ADVERTISEMENT

ಗೌರಿ ಹಂತಕರಿಗೆ ಸನ್ಮಾನ ಮಾಡಿರುವ ಸಂಘಟನೆಗಳ ವಿರುದ್ಧ ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 14:44 IST
Last Updated 22 ಅಕ್ಟೋಬರ್ 2024, 14:44 IST
ಪತ್ರಕರ್ತೆ ಗೌರಿ ಲಂಕೇಶ ಕೊಲೆ ಆರೋಪಿಗಳಿಗೆ ಸನ್ಮಾನ ಮಾಡಿರುವ ಘಟನೆ ಖಂಡಿಸಿ ಗೌರಿ ಸ್ಮಾರಕ ಟ್ರಸ್ಟ್ ಹಾಗೂ ಗೌರಿ ಬಳಗ ವತಿಯಿಂದ ರಾಯಚೂರಿನ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು
ಪತ್ರಕರ್ತೆ ಗೌರಿ ಲಂಕೇಶ ಕೊಲೆ ಆರೋಪಿಗಳಿಗೆ ಸನ್ಮಾನ ಮಾಡಿರುವ ಘಟನೆ ಖಂಡಿಸಿ ಗೌರಿ ಸ್ಮಾರಕ ಟ್ರಸ್ಟ್ ಹಾಗೂ ಗೌರಿ ಬಳಗ ವತಿಯಿಂದ ರಾಯಚೂರಿನ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು    

ರಾಯಚೂರು: ಪತ್ರಕರ್ತೆ ಗೌರಿ ಲಂಕೇಶ ಕೊಲೆ ಆರೋಪಿಗಳಿಗೆ ಸನ್ಮಾನ ಮಾಡಿರುವ ಘಟನೆ ಖಂಡಿಸಿ ಗೌರಿ ಸ್ಮಾರಕ ಟ್ರಸ್ಟ್ ಹಾಗೂ ಗೌರಿ ಬಳಗದ ವತಿಯಿಂದ ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

‘ಕರ್ನಾಟಕದ ದೀನ ದಲಿತರ ಧ್ವನಿಯಾಗಿದ್ದ ಗೌರಿ ಲಂಕೇಶ್ ಅವರನ್ನು ಕೊಲೆಗೈದ ಆರೋಪಿಗಳನ್ನು ಹಿಂದೂಪರ ಸಂಘಟನೆಗಳ ಮುಖಂಡರು ಸನ್ಮಾನಿಸುವ ಮೂಲಕ ಈ ನಾಡಿನ ಪರಂಪರೆಗೆ, ಈ ನೆಲ ಪೋಷಿಸಿಕೊಂಡು ಬರುತ್ತಿರುವ ಮಾನವೀಯ ಮೌಲ್ಯಗಳಿಗೆ ಮಾಡಿದ ದೊಡ್ಡ ಕಳಂಕ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಮಹಾರಾಷ್ಟ್ರ ಮೂಲದ ಹಂತಕ ಶ್ರೀಕಾಂತ ಹೊಂಗರಕರ್ ಜಾಮೀನಿನ ಮೇಲೆ ಹೊರಬಂದ ಕೂಡಲೇ ಮಹಾರಾಷ್ಟ್ರದ ಚುನಾವಣೆಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸುತ್ತಿರುವುದನ್ನು ಅಲ್ಲಿಯ ರಾಜಕೀಯ ಪಕ್ಷಗಳು ಆತನನ್ನು ಆಹ್ವಾನಿಸಿರುವುದನ್ನು ನೋಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲಿಗೆ ತಲುಪಿದೆ ಎಂದು ಬೇಸರವಾಗುತ್ತಿದೆ. ಗೃಹ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಗೌರಿ ಹಂತಕರಿಗೆ ಸನ್ಮಾನ ಮಾಡಿರುವ ವ್ಯಕ್ತಿಗಳ ಹಾಗೂ ಕೋಮುವಾದಿ ಸಂಘಟನೆಗಳ ವಿರುದ್ಧ ಕ್ರಮ ಜರುಗಿಸಬೇಕು. ಗೌರಿ ಕೊಲೆಯ ವಿಚಾರಣೆಯನ್ನು ತ್ವರಿತಗೊಳಿಸಿ ಹಂತಕರಿಗೆ ಶೀಘ್ರವೇ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾಡಳಿತದ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಕುಮಾರ ಸಮತಳ, ಖಾಜಾ ಅಸ್ಲಾಂ, ಶ್ರೀನಿವಾಸ ಕಲವಲದೊಡ್ಡಿ, ವಕೀಲ ಎಸ್.ಮಾರೆಪ್ಪ, ಜಿ.ಅಮರೇಶ, ಕೆ.ಜಿ.ವೀರೇಶ, ಶ್ರೀನಿವಾಸ ಕೊಪ್ಪರ್, ಜಾನ್ ವೆಸ್ಲಿ, ಎಂ.ಆರ್.ಬೇರಿ, ಮಾರೆಪ್ಪ ಹರವಿ, ಲಕ್ಷ್ಮಣ ಮಂಡಲಗೇರ, ಆಂಜನೇಯ ಕುರುಬದೊಡ್ಡಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.