
ರಾಮನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರವಿ ಸೇರಿದಂತೆ ಗಣ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ರಾಮನಗರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ಮಹಾ ಪರಿನಿಬ್ಬಾಣ ದಿನದ ಕಾರ್ಯಕ್ರಮ ಜಿಲ್ಲೆಯು ಶನಿವಾರ ಜಿಲ್ಲೆಯ ವಿವಿಧೆಡೆ ನಡೆಯಿತು. ಜನಪ್ರತಿನಿಧಿಗಳು, ದಲಿತ ಸಂಘಟನೆಗಳು, ಸಂಘ–ಸಂಸ್ಥೆಗಳ ಮುಖಂಡರು ಹಾಗೂ ಅಧಿಕಾರಿಗಳು ಸಂವಿಧಾನ ಶಿಲ್ಪಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರವಿ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ‘ಅಸಮಾನತೆ ವಿರುದ್ಧ ಸಮ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಅವರು ಸಂವಿಧಾನವೆಂಬ ಅಸ್ತ್ರ ನೀಡಿದರು’ ಎಂದರು.
‘ಅಂಬೇಡ್ಕರ್ ಅವರ ಅವಿರತ ಶ್ರಮದ ಫಲವಾಗಿ ನಾವಿಂದು ಸಮಾನವಾಗಿ ಬದುಕಲು ಸಾಧ್ಯವಾಗಿದೆ. ಈ ದೇಶದಲ್ಲಿ ಅಸಮಾನತೆಯು ಶೋಷಿತ ಸಮಾಜವನ್ನು ನಿರ್ಮಾಣ ಮಾಡಿತು. ಬೆರಳಣಿಕೆಯಷ್ಟು ಜನರು ಇಡೀ ಭಾರತವನ್ನು ತಮ್ಮ ಮುಷ್ಠಿಯಲ್ಲಿಟ್ಟುಕೊಂಡು ಶೋಷಿಸುತ್ತಿದ್ದರು. ಇದರಿಂದ ಬಿಡುಗಡೆಗೊಳಿಸಲು ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರಂತಹ ಮಹನೀಯರು ಮಾಡಿದ ಹೋರಾಟವನನ್ಉ ನಾವು ಸದಾ ನೆನೆಯಬೇಕು’ ಎಂದು ತಿಳಿಸಿದರು.
‘ದೇಶದಲ್ಲಿ ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅಂಬೇಡ್ಕರ್ ಅವರ ಪ್ರತಿಮೆಗಳಿವೆ. ಅವರಷ್ಟು ಪ್ರತಿಮೆಗಳು ಬೇರಾರದ್ದು ಇಲ್ಲವೆಂಬುದು, ಅವರ ಕೊಡುಗೆಗೆ ಸಾಕ್ಷಿಯಾಗಿದೆ. ಈಗಲೂ ಅವರ ಹೆಸರನ್ನು ರಸ್ತೆ, ಸಂಘ-ಸಂಸ್ಥೆಗಳಿಗೆ ಇಡುವ ಹಾಗೂ ಅವರ ಪ್ರತಿಮೆಯನ್ನು ಸ್ಥಾಪಿಸುವುದನ್ನು ನೋಡುತ್ತೇವೆ. ಇದು ಅಂಬೇಡ್ಕರ್ ಅವರ ಶಕ್ತಿ ಎಂತಹದ್ದು ಎಂಬುದನ್ನು ತೋರಿಸುತ್ತದೆ’ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್, ಸಹಾಯಕ ನಿರ್ದೇಶಕ ಡಾ. ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸದಸ್ಯ ಚೆಲುವರಾಜು, ಕುಂಬಾಪುರ ಬಾಬು, ಶಿವು ಜೆ.ಎಲ್., ಮುಖಂಡರಾದ ಶಿವಕುಮಾರ ಸ್ವಾಮಿ, ಶಿವಶಂಕರ್, ಗುಡ್ಡೆ ವೆಂಕಟೇಶ್, ಹರೀಶ್ ಬಾಲು, ಬಿವಿಎಸ್ ವೆಂಕಟೇಶ್, ಕೋಟೆ ಕುಮಾರ್ ಹಾಗೂ ಇತರರು ಇದ್ದರು.
ಈ ದೇಶದ ಪ್ರಜೆಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿರುವಲ ಏಕೈಕ ಶಕ್ತಿ ಯಾವುದಾದರೂ ಇದ್ದರೆ ಅದು ಸಂವಿಧಾನ. ಅಂತಹ ವಿಶ್ವ ಶ್ರೇಷ್ಠ ಸಂವಿಧಾನವನ್ನು ಕೊಟ್ಟ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕುಎಸ್. ರವಿ ವಿಧಾನ ಪರಿಷತ್ ಸದಸ್ಯ
‘ಆದರ್ಶ ಪಾಲನೆಯೇ ನಿಜವಾದ ಗೌರವ’
‘ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕುವ ಮೂಲಕ ಆ ಮಹಾ ಚೇತನಕ್ಕೆ ಗೌರವ ಸಲ್ಲಿಸಬೇಕು. ಅಂಬೇಡ್ಕರ್ ಅವರ ಬದುಕು ಬರಹ ಜೀವನಾದರ್ಶ ಮೌಲ್ಯಗಳು ಹಾಗೂ ದೇಶಕ್ಕೆ ನೀಡಿದ ಕೊಡುಗೆಗಳನ್ನು ಅರಿತುಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಹೇಳಿದರು.