
ಸಾಲಿಗ್ರಾಮ: ‘ತಾಲ್ಲೂಕಿನ ಚುಂಚನಕಟ್ಟೆಯಲ್ಲಿ ಜ.1ರಿಂದ ಹಳ್ಳಿಕಾರ್ ಜೋಡೆತ್ತುಗಳ ಪರಿಷೆ ಪ್ರಾರಂಭವಾಗಲಿದ್ದು, ಗ್ರಾಮದ ಸ್ವಚ್ಛತೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸ್ಥಳೀಯ ಗ್ರಾಮ ಪಂಚಾಯಿತಿ ಮುಂದಾಗಬೇಕು, ಅಲ್ಲದೆ ರಸ್ತೆಗಳ ಅಭಿವೃದ್ಧಿಯನ್ನು ಸಂಬಂಧಪಟ್ಟ ಇಲಾಖೆ ಮಾಡಬೇಕು’ ಎಂದು ಶಾಸಕ ಡಿ.ರವಿಶಂಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲ್ಲೂಕಿನ ಚುಂಚನಕಟ್ಟೆ ಜಾನುವಾರು ಪರಿಷೆ ಹಾಗೂ ರಥೋತ್ಸವ ಜನವರಿ ತಿಂಗಳಿನಿಂದ ಶುರುವಾಗುವುದರಿಂದ ಚುಂಚನಕಟ್ಟೆಯಲ್ಲಿ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ನಿರ್ವಹಣೆ ಮಾಡುವಂತೆ ಎಚ್ಚರಿಕೆ ನೀಡಿದರು.
‘ರಾಜ್ಯದಲ್ಲೇ ಹಳ್ಳಿಕಾರ್ ಜೋಡೆತ್ತುಗಳ ಪರಿಷೆಗೆ ಖ್ಯಾತಿ ಪಡೆದಿರುವ ಚುಂಚನಕಟ್ಟೆಗೆ ರಾಜ್ಯದ ಬಹುತೇಕ ಜಿಲ್ಲೆಗಳಿಂದ ರೈತರು ಆಗಮಿಸುತ್ತಾರೆ, ಅಲ್ಲದೆ ಹೆಚ್ಚು ಬೆಲೆಬಾಳುವ ಜಾನುವಾರುಗಳನ್ನು ಮಾರಾಟ ಮಾಡಲು ಕರೆತರುವ ಹಿನ್ನೆಲೆಯಲ್ಲಿ ಸುರಕ್ಷತೆ ಕೂಡ ಅತೀ ಮುಖ್ಯವಾಗಿದೆ. ಆದ್ದರಿಂದ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಬೇಕು’ ಎಂದು ಹೇಳಿದರು.
‘ಜಾನುವಾರುಗಳಿಗೆ ರೋಗ ಬಾರದಂತೆ ಪಶುಸಂಗೋಪನಾ ಇಲಾಖೆ ಎಚ್ಚರಿಕೆ ವಹಿಸಬೇಕು, ಜಾತ್ರೆಯಲ್ಲೇ ವಾಸ್ತವ್ಯ ಮಾಡುವ ರೈತರ ಆರೋಗ್ಯದಲ್ಲಿ ವ್ಯತ್ಯಾಸವಾಗದಂತೆ ಆರೋಗ್ಯ ಇಲಾಖೆ ತಾತ್ಕಾಲಿಕ ಕೇಂದ್ರಗಳನ್ನು ತೆರೆದು ಕರ್ತವ್ಯ ನಿರ್ವಹಿಸಬೇಕು’ ಎಂದು ತಿಳಿಸಿದರು.
‘ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಹೆಚ್ಚು ಬಸ್‌ಗಳು ಸಂಚಾರ ಮಾಡುವಂತೆ ಕ್ರಮ ವಹಿಸಬೇಕು, ಕೋದಂಡರಾಮನ ರಥೋತ್ಸವ, ತೆಪ್ಪೋತ್ಸವ ಮುಗಿಯುವ ತನಕ ವಿದ್ಯುತ್ ವ್ಯತ್ಯಯವಾಗದಂತೆ ಸೆಸ್ಕ್ ಅಧಿಕಾರಿಗಳು ಶ್ರಮಿಸಬೇಕು’ ಎಂದು ಸಭೆಯಲ್ಲಿ ಸೂಚನೆ ನೀಡಿದರು.
‘ಜ.16ರಂದು ನಡೆಯುವ ಕೋದಂಡರಾಮನ ರಥೋತ್ಸವದ ಹಿನ್ನೆಲೆಯಲ್ಲಿ ಚುಂಚನಕಟ್ಟೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮದ್ಯದಂಗಡಿಗಳನ್ನು ಬಂದ್ ಮಾಡಿಸಬೇಕು’ ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ಕೆಡಗ ನಟರಾಜ್, ಸಾಲಿಗ್ರಾಮ ಬಲರಾಮ್, ಮಹಾಲಿಂಗ, ಮೀನ್ ಮಧು, ಸಿ.ಎಸ್.ಗಿರೀಶ್, ಗ್ರಾ.ಪಂ.ಮಾಜಿ ಅಧ್ಯಕ್ಷೆ ಗೌರಮ್ಮ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಶಂಕರ್, ಎಂ.ಎಸ್. ಮಹದೇವ್, ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ಕುಪ್ಪೆ ಗ್ರಾ.ಪಂ. ಅಧ್ಯಕ್ಷೆ ಶಾರದಮ್ಮ, ಸದಸ್ಯೆ ಗೌರಮ್ಮ, ಸಾಲಿಗ್ರಾಮ ತಹಶೀಲ್ದಾರ್ ರುಕಿಯಾಬೇಗಂ, ತಾ.ಪಂ. ಇಒ ರವಿಕುಮಾರ್, ಬಿಇಒ ಆರ್.ಕೃಷ್ಣಪ್ಪ, ಉಪತಹಶೀಲ್ದಾರ್ ಮಹೇಶ್, ಮಿರ್ಲೆ ನಂದೀಶ್, ಚಿಕ್ಕಕೊಪ್ಪಲು ನವೀನ್, ನೂತನ್‌ಗೌಡ, ಡೇರಿಮಾಧು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.