
ರಾಮನಗರ ನಗರಸಭೆ ವತಿಯಿಂದ ಆಗಾ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಡಾ. ಬಿ. ಆರ್. ಅಂಬೇಡ್ಕರ್ ಪರಿನಿಬ್ಬಾಣ ದಿನದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ, ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.
ರಾಮನಗರ: ಇಲ್ಲಿನ ನಗರಸಭೆ ವತಿಯಿಂದ ಡಾ. ಬಿ. ಆರ್. ಅಂಬೇಡ್ಕರ್ ಅವರ ಪರಿನಿಬ್ಬಾಣದ ಪ್ರಯುಕ್ತ, ನಗರದ ಆಗಾ ಬಡಾವಣೆಯ ಉದ್ಯಾನ ಮತ್ತು ರಸ್ತೆ ಬದಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು.
ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹಾಗೂ ಸ್ವಚ್ಛತಾ ರಾಯಭಾರಿ ಚಿತ್ರಾ ರಾವ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಸ್ಥಳೀಯ ಸಂಘ–ಸಂಸ್ಥೆಗಳ ಸದಸ್ಯರು, ನಾಗರಿಕರು ಹಾಗೂ ಪೌರ ಕಾರ್ಮಿಕರು ಸಹ ಕೈ ಜೋಡಿಸಿದರು.
ಬಳಿಕ ಮಾತನಾಡಿದ ಶಶಿ ಅವರು, ‘ಬಹುತ್ವ ಭಾರತವನ್ನು ಸಮರ್ಥವಾಗಿ ಮುನ್ನಡೆಸುವ ಸಂವಿಧಾನವನ್ನು ನೀಡಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಸಂವಿಧಾನದ ಕಾರಣಕ್ಕೆ ದೇಶ ಇಂದು ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಇದಕ್ಕೆ ಅಂಬೇಡ್ಕರ್ ಅವರ ದೂರದೃಷ್ಟಿ ಕಾರಣ’ ಎಂದು ಬಣ್ಣಿಸಿದರು.
‘ಅಸಮಾನತೆಯೇ ಪ್ರಧಾನವಾಗಿದ್ದ ಭಾರತದಲ್ಲಿ ಸಂವಿಧಾನದ ಮೂಲಕ ಸಮ ಸಮಾಜ ನಿರ್ಮಾಣದ ಬೀಜವನ್ನು ಅಂಬೇಡ್ಕರ್ ಬಿತ್ತಿದರು. ಜಾತಿ– ಧರ್ಮ, ಬಡವ–ಶ್ರೀಮಂತ ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಸಂವಿಧಾನದ ಮೂಲಕ ಸಮಾನ ಅವಕಾಶಗಳನ್ನು ಕೊಟ್ಟರು’ ಎಂದರು.
‘ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದ ಸಮುದಾಯಗಳಿಗೆ ಆತ್ಮಸ್ಥೈರ್ಯ ತುಂಬಿದ ಅಂಬೇಡ್ಕರ್, ಅವರ ಉದ್ದಾರಕ್ಕಾಗಿ ತಮ್ಮ ಜೀವನಮಾನವಿಡೀ ಶ್ರಮಿಸಿದರು. ಅಂತಹ ಮಹಾನ್ ವ್ಯಕ್ತಿಯ ಚಿಂತನೆಗಳು ಹಾಗೂ ಜೀವನಾದರ್ಶವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಸಮ ಸಮಾಜದೊಂದಿಗೆ ಸಮೃದ್ಧ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕು’ ಎಂದು ಹೇಳಿದರು.
ಯೋಜನಾ ನಿರ್ದೇಶಕ ಶೇಖರ್, ಪೌರಾಯುಕ್ತ ಡಾ. ಜಯಣ್ಣ, ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ನಾಗರಾಜು, ಜಿಲ್ಲಾಧ್ಯಕ್ಷ ವೆಂಕಟೇಶ್, ಶಾಖಾಧ್ಯಕ್ಷ ದೇವೇಂದ್ರ, ಕೊಲ್ಹಾಪುರಿ, ಆರೋಗ್ಯ ನಿರೀಕ್ಷಕ ವಿಜಯಕುಮಾರ್, ಆಗಾ ಬಡಾವಣೆಯ ನಿವಾಸಿಗಳಾದ ಸಂಪತ್, ನರಸಿಂಹ, ಕೃಷ್ಣ, ಹರೀಶ್ ಹಾಗೂ ಇತರರು ಇದ್ದರು.