್ತ ಹಿರಿಯ ವಿಜ್ಞಾನಿ ಮಹಾದೇವ ಸ್ವಾಮಿ ಮಾತನಾಡಿ, ತಂಬಾಕು ಬೆಳೆಗೆ ಸೂಕ್ತ ಸಮಯದಲ್ಲಿ ಪೊಟಾಷ್ ಒದಗಿಸುವುದರಿಂದ ಗುಣಮಟ್ಟದ ಎಲೆಗಳ ಇಳುವರಿ ಪಡೆಯಬಹುದಾಗಿದೆ ಎಂದರು.

ತೋಟಗಾರಿಕೆ ಕಾಲೇಜಿನ ಕೀಟನಾಶಕ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಮೇಗೌಡ ಮಾತನಾಡಿ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಸಮಗ್ರ ಕೀಟನಾಶಕ ನಿರ್ವಹಣೆ ಬಗ್ಗೆ ರೈತರಿಗೆ ತಿಳಿಸಿದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಸಾದ್ ವೈ ಮಾತನಾಡಿ, ಕೃಷಿ ಪದ್ಧತಿಯಲ್ಲಿ ಬೆಳೆಗಳಿಗೆ ರೋಗಬಾಧೆ, ಕೀಟಬಾಧೆ ಆವರಿಸಿದಾಗ ರೈತ ಯಾವ ರೀತಿ ಮುನ್ನಚ್ಚರಿಕೆ ಕ್ರಮ ವಹಿಸಬೇಕು ಎಂದರು.

ತಾಲ್ಷೂಕು ಕೃಷಿ ಅಧಿಕಾರಿ ಹಿತೇಶ್, ಹುಣಸವಾಡಿ ಗ್ರಾ.ಪಂ ಅಧ್ಯಕ್ಷ ಲೋಕೇಶ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಕರೀಗೌಡ, ತಾಲ್ಲೂಕು ಕೃಷಿಕ ಸಮಾಜ ಅಧ್ಯಕ್ಷ ಸಫಿ ಉಲ್ಲಾ ಖಾನ್, ಮಾಜಿ ಕೃಷಿ ಪತ್ತಿನ ಅಧ್ಯಕ್ಷ ರಾಜಣ್ಣ ಮಾತನಾಡಿದರು.

ಜಿಲ್ಲಾ ಕೃಷಿ ನಿರ್ದೇಶಕಿ ಮಧುಲತಾ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸ್ವಾಮೀಗೌಡ, ತಾಲ್ಲೂಕು ಕೃಷಿಕ ಸಮಾಜದ ಕಾರ್ಯದರ್ಶಿ ಎಚ್.ಡಿ.ರಮೇಶ್, ರೈತ ಸಂಘ ಯುವ ಘಟಕದ ಅಧ್ಯಕ್ಷ ರಘುಪತಿ, ಕೋಮಲಾಪುರ ಗ್ರಾ.ಪಂ ಅಧ್ಯಕ್ಷ ಮಂಜುನಾಥ್, ರೈತ ಮುಖಂಡ ಮರೀಗೌಡ ಇದ್ದರು.

‘ಮಣ್ಣು ಮಾನವನ ಆರೋಗ್ಯದ ಭಾಗ’ ಮಣ್ಣಿನ ಆರೋಗ್ಯವು ಮಾನವನ ಆರೋಗ್ಯದ ಭಾಗವಾಗಿದ್ದು ರೈತರು ಮಣ್ಣಿನ ಫಲವತ್ತತೆ ಉಳಿಸಿಕೊಂಡು ಹೆಚ್ಚಿನ ಇಳುವರಿ ಪಡೆಯುವ ಮಾರ್ಗೋಪಾಯ ಕಂಡುಕೊಳ್ಳಬೇಕು. ‌ರಾಗಿ ಭತ್ತ ಬಾಳೆ ಮೆಕ್ಕೆಜೋಳ ಹಾಗೂ ಶುಂಠಿ ಬೆಳೆಗಳಲ್ಲಿ ಸಮಗ್ರ ಪೋಷಕಾಂಶಗಳನ್ನು ಮಣ್ಣು ಪರೀಕ್ಷೆ ಆಧಾರದ ಮೇಲೆ ಮಣ್ಣಿಗೆ ಸಾರಜನಕ ರಂಜಕ ಪೊಟಾಷ್ ಮತ್ತು ಲಘು ಪೋಷಕಾಂಶ ಒದಗಿಸುವುದು ಸೂಕ್ತ ಎಂದು ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ನಿವೃತ್ತ ಕೃಷಿ ವಿಜ್ಞಾನಿ ಜೆ.ಜಿ.ರಾಜಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.