ADVERTISEMENT

‘ಬೇರು, ಬೆವರು’ ಬೆಸೆದ ಮಕ್ಕಳು

ರಮಾಗೋವಿಂದ ರಂಗಮಂದಿರದಲ್ಲಿ ನಾಟಕ ಪ್ರದರ್ಶನ ಇಂದು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 2:26 IST
Last Updated 14 ನವೆಂಬರ್ 2025, 2:26 IST
‘ಬೇರು– ಬೆವರು’ ನಾಟಕ ತಯಾರಿಯಲ್ಲಿ ಅರಿವು ಶಾಲೆಯ ಚಿಣ್ಣರು
‘ಬೇರು– ಬೆವರು’ ನಾಟಕ ತಯಾರಿಯಲ್ಲಿ ಅರಿವು ಶಾಲೆಯ ಚಿಣ್ಣರು   

ಮೈಸೂರು: ರೈತರು, ಬಡವರು, ಕಾರ್ಮಿಕರು ಸೇರಿ ಶ್ರಮ ಜೀವಿಗಳ ಬೆವರಿನ ಕಥೆಯೊಂದನ್ನು ಲಿಂಗಾಂಬುಧಿ ಪಾಳ್ಯದ ‘ಅರಿವು ಶಾಲೆ’ ಮಕ್ಕಳು ಹೇಳಲು ಬರುತ್ತಿದ್ದಾರೆ. ಶ್ರಮದ ಸಂಕಟವೇ ಇಲ್ಲದೇ ಕೂತು ತಿನ್ನುವ, ಕುಳಿತಲ್ಲೇ ಎಲ್ಲ ಪಡೆದುಕೊಳ್ಳುತ್ತಿರುವ ‘ಕೆಲಸಗಳ್ಳ’ ಸಮಾಜಕ್ಕೆ ನಾಟಕದ ಮೂಲಕ ಚಾಟಿ ಬೀಸುತ್ತಿದ್ದಾರೆ. 

ಮಕ್ಕಳ ದಿನಾಚರಣೆಯ ಸಂಭ್ರಮದಲ್ಲಿ, ಇದೇ 14ರ ಸಂಜೆ 6.30ಕ್ಕೆ ರಾಮಕೃಷ್ಣ ನಗರದ ‘ರಮಾಗೋವಿಂದ ರಂಗಮಂದಿರ’ದಲ್ಲಿ ಮೊದಲ ಪ್ರದರ್ಶನ ನಡೆಯಲಿದ್ದು, ಅಭಿನಯವಲ್ಲದೇ, ಸಂಗೀತ, ರಂಗಸಜ್ಜಿಕೆ, ಪ್ರಸಾದನ, ವಸ್ತ್ರವಿನ್ಯಾಸವೆಲ್ಲವೂ ಶಾಲೆಯ 10ನೇ ತರಗತಿಯ 14 ಮಕ್ಕಳೇ ಮಾಡಿದ್ದಾರೆ. 

ವಿಜಯ್‌ ತೆಂಡೂಲ್ಕರ್ ಅವರ ನಾಟಕ ಆಧಾರಿತ ‘ಬೇರು– ಬೆವರು’ ಅನ್ನು ಚಿಣ್ಣರು ರಂಗಕ್ಕೆ ಬೆಳಕಾಗಿಸುತ್ತಿದ್ದು, 10 ವರ್ಷದಲ್ಲಿ ಶಾಲೆಯಲ್ಲಿ ದಕ್ಕಿಸಿಕೊಂಡ ‘ರಂಗಾನುಭವ’ವನ್ನು ಧಾರೆ ಎರೆಯುತ್ತಿದ್ದಾರೆ. ಆದ್ಯಂತ ಸಂಗೀತ ನೀಡಿದ್ದರೆ, ನವ್ಯಾ ಪ್ರಸಾದನ ಮಾಡಿದ್ದಾಳೆ. ಶಾಲೆಯ ಮೇಷ್ಟ್ರು ಬರ್ಟಿ ಒಲಿವೆರಾ ಅವರ ನಿರ್ದೇಶನವಿದ್ದು, ಮತ್ತೊಬ್ಬ ಶಿಕ್ಷಕ ಶ್ರೀಕಾಂತ್‌ ಅವರ ಬೆಳಕು ನಾಟಕಕ್ಕಿದೆ. ಕಾಜು ಗುತ್ತಲ ಅವರ ನೆರವಿದೆ. 

