
ಮೈಸೂರು: ‘ಶಿಕ್ಷಣ ಉದ್ಯೋಗದ ಸಾಧನವಲ್ಲ, ಜ್ಞಾನಾರ್ಜನೆಯ ಮೂಲ. ಜ್ಞಾನ ವೃದ್ಧಿಯಾದರೆ, ಚಿಂತನೆಯ ದೃಷ್ಟಿಕೋನ ಬದಲಾಗುತ್ತದೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರು.
ಇಲ್ಲಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗ, ಹಳೆಯ ವಿದ್ಯಾರ್ಥಿಗಳ ನೆಟ್‌ವರ್ಕ್ (ಮಿಲನ್) ಸಹಯೋಗದೊಂದಿಗೆ ವಿಭಾಗದ ವಜ್ರ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ‘ಪುಟಗಳಿಂದಾಚೆ: ಸಂವಹನ ಮತ್ತು ಸೃಜನಶೀಲತೆಯತ್ತ ಗ್ರಂಥಪಾಲನೆ’ ವಿಷಯ ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘ಪುಸ್ತಕ, ಲೇಖನಗಳ ಓದಿನಿಂದ ಜ್ಞಾನ ಸಾಧ್ಯ. ಪ್ರಸ್ತುತದಲ್ಲಿ ಎಲ್ಲರೂ ಜ್ಞಾನಕ್ಕಿಂತ ಹೆಚ್ಚಿನದಾಗಿ ಅಂಕಗಳ ಗಳಿಕೆಯಲ್ಲಿ ಆಸಕ್ತಿ ತೋರುತ್ತಿದ್ದಾರೆ. ಇದರಿಂದ ಯಾವುದೇ ಕಾರಣಕ್ಕೂ ಕೌಶಲಗಳ ಬೆಳವಣಿಗೆ ಅಸಾಧ್ಯ’ ಎಂದರು.
‘ಯುವಜನರು ಮೊಬೈಲ್ ಫೋನ್‌ಗಳಲ್ಲಿ ಎಲ್ಲವನ್ನೂ ಪಿಡಿಎಫ್ ಮೂಲ ಸಂಗ್ರಹಿಸಿಕೊಳ್ಳುತ್ತಾರೆ. ಆದರೆ, ಯಾರೂ ಓದಿ ಗ್ರಹಿಸಿಕೊಳ್ಳುವುದಿಲ್ಲ. ಇದರಿಂದ ಯಾವುದೇ ವಿಷಯಗಳು ಜ್ಞಾನವಾಗಿ ತಲೆಯಲ್ಲಿ ಉಳಿಯುವುದಿಲ್ಲ. ಮೊಬೈಲ್ ಫೋನ್ ಮಾಹಿತಿ ಪರಿಕರವೇ ಹೊರತು, ಜ್ಞಾನವಲ್ಲ’ ಎಂದು ತಿಳಿಸಿದರು.
‘ಹಿಂದೆ ಇಂಟರ್‌ನೆಟ್ ಇಲ್ಲದ ಕಾರಣ ಕಲಿಕೆಗೆ, ಸಂಶೋಧನೆಗಳಿಗೆ ಗ್ರಂಥಾಲಯವೇ ಆಧಾರವಾಗಿತ್ತು. ಈಗ ಮಾಹಿತಿ ಹುಡುಕುವ ವಿಧಾನ ಹಾಗೂ ಮೂಲ ಬೇರೆಯಾಗಿದೆ. ಇಂದಿನ ದಿನಗಳಲ್ಲಿ ಇಂಟರ್‌ನೆಟ್ ಮೂಲಕ ಏನನ್ನು ಬೇಕಾದರೂ ಹುಡುಕಬಹುದಾಗಿದೆ’ ಎಂದರು.
‘ತಂತ್ರಜ್ಞಾನದ ಬಳಕೆಯಿಂದ ಕೃತಿಚೌರ್ಯ ಹೆಚ್ಚಾಗುತ್ತಿದೆ. ಹಲವರಲ್ಲಿ ಸಮರ್ಥವಾದ ಗ್ರಹಿಕೆಯ ಕೊರತೆ ಕಾಣುತ್ತಿದೆ. ಗ್ರಂಥಾಲಯದಿಂದ ಮಾತ್ರ ಸೃಜನಾತ್ಮಕ ವಿಚಾರಗಳು ಹುಟ್ಟಲು ಸಾಧ್ಯವಾಗಿದ್ದು, ಪ್ರಾಥಮಿಕವಾಗಿ ಶಿಕ್ಷಣದ ತರಬೇತಿ ಸಾಧನವೇ ಗ್ರಂಥಾಲಯ’ ಎಂದು ಪ್ರತಿಪಾದಿಸಿದರು.
ನಿವೃತ್ತ ಕುಲಪತಿ ಬಿ.ಜೆ.ಸಂಗಮೇಶ್ವರ ಮಾತನಾಡಿ, ‘ಗ್ರಂಥಾಲಯ ಒಂದು ಶಿಕ್ಷಣ ಸಂಸ್ಥೆಯ ಹೃದಯವಿದ್ದಂತೆ. ಇವತ್ತು ಆ ಗ್ರಹಿಕೆ ಮರೆಯಾಗುತ್ತಿದೆ. ಹೆಚ್ಚಿನ ಭಾಗ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಹೋಗುವುದನ್ನೇ ಮರೆಯುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ಇನ್‌ಫರ್ಮ್ಯಾಟಿಕ್ಸ್ ಇಂಡಿಯಾ ಲಿಮಿಟೆಡ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎನ್.ವಿ.ಸತ್ಯನಾರಾಯಣ, ‘ಮಿಲನ್’ ಅಧ್ಯಕ್ಷೆ ಬಿ.ಎಂ.ಮೀರಾ, ಗ್ರಂಥಾಲಯ ಮತ್ತು ವಾಹಿತಿ ವಿಜ್ಞಾನ ಅಧ್ಯಯನ ವಿಭಾಗ ಅಧ್ಯಕ್ಷ ಪ್ರೊ.ಎಂ.ಚಂದ್ರಶೇಖರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.