ADVERTISEMENT

ಮೊಬೈಲ್‌ನಿಂದ ದೂರವಿರಿ, ಕೌಶಲ ರೂಢಿಸಿಕೊಳ್ಳಿ: ಪ್ರೊ.ಜಿ.ಆರ್‌.ಅಂಗಡಿ

ಕೆಎಸ್‌ಒಯು ಕಾವೇರಿ ಸಭಾಂಗಣದಲ್ಲಿ 2 ದಿನಗಳ ಸಮ್ಮೇಳನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಮೇ 2025, 15:33 IST
Last Updated 29 ಮೇ 2025, 15:33 IST
ಮೈಸೂರಿನ ಕೆಎಸ್‌ಒಯು ಕಾವೇರಿ ಸಭಾಂಗಣದಲ್ಲಿ ನಡೆದ ಸಮ್ಮೇಳನವನ್ನು ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿವಿ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ.ಜಿ.ಆರ್‌.ಅಂಗಡಿ ಉದ್ಘಾಟಿಸಿದರು– ಪ್ರಜಾವಾಣಿ ಚಿತ್ರ
ಮೈಸೂರಿನ ಕೆಎಸ್‌ಒಯು ಕಾವೇರಿ ಸಭಾಂಗಣದಲ್ಲಿ ನಡೆದ ಸಮ್ಮೇಳನವನ್ನು ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿವಿ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ.ಜಿ.ಆರ್‌.ಅಂಗಡಿ ಉದ್ಘಾಟಿಸಿದರು– ಪ್ರಜಾವಾಣಿ ಚಿತ್ರ   

ಮೈಸೂರು: ‘ನಾವು ಎಲೆಕ್ಟ್ರಾನಿಕ್‌ ಸಾಧನಗಳಿಂದ ದೂರವಿದ್ದು, ಜೀವನಕ್ಕೆ ಅವಶ್ಯವಾಗುವ ಕೌಶಲಗಳನ್ನು ರೂಢಿಸಿಕೊಳ್ಳಬೇಕು’ ಎಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದ ಮುಖ್ಯಸ್ಥ ಹಾಗೂ ಎನ್‌.ಸಿ.ಟಿ.ಇ ಸದಸ್ಯ ಪ್ರೊ.ಜಿ.ಆರ್‌.ಅಂಗಡಿ ಸಲಹೆ ನೀಡಿದರು.

ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಗುರುವಾರ ಆರಂಭವಾದ ‘ಇಂದಿನ ಡಿಜಿಟಲ್‌ ಯುಗದಲ್ಲಿ ಮಕ್ಕಳು ಮತ್ತು ಯುವಕರ ಜೀವನ ಕೌಶಲ ಮತ್ತು ಉತ್ತಮ ಜೀವನ’ ಕುರಿತ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

‘ಜೀವನಕ್ಕೆ ಅಗತ್ಯವಾದ ಕೌಶಲವನ್ನು ಬಿಟ್ಟು ನಮ್ಮ ಜೀವನವನ್ನೇ ಮೊಬೈಲ್‌ ಫೋನ್‌ಗೆ ಸ್ಥಳಾಂತರಿಸಿಕೊಂಡಂತೆಯೇ ಬದುಕುತ್ತಿದ್ದೇವೆ’ ಎಂದು ವಿಷಾದಿಸಿದರು.

ADVERTISEMENT

‘ಇತ್ತೀಚಿನ ದಿನಗಳಲ್ಲಿ ವಯಸ್ಕರು, ಮಕ್ಕಳು ಎನ್ನದೇ ಎಲ್ಲ ವಯೋಮಾನದವರೂ ಮೊಬೈಲ್‌ ಫೋನ್‌ಗೆ ದಾಸರಾಗಿದ್ದೇವೆ. ಆ ಸಾಧನವಿಲ್ಲದೇ ಮಕ್ಕಳು ಊಟ ಮಾಡುವುದಿಲ್ಲ ಎಂಬ ಮಟ್ಟಕ್ಕೆ ಪರಿಸ್ಥಿತಿ ಬಂದಿದೆ. ಇಂತಹ ಅತಿಯಾದ ಅವಲಂಬನೆ ಒಳ್ಳೆಯದಲ್ಲ’ ಎಂದು ತಿಳಿಸಿದರು.