ADVERTISEMENT

‘ಮಕ್ಕಳಿಗೆ ಜೀವನಾನುಭವ ಸಿಗಲು ವರ್ಷವಿಡೀ ನಾಟಕ ಚಟುವಟಿಕೆಯನ್ನು 1ನೇ ತರಗತಿಯಿಂದಲೂ ಹಾಡು– ಸಂಗೀತ, ನಾಟಕದ ಮೂಲಕ ಮಾಡಿದ್ದೇವೆ. 10ನೇ ತರಗತಿ ವೇಳೆಗೆ ವೃತ್ತಿಪರರಂತೆಯೇ ರಂಗಪಠ್ಯವನ್ನು ಆಯ್ಕೆ ಮಾಡಿಕೊಂಡು ನಾಟಕ ಕಲಿಸಲಾಗುತ್ತದೆ’ ಎಂದು ನಿರ್ದೇಶಕ ಬರ್ಟಿ ಒಲಿವೆರಾ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಹೊಳೆ ಹಾಯದೆ ಮೀನು ತಿನ್ನಬೇಕೆಂಬ, ಕೆಲಸ ಮಾಡದೇ ಹೊಟ್ಟೆ ತುಂಬಿಸಿಕೊಳ್ಳುವ ಜೀವನಶೈಲಿಯನ್ನು ಅನಾವರಣಗೊಳಿಸಲಾಗಿದೆ. ನೆಮ್ಮದಿಗೆ ಶ್ರಮದ ಬದುಕು ಎಷ್ಟು ಮುಖ್ಯ ಎಂಬುದನ್ನು ಮಕ್ಕಳೇ ಹೇಳಲಿದ್ದಾರೆ’ ಎಂದರು. 

20 ದಿನಗಳ ಶ್ರಮ: ಚಿಣ್ಣರಾದ ಸಿಂಚನಾ, ಉನ್ನತಿ, ಲಕ್ಷಾ, ವಿಶ್ರುತ, ಧೀಮಂತ, ತನ್ಮಯಿ, ತೇಜಸ್ವಿ, ಧನಶ್ರೀ, ನವ್ಯಾ, ಆದ್ಯಂತ, ಭುವನ್, ಸಮರ್ಥ, ಬ್ರಾಹ್ಮಿ, ಅಭಯ್ ಅವರು ನ.23ರಿಂದ ತಯಾರಿ ನಡೆಸಿದ್ದು, ನಾಟಕಕ್ಕೆ ಬೆವರು ಹರಿಸಿದ್ದಾರೆ.   

ನಾಟಕದ ಸಾರ.. 

ಲೋಲುಪ ರಾಜನೊಬ್ಬನಿಗೆ ನಿದ್ದೆ ಬರುತ್ತಿರುವುದಿಲ್ಲ. ದಿಕ್ಕು ತಪ್ಪಿಸುವ ರಿಯಲ್‌ ಎಸ್ಟೇಟ್‌ನವರು ಗಣಿಧಣಿಗಳೇ ಅವನ ಸ್ನೇಹಿತರು. ನಾಡಿನ ಜನರ ಮೇಲೆ ಹೆಚ್ಚು ಹೊರೆ ಬೀಳುತ್ತಿರುತ್ತದೆ. ಆಗ ರೈತನೊಬ್ಬ ನೀವೇ ನಿಮಗೆ ಬೇಕಾದ ಬೆಳೆ ಬೆಳೆದುಕೊಳ್ಳಿ ಎಂದು ಹೇಳಿದಾಗ ಶ್ರಮದ ಮಹತ್ವ ಗೊತ್ತಾಗುತ್ತದೆ. ಆಳುವುದೇ ಬೇಕಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸುವ ರಾಜನನ್ನು ತಡೆದ ರೈತ ದುಡಿದು ತಿನ್ನಬೇಕು. ಸಹಕಾರಿಗಳಾಗಬೇಕೆಂಬ ಪಾಠ ಹೇಳುತ್ತಾನೆ. ದುಡಿಮೆ ಬೆವರು ಹರಿದು ರಾಜನಿಗೆ ನಿದ್ದೆಯೂ ಬರುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.