ಪೊಲೀಸ್ – ಪ್ರಾತಿನಿಧಿಕ ಚಿತ್ರ
ಪಿರಿಯಾಪಟ್ಟಣ(ಮೈಸೂರು ಜಿಲ್ಲೆ): ತಾಲ್ಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆ ಸಂಖ್ಯೆ 5ರಲ್ಲಿ ಸಾರ್ವಜನಿಕ ನಿಧಿಯಿಂದ ₹7 ಕೋಟಿಗೂ ಹೆಚ್ಚಿನ ಮೊತ್ತ ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ತಂಬಾಕು ಮಂಡಳಿ ಹೊರಗುತ್ತಿಗೆ ನೌಕರ ಪಿ.ಎಸ್. ಮಧು ಹಾಗೂ ಲೆಕ್ಕಾಧಿಕಾರಿ ಬಿ. ರಾಜಶೇಖರ ರೆಡ್ಡಿ ವಿರುದ್ಧ ಗುರುವಾರ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಹರಾಜು ಮಾರುಕಟ್ಟೆ ಅಧೀಕ್ಷಕ ಬ್ರಿಜ್ ಭೂಷಣ್ ಕೃತ್ಯವನ್ನು ಪತ್ತೆ ಹಚ್ಚಿ ಪಟ್ಟಣದ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದರು.
‘ಬೆಳೆಗಾರರಿಗೆ ನೆರವಾಗಲೆಂದು ಮಂಡಳಿಯು ಬೆಳಗಾರರ ಸಮಿತಿ ರಚಿಸಿ, ಅದರ ಮೂಲಕ ರಸಗೊಬ್ಬರ ಖರೀದಿಸಿ ಮುಂಗಡವಾಗಿ ವಿತರಿಸಿತ್ತು. ತಂಬಾಕು ಮಾರಾಟದ ನಂತರ ರೈತರ ಖಾತೆಯಿಂದ ಹಣ ಕಡಿತ ಮಾಡಿ, ಅದನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆಯು ಎರಡು ವರ್ಷ ದುರ್ಬಳಕೆಯಾಗಿದೆ’ ಎಂದು ಮಂಡಳಿಯ ಕೇಂದ್ರ ಕಚೇರಿಗೆ ಭೂಷಣ್ ವರದಿ ನೀಡಿದ್ದರು. ನಂತರ, ಕೇಂದ್ರ ಕಚೇರಿಯ ಅಧಿಕಾರಿಗಳ ಲೆಕ್ಕಪರಿಶೋಧನೆ ವೇಳೆಯೂ ದುರ್ಬಳಕೆ ಕಂಡು ಬಂದಿತ್ತು.
ಸಾಮಾಜಿಕ ಕಾರ್ಯಕರ್ತ ಅಶ್ವತ್ ಎಂಬುವರು ಕೆಲವು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಆಗ್ರಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.