
ಬಿಡದಿ (ರಾಮನಗರ): ‘ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಬೇನಾಮಿ ಹೆಸರಿನಲ್ಲಿ ಸುಮಾರು 400 ಎಕರೆ ಆಸ್ತಿ ಮಾಡಿದ್ದಾರೆ’ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಎ. ಮಂಜುನಾಥ್ ಅವರು ಆರೋಪಿಸಿದರು.
‘ವಿವಿಧೆಡೆ ಜಿಲ್ಲಾಧಿಕಾರಿ ಹೊಂದಿರುವ ಆಸ್ತಿಗೆ ಸಂಬಂಧಿಸಿದಂತೆ ನನ್ನ ಬಳಿ ದಾಖಲೆಗಳಿವೆ. ಈ ಕುರಿತು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ದೂರು ನೀಡಲಾಗುವುದು’ ಎಂದು ಭೈರಮಂಗಲದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಯೋಜನಾ ಪ್ರದೇಶದಲ್ಲಿ ತಮ್ಮ ಏಜೆಂಟರ್ ಮೂಲಕ ಜಿಲ್ಲಾಧಿಕಾರಿ ಭೂಮಿ ಸ್ವಾಧೀನ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಡಿ.ಸಿ.ಗೆ ನೆರವಾದವರೇ ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ದಾಖಲೆಗಳು ಸಹ ನನ್ನಲ್ಲಿವೆ. ಭ್ರಷ್ಟ ಅಧಿಕಾರಿಯಾಗಿರುವ ಯಶವಂತ್, ಜಿಲ್ಲೆಯಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ’ ಎಂದು ದೂರಿದರು.
‘ಉಪನಗರಕ್ಕೆ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಪರಿಹಾರ ದರ ನಿಗದಿ ಕುರಿತು ಇತ್ತೀಚೆಗೆ ರೈತರ ಜೊತೆ ಸಭೆ ನಡೆಸಿದ ಜಿಲ್ಲಾಧಿಕಾರಿ. ಸಭೆ ಕುರಿತು, ರೈತರಿಗೆ ಸರಿಯಾಗಿ ಮಾಹಿತಿ ನೀಡಿಲ್ಲ. 7 ದಿನ ಮುಂಚೆ ನೀಡಬೇಕಿದ್ದ ನೋಟಿಸ್ ಅನ್ನು 2 ದಿನ ಮುಂಚೆ ಗ್ರಾಮ ಲೆಕ್ಕಾಧಿಕಾರಿಗಳಿಂದ ಅಂಗಡಿ ಮತ್ತು ದೇವಾಲಯಗಳ ಗೋಡೆಗೆ ಅಂಟಿಸಿದ್ದಾರೆ. ಯೋಜನೆ ವಿರುದ್ಧ ಇರುವ ರೈತರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಉದ್ಧಟತನ ತೋರಿದ್ದಾರೆ’ ಎಂದರು.
‘ಯೋಜನೆ ವಿರೋಧಿಸಿ ಸಭೆ ದಿನ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸಿದ 25 ರೈತರ ವಿರುದ್ಧ ಜಿಲ್ಲಾಧಿಕಾರಿ ದೂರು ದಾಖಲಿಸಿದ್ದಾರೆ. ಅವರ ಸರ್ವಾಧಿಕಾರಿ ನಡೆ ಖಂಡಿಸಿ ಬಿಡದಿಯಿಂದ ಡಿ.ಸಿ ಕಚೇರಿವರೆಗೆ ಬೃಹತ್ ಪಾದಯಾತ್ರೆ ನಡೆಸಲು ಚಿಂತನೆ ಮಾಡಲಾಗಿದೆ. ಸುಮಾರು 3,600 ಕುಟುಂಬಗಳ ರೈತರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ’ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಭೈರಮಂಗಲ– ಕಂಚುಗಾರನಹಳ್ಳಿ ಭೂ ಹಿತರಕ್ಷಣಾ ಸಂಘದ ಅಧ್ಯಕ್ಷ ರಾಮಯ್ಯ, ಪ್ರಧಾನ ಕಾರ್ಯದರ್ಶಿ ಸೀನಪ್ಪ ರೆಡ್ಡಿ, ಖಜಾಂಚಿ ಮಂಡಲಹಳ್ಳಿ ನಾಗರಾಜು, ಪ್ರಕಾಶ್, ಅಶ್ವಥ್, ನಾಗೇಶ್ ಕುಮಾರ್, ರವೀಂದ್ರನಾಥ ರೆಡ್ಡಿ, ಕೃಷ್ಣ, ಮಂಜಣ್ಣ, ಸುಮಾ, ಸುಜಾತಾ, ಭಾಗ್ಯ, ರಮ್ಯಾ, ಜ್ಯೋತಿ ಹಾಗೂ ಇತರರು ಇದ್ದರು.
ಯೋಜನೆ ಕುರಿತು ಮಾಹಿತಿ ಪಡೆಯುವ ಸಲುವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿಗೆ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೂ ಜಿಲ್ಲಾಧಿಕಾರಿ ಕರೆ ಸ್ವೀಕರಿಸದೆ ಉದ್ದಟತನ ತೋರಿದ್ದಾರೆ– ಎಂ. ಮಂಜುನಾಥ್ ಮಾಜಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.