
ಮೈಸೂರು: ‘ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲ ನಿವೇಶನಗಳನ್ನು ಹಿಂಪಡೆಯಲು ಸರ್ಕಾರ ಚಿಂತನೆ ನಡೆಸಿದೆ’ ಎನ್ನಲಾಗಿದ್ದು, ಇದರಿಂದ ನಿವೇಶನ ಪಡೆದವರಿಗೆ ಸಂಕಷ್ಟ ಎದುರಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರು ಮುಡಾದಿಂದ ಪಡೆದ 14 ಬದಲಿ ನಿವೇಶನಗಳನ್ನು ಹಿಂದಿರುಗಿಸಿದ ಬೆನ್ನಲ್ಲೇ, ‘ಈ ಅನುಪಾತದಲ್ಲಿ ಹಂಚಿಕೆಯಾದ ಎಲ್ಲ ನಿವೇಶನಗಳನ್ನೂ ಹಿಂಪಡೆಯಬೇಕು’ ಎಂಬ ಆಗ್ರಹ ಕೇಳಿಬಂದಿತ್ತು. ಎನ್.ಚಲುವರಾಯಸ್ವಾಮಿ, ತನ್ವೀರ್ ಸೇಠ್ ಸೇರಿದಂತೆ ಕಾಂಗ್ರೆಸ್‌ನ ಸಚಿವರು–ಶಾಸಕರೇ ಈ ಕುರಿತು ಒತ್ತಾಯಿಸಿದ್ದರು.
ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಈಚೆಗೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು, ಆ ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲ ನಿವೇಶನಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿರುವ ಸಿದ್ದರಾಮಯ್ಯ, ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಮುಡಾದಲ್ಲಿ 2020ರಿಂದ 2024ರವರೆಗೆ 1500ಕ್ಕೂ ಹೆಚ್ಚು ನಿವೇಶನಗಳು ಹಂಚಿಕೆಯಾಗಿವೆ. ಪ್ರಕರಣವು ವಿವಾದದ ಸ್ವರೂಪ ಪಡೆಯುತ್ತಿದ್ದಂತೆ, ನಿವೇಶನ ಪಡೆದವರು ಹಾಗೂ ಅವರಿಂದ ನಿವೇಶನ ಖರೀದಿಸಿದವರಲ್ಲಿ ಆತಂಕ ಎದುರಾಗಿದೆ. ಇಂತಹ ಅನೇಕ ನಿವೇಶನಗಳಲ್ಲಿ ಈಗಾಗಲೇ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆದಿವೆ. ‘ಅವುಗಳನ್ನು ಮುಂದುವರಿಸಬೇಕೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ನಿಲ್ಲಿಸಬೇಕೆ’ ಎಂಬ ಗೊಂದಲ ಮೂಡಿದೆ.
‘ನಿವೇಶನ ಪಡೆದವರಲ್ಲಿ ಕೆಲವರು ಅರ್ಧ ಬೆಲೆಗೆ ನಿವೇಶನ ಮಾರಾಟ ಮಾಡುವ ಪ್ರಯತ್ನವನ್ನೂ ನಡೆಸಿದ್ದಾರೆ’ ಎಂಬ ಆರೋಪ ಕೇಳಿಬಂದಿದೆ.
ಶೀಘ್ರ ಸರ್ಕಾರದ ನಿರ್ಧಾರ: ಶ್ರೀವತ್ಸ ವಿಶ್ವಾಸ
ಮೈಸೂರು: ‘ಮುಡಾದಲ್ಲಿ 50:50 ಅನುಪಾತದಲ್ಲಿ ನೀಡಲಾಗಿರುವ ನಿವೇಶನಗಳನ್ನು ವಾಪಸ್ ಪಡೆಯುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಸರ್ಕಾರ ಶೀಘ್ರವೇ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ’ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ‘ಬದಲಿ ನಿವೇಶನ ಪಡೆದವರಲ್ಲಿ ಅನರ್ಹರು ಹಲವರಿದ್ದಾರೆ. ಅರ್ಹರಿಗೆ ನಿವೇಶನ ಸಿಗಬೇಕೆಂಬುದೇ ನಮ್ಮ ಉದ್ದೇಶ’ ಎಂದರು. ‘ಬದಲಿ ನಿವೇಶನ ಪಡೆದವರು ಸಿದ್ದರಾಮಯ್ಯ ಕುಟುಂಬವೇ ನಿವೇಶನ ಪಡೆದಿದೆ ಎಂದು ಸಮರ್ಥಿಸಿಕೊಂಡು ಸುಮ್ಮನಿದ್ದರು. ಈಗ ಸಿ.ಎಂ. ಪತ್ನಿಯೇ ನಿವೇಶನಗಳನ್ನು ವಾಪಸ್ ನೀಡಿರುವುದರಿಂದ ಕಡಿಮೆ ಬೆಲೆಗೆ ಮಾರಲು ಯತ್ನಿಸುತ್ತಿದ್ದಾರೆ. ಅಂಥ ನಿವೇಶನಗಳ ನೋಂದಣಿ ಮಾಡದಂತೆ ಸರ್ಕಾರ ಉಪ ನೋಂದಣಾಧಿಕಾರಿಗಳಿಗೆ ಸೂಚಿಸಬೇಕು’ ಎಂದು ಕೋರಿದರು. ‘ನ. 7 ರಂದು ನಡೆಯಲಿರುವ ಮುಡಾ ಸಾಮಾನ್ಯ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸುವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.