ADVERTISEMENT

ಹಿರಿಯರ ಅನುಭವ, ಕಿರಿಯರ ಶಕ್ತಿಯಿಂದ ಸಂಘಟನೆ ಬಲಿಷ್ಠ: ಸಿ.ಎಸ್. ಷಡಾಕ್ಷರಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 6:29 IST
Last Updated 14 ನವೆಂಬರ್ 2025, 6:29 IST
ರಾಜ್ಯ ಸರ್ಕಾರಿ ನೌಕರರ ಸಂಘದ ವಾರ್ಷಿಕ ಸಭೆಗೆ ರಾಯಚೂರಿಗೆ ಆಗಮಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು
ರಾಜ್ಯ ಸರ್ಕಾರಿ ನೌಕರರ ಸಂಘದ ವಾರ್ಷಿಕ ಸಭೆಗೆ ರಾಯಚೂರಿಗೆ ಆಗಮಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು   

ರಾಯಚೂರು: ‘ಹಿರಿಯರ ಅನುಭವ ಹಾಗೂ ಕಿರಿಯರ ಶಕ್ತಿಯಿಂದಾಗಿ ರಾಯಚೂರು ಜಿಲ್ಲಾ ಸರ್ಕಾರಿ ನೌಕರರ ಸಂಘ ಇನ್ನಷ್ಟು ಬಲಿಷ್ಠಗೊಂಡಿದೆ. ನಿಸ್ವಾರ್ಥ ಭಾವದಿಂದ ಸಂಘದ ಬಲವರ್ಧನೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಸ್ಥಾನಮಾನ ಕಲ್ಪಿಸಲಿದೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕಾಗೃಹದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಯಚೂರು ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ಅಭಿನಂದನಾ ಸಮಾರಂಭ ಹಾಗೂ ಸಂಘದ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.

‘ರಾಯಚೂರಲ್ಲಿ ಸಂಘಟನೆ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಹೊಂದಿಲ್ಲ ಅನ್ನುವ ಅಳುಕು ಇತ್ತು. ಆದರೆ, ಇಲ್ಲಿಗೆ ಬಂದ ಮೇಲೆ ಅದೆಲ್ಲ ಅಸತ್ಯ ಎನ್ನುವುದು ಮನವರಿಕೆಯಾಗಿದೆ. ಕಾರ್ಯಕ್ರಮ ಗಮನಿಸಿ ಇಂದು ಇಲ್ಲಿಗೆ ಬಾರದಿದ್ದರೆ ನಾನೇನಾದರೂ ಕಳೆದುಕೊಳ್ಳುತ್ತಿದ್ದೆ ಎಂಬ ಭಾವನೆ ಮೂಡಿದೆ’ ಎಂದರು.

‘ಜಿಲ್ಲೆಯಲ್ಲಿ ಶೇ.50 ಮಹಿಳಾ ನೌಕರರು ಭಾಗವಹಿಸಿದ್ದಾರೆ. ಅತಿ ಹೆಚ್ಚಿನ ಮಹಿಳಾ ನೌಕರರು ಭಾಗವಹಿಸಿರುವುದು ಸಂಘಟನೆಗೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ’ ಎಂದು ಹೇಳಿದರು.

ADVERTISEMENT

ಸಂಘಟನೆಯಲ್ಲಿ ರಾಜ್ಯದ 5.20 ಲಕ್ಷ ಹಾಗೂ 16,000 ಜಿಲ್ಲೆಯ ನೌಕರರು ಕೆಲಸ ಮಾಡುತ್ತಿದ್ದಾರೆ. ಸಂಘಟನೆಯಲ್ಲಿ ಯಾರೂ ಸ್ವಾರ್ಥಕ್ಕಾಗಿ ಕೆಲಸ ಮಾಡುತ್ತಿಲ್ಲ. ಸಂಘಟನೆಯ ಬಲವರ್ಧನೆಗೆ ಶ್ರಮಿಸುತ್ತಿರುವವರನ್ನು ಗುರುತಿ ಸಂಘಟನೆಯನ್ನು ಅವಕಾಶ ಕೊಡಲಾಗುತ್ತಿದೆ’ ಎಂದು ತಿಳಿಸಿದರು.

'ರಾಯಚೂರು: ಸರ್ಕಾರಿ ನೌಕರರು ದಿನನಿತ್ಯ ಪರೀಕ್ಷೆಗೆ ಹೋದಂತೆ ಕೆಲಸಕ್ಕೆ ಹೊರಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ಒತ್ತಡದಲ್ಲಿ ಸರ್ಕಾರಿ ನೌಕರರು ಕೆಲಸ ಮಾಡುತ್ತಿದ್ದು ಈ ಸನ್ನಿವೇಶ ಬದಲಾಗಬೇಕಿದೆ' ಎಂದು ನಗರ ಶಾಸಕ ಶಿವರಾಜ ಪಾಟೀಲ ಹೇಳಿದರು.

