ADVERTISEMENT

ಮೈಸೂರು | ‘ಸಫಾರಿ ಆರಂಭಿಸಿದರೆ ತೀವ್ರ ಹೋರಾಟ’

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 4:20 IST
Last Updated 2 ಡಿಸೆಂಬರ್ 2025, 4:20 IST
ಮೈಸೂರಿನ‌ಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಕುರುಬೂರು ಶಾಂತಕುಮಾರ್‌ ಮಾತನಾಡಿದರು
ಮೈಸೂರಿನ‌ಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಕುರುಬೂರು ಶಾಂತಕುಮಾರ್‌ ಮಾತನಾಡಿದರು   

ಮೈಸೂರು: ‘ಹೋಟೆಲ್ ಉದ್ಯಮಿಗಳ ಒತ್ತಡಕ್ಕೆ ಮಣಿದು ಕಾಡಿನ ಒಳಗೆ ಸಫಾರಿ ಅನುಮತಿ ನೀಡಿದರೆ ತೀವ್ರ ಹೋರಾಟ ನಡೆಸೋಣ’ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ನಗರದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ರೈತ ಹೋರಾಟಗಾರರು ಕಾಡಿನ ಒಳಗೆ ರೆಸಾರ್ಟ್ ಮುಚ್ಚಬೇಕು ಹಾಗೂ ಸಫಾರಿ ನಿಲ್ಲಿಸಬೇಕೆಂದು ಒತ್ತಾಯಿಸಿದ ಕಾರಣ ಅರಣ್ಯ ಸಚಿವರು ಮುಖ್ಯಮಂತ್ರಿ ಸೂಚನೆ ಮೇರೆಗೆ ಸಫಾರಿ ನಿಲ್ಲಿಸಿದ್ದಾರೆ. ಕಾಡಿನ ಒಳಗೆ ರೆಸಾರ್ಟ್ ನಿರ್ಮಾಣ ಮಾಡಿರುವ ಮಾಲೀಕರು ವಿವಿಧ ನೆಪವೊಡ್ಡಿ ಸಫಾರಿ ಆರಂಭಿಸುವಂತೆ ಒತ್ತಾಯಿಸುತ್ತಿರುವುದು ಖಂಡನೀಯ’ ಎಂದರು.

‘ರೈತರ ಜೀವಕ್ಕೆ ಸಂಚಕಾರ ತರುತ್ತಿರುವ ಆನೆ, ಹುಲಿ ಮುಂತಾದ ಪ್ರಾಣಿಗಳ ಹಾವಳಿ ತಪ್ಪಿಸಲು ಕಾಡಿನೊಳಗೆ ಸಫಾರಿ ಬೇಡ. ನಗರ ಪ್ರದೇಶದಲ್ಲಿ ಪ್ರವಾಸೋದ್ಯಮ ಹೋಟೆಲ್ ಉದ್ಯಮ ನಡೆಸುವವರು ಲಾಭಕ್ಕಾಗಿ ಮಾತನಾಡುತ್ತಾರೆ. ಆದರೆ ಕಾಡಂಚಿನಲ್ಲಿ ವಾಸ ಮಾಡುವ ರೈತರ ಕಷ್ಟದ ಬಗ್ಗೆ ಅವರಿಗೆ ಅರಿವಿಲ್ಲ. ಇಲಾಖೆ ವ್ಯಾಪಾರಸ್ಥರ ಒತ್ತಡಕ್ಕೆ ಮಣಿಯಬಾರದು. ಈ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಅರಣ್ಯ ಇಲಾಖೆ ಕಚೇರಿಗೆ ಕಾಡಂಚಿನ ರೈತರ ಜೊತೆಗೂಡಿ ಮುತ್ತಿಗೆ ಹಾಕಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಲು ಸರ್ಕಾರ ವಿಳಂಬ ಮಾಡುವುದು ಸರಿಯಲ್ಲ. ಕೂಡಲೇ ಡಿ. 4ರ ಒಳಗೆ ಖರೀದಿ ಕೇಂದ್ರಗಳನ್ನು ತೆರೆದು ರೈತರಿಂದ ಖರೀದಿಸುವ ಕಾರ್ಯ ಕೈಗೆತ್ತಿಕೊಳ್ಳಲಿ’ ಎಂದು ಒತ್ತಾಯಿಸಿದರು.

ADVERTISEMENT

ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸೋಮಶೇಖರ್, ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ, ವರಕೋಡು ನಾಗೇಶ್, ಲಕ್ಷ್ಮೀಪುರ ವೆಂಕಟೇಶ್, ಕುರುಬೂರು ಸಿದ್ದೇಶ್, ದೇವನೂರು ವಿಜಯೇಂದ್ರ, ರಾಜೇಶ್, ಗೌರಿಶಂಕರ, ಗುರುಸ್ವಾಮಿ, ಕಿರಗಸೂರು ಪ್ರಸಾದ್ ನಾಯಕ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.