ಲಿಂಗಸುಗೂರು (ರಾಯಚೂರು ಜಿಲ್ಲೆ): ಯಾವುದೇ ಅಹಿತಕರ ಘಟನೆಗಳು ನಡೆಯದೇ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಮಧ್ಯರಾತ್ರಿಯಿಂದ ಗುರುವಾರ ಬೆಳಿಗ್ಗೆವರೆಗೆ ವಿಶೇಷ ಹೋಮ, ಪೂಜೆ ಕೈಂಕರ್ಯ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಪಟ್ಟಣದ ಪೊಲೀಸ್ ಠಾಣೆಯ ಒಳಕೋಣೆಯಲ್ಲಿ ನವಗ್ರಹ ಪೂಜೆ, ಮೃತ್ಯಂಜಯ ಹೋಮ, ವಾಸ್ತು ಶಾಂತಿ, ದೋಷ ನಿವಾರಣಾ ಪೂಜೆ ಮಾಡಿಸಲಾಗಿದೆ. ಠಾಣೆಯ ಮುಖ್ಯಗೇಟ್ ಬಳಿ ದೊಡ್ಡ ಬೂದುಕುಂಬಳ ಕಾಯಿ ಒಡೆದು, ಅದಕ್ಕೆ ಕುಂಕಮ ಹಾಕಿ ವಿಶೇಷ ಪೂಜೆ ಮಾಡಲಾಗಿದೆ.
‘ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕರ್ತವ್ಯ. ಆದರೆ, ಪಟ್ಟಣದ ಪೊಲೀಸರು ಇದಕ್ಕೆ ಹೋಮ–ಹವನ ಮೊರೆ ಹೋಗಿದ್ದಾರೆ. ಅಪರಾಧಿಗಳಿಂದ ನಾಗರಿಕರನ್ನು ರಕ್ಷಣೆ ಮಾಡಬೇಕಾದವರೇ ಹೋಮ–ಹವನದ ಮೊರೆ ಹೋದರೆ ಹೇಗೆ’ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
‘ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೊಡೆದಾಟ, ಕಳ್ಳತನ, ಅಪಘಾತ ಸೇರಿ ಇತರೆ ಸಾಲು ಸಾಲು ಪ್ರಕರಣಗಳು ಠಾಣೆಗೆ ಬರುತ್ತಿತ್ತು. ಠಾಣೆಯ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ನಡೆಯಬಾರದು. ಶಾಂತಿ ನೆಲಸಬೇಕು ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಪುಂಡಲಿಕ ಪಟೇದಾರ್ ನೇತೃತ್ವದಲ್ಲಿ ಹೋಮ ಹವನ ಮಾಡಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
‘ಪೊಲೀಸ್ ಠಾಣೆಯಲ್ಲಿ ಹೋಮ–ಹವನ ನಡೆಸಿರುವುದು ಮೌಢ್ಯತನದ ಪರಮಾವಧಿ. ಶಾಂತಿ–ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕರ್ತವ್ಯ. ಪೊಲೀಸ್ ಇನ್‌ಸ್ಪೆಕ್ಟರ್ ದೈವಿ ಭಕ್ತರಾಗಿದ್ದರೆ ತಮ್ಮ ಮನೆಯಲ್ಲಿ ಪೂಜೆ ಮಾಡಿಸಲಿ. ಪೊಲೀಸ್ ಠಾಣೆಯಲ್ಲಿ ಹೋಮ ಮಾಡಿಸಿರುವುದು ಸರಿಯಲ್ಲ’ ಎಂದು ಡಿಎಸ್‌ಎಸ್ (ಎನ್.ಮೂರ್ತಿ ಬಣದ)ನ ಕಲಬುರಗಿ ವಿಭಾಗದ ಸಂಚಾಲಕ ಹನುಮಂತಪ್ಪ ಕುಣಿಕೆಲ್ಲೂರು ಹಾಗೂ ಡಿಎಸ್‌ಎಸ್ (ಅಂಬೇಡ್ಕರ್ ವಾದ)ನ ಕಲಬುರಗಿ ವಿಭಾಗೀಯ ಸಂಘಟನಾ ಸಂಚಾಲಕ ಲಿಂಗಪ್ಪ ಪರಂಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಶಾಂತಿ ಸುವ್ಯವಸ್ಥೆಗಾಗಿ ಪೊಲೀಸ್ ಠಾಣೆಯಲ್ಲಿ ಹೋಮ
‘ಹೊಸದಾಗಿ ಕಟ್ಟಡ ನಿರ್ಮಾಣ ಮಾಡಿದಾಗಿನಿಂದಲೂ ಪೊಲೀಸ್ ಠಾಣೆಯಲ್ಲಿ ಯಾವುದೇ ಪೂಜೆ ಮಾಡಿಸಿರಲಿಲ್ಲ. ಶ್ರಾವಣ ಮಾಸವಾಗಿದ್ದರಿಂದ ಶಾಂತಿ ಸುವ್ಯವಸ್ಥೆಗಾಗಿ ಸುದರ್ಶನ ಹೋಮ ಮಾಡಿಸಿದ್ದೇವೆ’ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಪುಂಡಲಿಕ ಪಟೇದಾರ್ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.