‘ಪ್ರಸ್ತುತ ದಿನಗಳಲ್ಲಿ ಸರ್ಕಾರಿ ನೌಕರರು ಒತ್ತಡದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಸಕಾಂಗ ಹಾಗೂ ನ್ಯಾಯಾಂಗದ ನಡುವೆ ಕೆಲಸ ಮಾಡಬೇಕಾಗಿದೆ. ಪ್ರತಿನಿಧಿಗಳು, ವಿರೋಧ ಪಕ್ಷದ ಹಾಗೂ ಸಾರ್ವಜನಿಕರ ಒತ್ತಡವೂ ಇರುತ್ತದೆ. ಎಲ್ಲರನ್ನು ಮೆಚ್ಚಿಸುವ ರೀತಿಯಲ್ಲಿ ಸರ್ಕಾರಿ ನೌಕರರು ತಮ್ಮ ಕಾರ್ಯ ಮಾಡಬೇಕಿದೆ’ ಎಂದರು.
‘ ಸರ್ಕಾರಿ ನೌಕರರಿಗೆ ಏನೇ ಕಷ್ಟ ಬಂದರೂ ಜೊತೆಗಿರುತ್ತೇನೆ. ಶಿಕ್ಷಕರಿಗೆ ಒತ್ತಡವಿದೆ. ಮಕ್ಕಳಿಗೆ ಪಾಠ ಮಾಡುವ ಮೂಲಕ ಇತರ ಕೆಲಸಗಳನ್ನೂ ಮಾಡಿಕೊಳ್ಳಬೇಕಾಗಿದೆ ಇಂದು ಶಿಕ್ಷಕರು ಅಡುಗೆ ಮಾಡುವ ಕಾರ್ಯ ಮಾಡಬೇಕಾಗಿದೆ’ ಎಂದು ಹೇಳಿದರು.

ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಶಂಕರಗೌಡ ಪಾಟೀಲ, ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣ ಶಾಂತಗೇರಾ, ಚಂದ್ರಶೇಖರಯ್ಯ, ಚನ್ನಬಸವ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳು

ಅಭಿನಂದನಾ ಸಮಾರಂಭಕ್ಕೆ ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಂದಲೂ ಸರ್ಕಾರಿ ನೌಕರರು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಆಸನಗಳು ಸಿಗದಷ್ಟು ಸಭಾಂಗಣ ಭರ್ತಿಯಾಗಿತ್ತು. ನೌಕರರ ಸಂಘದ ಸದಸ್ಯರು ಯಾವುದಕ್ಕೂ ಬೇಸರ ಪಟ್ಟುಕೊಳ್ಳದೆ ವೇದಿಕೆ ಮುಂಭಾಗದಲ್ಲಿ ನೆಲದ ಮೇಲೆ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.

ಸಭಾಂಗಣದ ಹೊರಗಡೆ ಎಲ್‌ಇಡಿ ಮತ್ತು ಧ್ವನಿವರ್ಧಕದ ವ್ಯವಸ್ಥೆ ಮಾಡಲಾಗಿತ್ತು. ಆವರಣದಲ್ಲೂ ಜಾಗವಿರಲಿಲ್ಲ. ನೌಕರರು ಅಭಿಮಾನದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅದ್ದೂರಿ ಮೆರವಣಿಗೆ

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎನ್. ಷಡಾಕ್ಷರಿ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ನಗರದ ಡಾ. ಅಂಬೇಡ್ಕ‌ರ್ ವೃತ್ತದಲ್ಲಿ ಕ್ರೇನ್‌ಗಳ ಮೂಲಕ ಭಾರೀ ಗಾತ್ರದ ಹಾರಗಳನ್ನು ಹಾಕಲಾಯಿತು. ಪುಷ್ಪವೃಷ್ಟಿ ಮಾಡಲಾಯಿತು. ಅಲ್ಲಿಂದ ತೆರೆದ ವಾಹನದಲ್ಲಿ ಬಸವೇಶ್ವರ ವೃತ್ತದ ಮಾರ್ಗವಾಗಿ ಕೃಷಿ ವಿವಿವರೆಗೂ ಮೆರವಣಿಗೆ ಮಾಡಲಾಯಿತು. ಡೊಳ್ಳು ಕಲಾವಿದರು ಮೆರವಣಿಗೆ ಮೆರುಗು ತುಂಬಿದ್ದರು.

ರಸ್ತೆಯ ಎರಡೂ ಬದಿಗೆ ಫ್ರೆಕ್ಸ್ ರಾರಾಜಿಸಿದವು ಬಹುತೇಕ ಇಲಾಖೆಗಳು ಪೈಪೋಟಿಗೆ ಬಿದ್ದವರಂತೆ ಅಲ್ಲಲ್ಲಿ ಸ್ವಾಗತ ಕೋರುವ ಪೋಸ್ಟರ್‌ಗಳನ್ನು ಅಳವಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.