ಸಂಕಷ್ಟವೂ ಇದೆ: ‘ಈಗ ನಾವೆಲ್ಲರೂ ಡಿಜಿಟಿಲ್ ಯುಗದಲ್ಲಿ ಬದುಕುತ್ತಿದ್ದೇವೆ. ಈ ಯುಗ ನಮಗೆ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶ ಮಾಡಿಕೊಡುತ್ತಿದೆ. ಇದರಿಂದ ಎಷ್ಟು ಉಪಯೋಗ ಆಗುತ್ತಿದೆಯೋ ಅಷ್ಟೇ ಸಂಕಷ್ಟಗಳೂ ಎದುರಾಗುತ್ತಿದೆ. ಸಮಸ್ಯೆಗಳನ್ನೂ ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಮಗೆ ಕೌಶಲಗಳ ಅಗತ್ಯವಿದೆ’ ಎಂದು ಹೇಳಿದರು.

‘ಜೀವನದ ಸುಗಮ ನಿರ್ವಹಣೆಗೆ ಕೌಶಲ ಮುಖ್ಯವೇ ಹೊರತು ಸಾಧನವಲ್ಲ. ಕೌಶಲ ಬರುವುದು ಶಿಕ್ಷಣದಿಂದ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು’ ಎಂದು ಸಲಹೆ ನೀಡಿದರು.

‘ಮೊಬೈಲ್‌ ಫೋನ್‌ ಬಳಸದೆ ಇದ್ದರೆ ಖರೀದಿಸುವ ಆಹಾರದ ಮೇಲೆ ಇಂತಿಷ್ಟು ರಿಯಾಯಿತಿ ದೊರೆಯುತ್ತದೆ ಎಂದು ಅನೇಕ ಹೋಟೆಲ್‌ಗಳಲ್ಲಿ ಪ್ರಕಟಣೆ ಇರುವುದನ್ನು ಗಮನಿಸಿದ್ದೇನೆ. ಇದು ಒಳ್ಳೆಯ ಬೆಳವಣಿಗೆ. ಊಟ ಮಾಡುವಾಗಲೂ ಮೊಬೈಲ್‌ ಫೋನ್‌ನಲ್ಲೇ ಮುಳುಗಿದರೆ ಅಕ್ಕಪಕ್ಕದವರ ಪರಿಚಯ ಆಗುವುದಿಲ್ಲ, ವಿಶ್ವಾಸ ಬೆಳೆಯುವುದಿಲ್ಲ’ ಎಂದರು.

ಕೆಎಸ್ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವರಾದ ಪ್ರೊ.ಎಸ್‌.ಕೆ.ನವೀನ್‌ಕುಮಾರ್‌, ಪ್ರೊ.ಆನಂದಕುಮಾರ್, ಶೈಕ್ಷಣಿಕ ಡೀನ್‌ ಪ್ರೊ.ಎನ್‌.ಲಕ್ಷ್ಮಿ, ಪ್ರೊ.ರಾಮನಾಥ ನಾಯ್ಡು ಪಾಲ್ಗೊಂಡಿದ್ದರು.

ಶಿಕ್ಷಣ ಎಂಬುದು ಜಾಗತಿಕವಾಗಿ ಎಲ್ಲರನ್ನೂ ಒಂದು ಮಾಡುತ್ತದೆ. ಮಾಹಿತಿ ಕಲೆ ಹಾಕುತ್ತದೆ. ಇದಕ್ಕೆ ಪೂರಕವಾಗಿ ಸಾಧನಗಳು ಕೆಲಸ ಮಾಡಬೇಕು.
-ಪ್ರೊ.ಜಿ.ಆರ್‌.ಅಂಗಡಿ ಕೇಂದ್ರೀಯ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.