
ರಾಯಚೂರು: ಹಿರಿಯ ಕಥೆಗಾರ ಮಹಾಂತೇಶ ನವಲಕಲ್ ಅವರ ಭಾರತ ಭಾಗ್ಯವಿಧಾತ ಕಥೆಯಾಧಾರಿತ 'ಹಿಲಿಯೋಥಿಸ್' ನಾಟಕ ರಂಗದ ಮೇಲೆ ಪ್ರದರ್ಶನಗೊಳ್ಳಲು ಸಿದ್ಧವಾಗಿದೆ. ಈ ನಾಟಕವನ್ನು ಜಿಲ್ಲೆಯ ಯುವ ರಂಗ ನಿರ್ದೇಶಕ ಲಕ್ಷ್ಮಣ್ ಮಂಡಲಗೇರಾ ನಿರ್ದೇಶಿಸಿದ್ದು, ರಾಯಚೂರಿನ ಸಮುದಾಯ ತಂಡದ ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ ಎಂದು ಸಮುದಾಯ ಅಧ್ಯಕ್ಷ ವಿ.ಎನ್ ಅಕ್ಕಿ ತಿಳಿಸಿದ್ದಾರೆ.
ಮಹಾಂತೇಶ ನವಲಕಲ್ ಅವರ ಭಾರತ ಭಾಗ್ಯವಿಧಾತ ಕಥೆಯು ಬಹುರಾಷ್ಟ್ರೀಯ ಕ್ರಿಮಿನಾಶಕ ಕಂಪನಿಗಳು ರೈತರ ಬದುಕನ್ನು ನಾಶ ಮಾಡಹೊರಟಿರುವ ಕ್ರೌರ್ಯ, ಮೋಸದ ಪ್ರಪಂಚವನ್ನು ತೆರೆದಿಡುತ್ತದೆ. ಮಾರುಕಟ್ಟೆ ನಡೆಸುತ್ತಿರುವ ಮೌನ ಕೊಲೆಗಳ ವಿವರಗಳನ್ನು ಹೇಳುವ ಕಥಾ ಹಂದರವನ್ನು ಹೇಳಲು ಹೊರಟಿರುವ ಈ ನಾಟಕವು ಜಾಗತೀಕರಣವು ರೂಪಿಸುತ್ತಿರುವ ಮಾರುಕಟ್ಟೆಯ ಆಮಿಷಗಳಿಗೆ ರೈತರನ್ನು ಬಲಿ ತೆಗೆದುಕೊಳ್ಳುತ್ತಿರುವ ಅದೃಶ್ಯ ವ್ಯಾಪಾರ ಜಗತ್ತಿನ ದೃಶ್ಯಗಳನ್ನು ಕಟ್ಟಿ ಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.
ಸಮುದಾಯ 50ರ ಸಂಭ್ರಮದೊಂದಿಗೆ ರಾಯಚೂರಿನ ಸಮುದಾಯ ತಂಡ ಯುವ ಕಲಾವಿದರನ್ನು ಒಟ್ಟುಗೂಡಿಸಿಕೊಂಡು ಭಾರತ ಭಾಗ್ಯವಿಧಾತ ಕಥೆಯ ನಾಟಕವನ್ನು ಕೈಗೆತ್ತಿಕೊಂಡು ಯುವ ರಂಗ ನಿರ್ದೇಶಕ ಲಕ್ಷ್ಮಣ ಮಂಡಲಗೇರಾ ಅವರು ರಂಗಪಠ್ಯ ಸಿದ್ಧಪಡಿಸಿಕೊಂಡು ನಿರ್ದೇಶಿಸಿದ್ದಾರೆ. ಈ ನಾಟಕಕ್ಕೆ ರಂಗಸಜ್ಜಿಕೆಯನ್ನು ನಾಗರಾಜ ಸಿರವಾರ ಸಿದ್ಧಪಡಿಸಿದ್ದು, ಹೇಮಂತ ಮರಿಯಮ್ಮನಹಳ್ಳಿ ಹಾಗೂ ಹನುಮಯ್ಯ ಸಂಗೀತ ಸಂಯೋಜನೆ ನೀಡಿದ್ದಾರೆ. ಪ್ರಸಾಧನವನ್ನು ವೆಂಕಟ ನರಸಿಂಹಲು ಅವರು ನಿರ್ವಹಿಸಿದ್ದಾರೆ.
‘ಹಿಲಿಯೋಥಿಸ್’ ನಾಟಕವು ನ.2ರಂದು ಸಂಜೆ 6.30ಕ್ಕೆ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ವಿ.ಎನ್. ಅಕ್ಕಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.