ADVERTISEMENT

ರಾಮನಗರ: ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ರಾಜೀನಾಮೆ ಪಡೆಯಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 2:09 IST
Last Updated 27 ಅಕ್ಟೋಬರ್ 2025, 2:09 IST
ರಾಮನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಮುಖಂಡರು ಭಾನುವಾರ ಸುದ್ದಿಗೋಷ್ಠಿ ನಡೆಸಿ, ಪಕ್ಷದ ಜಿಲ್ಲಾಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿದರು. ಮುರಳೀಧರ, ಎಸ್‌.ಆರ್. ನಾಗರಾಜು, ಜಗನ್ನಾಥ್, ಶೇಖರ್, ಶಿವಮಾದು, ಪ್ರಕಾಶ್, ದರ್ಶನ್, ಮೈತ್ರಿ ಗೌಡ ಹಾಗೂ ಇತರರು ಇದ್ದಾರೆ
ರಾಮನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಮುಖಂಡರು ಭಾನುವಾರ ಸುದ್ದಿಗೋಷ್ಠಿ ನಡೆಸಿ, ಪಕ್ಷದ ಜಿಲ್ಲಾಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿದರು. ಮುರಳೀಧರ, ಎಸ್‌.ಆರ್. ನಾಗರಾಜು, ಜಗನ್ನಾಥ್, ಶೇಖರ್, ಶಿವಮಾದು, ಪ್ರಕಾಶ್, ದರ್ಶನ್, ಮೈತ್ರಿ ಗೌಡ ಹಾಗೂ ಇತರರು ಇದ್ದಾರೆ   

ರಾಮನಗರ: ಸತತ ಎರಡನೇ ಸಲ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಏಳು ತಿಂಗಳ ಹಿಂದೆಯಷ್ಟೇ ಆಯ್ಕೆಯಾಗಿದ್ದ ಎಂ.ಎನ್. ಆನಂದಸ್ವಾಮಿ ವಿರುದ್ಧ ಆರಂಭದಿಂದಲೂ ಪಕ್ಷದ ಒಂದು ಗುಂಪಿನೊಳಗೆ ಇದ್ದ ಅಸಮಾಧಾನ ಕಡೆಗೂ ಸ್ಫೋಟಗೊಂಡಿದೆ. ಭಾನುವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ಈ ಗುಂಪು, ಆನಂದಸ್ವಾಮಿ ಅವರಿಂದ ರಾಜೀನಾಮೆ ಪಡೆದು ಬೇರೆಯವರನ್ನು ನೇಮಿಸುವಂತೆ ಪಕ್ಷದ ವರಿಷ್ಠರನ್ನು ಒತ್ತಾಯಿಸಿದೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುರಳೀಧರ್, ‘ಜಿಲ್ಲಾಧ್ಯಕ್ಷ ಆನಂದಸ್ವಾಮಿ ಅವರ ಕಾರ್ಯವೈಖರಿಯಿಂದಾಗಿ ಪಕ್ಷವು ಜಿಲ್ಲೆಯಲ್ಲಿ ಬಲ ಕಳೆದುಕೊಳ್ಳುತ್ತಿದೆ. ಪಕ್ಷದ ಹಿತದೃಷ್ಟಿಯಿಂದ ವರಿಷ್ಠರು ಆನಂದಸ್ವಾಮಿ ಅವರಿಂದ ರಾಜೀನಾಮೆ ಪಡೆಯಬೇಕು’ ಎಂದು ಆಗ್ರಹಿಸಿದರು.

‘ಜಿಲ್ಲೆಯಲ್ಲಿ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಆನಂದಸ್ವಾಮಿ ವಿಫಲರಾಗಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷಕ್ಕೆ ಸಹಕಾರ ನೀಡುತ್ತಾ, ಪಕ್ಷದ ಹಿತವನ್ನು ಬಲಿ ಕೊಡುತ್ತಿದ್ದಾರೆ. ವರಿಷ್ಠರು ಅವರ ಬದಲು ಸಮರ್ಥ ಅಧ್ಯಕ್ಷರನ್ನು ನೇಮಕ ಮಾಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಪ್ರಾಧಿಕಾರದ ಮತ್ತೊಬ್ಬ ಮಾಜಿ ಅಧ್ಯಕ್ಷ ಎಸ್.ಆರ್. ನಾಗರಾಜು ಮಾತನಾಡಿ, ‘ಪಕ್ಷದಲ್ಲಿರುವ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರನ್ನು ಆನಂದಸ್ವಾಮಿ ಕಡೆಗಣಿಸಿದ್ದಾರೆ. ಎಲ್ಲರೊಂದಿಗೆ ಸಮನ್ವಯ ಸಾಧಿಸಿಕೊಂಡು ಪಕ್ಷವನ್ನು ಸರಿಯಾದ ದಿಕ್ಕಿನಲ್ಲಿ ಸಂಘಟಿಸುವಲ್ಲಿ ಸೋತಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದರು.

‘ಮಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈಗಿನಿಂದಲೇ ಪಕ್ಷವನ್ನು ಅಣಿಗೊಳಿಸದೆ ಆನಂದಸ್ವಾಮಿ ಅವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಪಕ್ಷ ಸಂಘಟನೆಗಾಗಿ ರಚಿಸಿರುವ ಕೋರ್ ಕಮಿಟಿಯಲ್ಲಿರುವ ಹಿರಿಯರನ್ನು ಕಡೆಗಣಿಸಿದ್ದಾರೆ. ಇದರಿಂದಾಗಿ ಕಾರ್ಯಕರ್ತರು ಬೇರೆ ಪಕ್ಷದ ಕಡೆಗೆ ಮುಖ ಮಾಡುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ಎಸ್‌ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖರ್, ‘ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಪ್ರಬಲ ವಿರೋಧ ಪಕ್ಷವಾಗಿ ಹೋರಾಟ ರೂಪಿಸುವಲ್ಲಿ ಆನಂದಸ್ವಾಮಿ ಸೋತಿದ್ದಾರೆ. ಜಿಲ್ಲೆಯಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದರೂ ಯಾವುದರ ಬಗ್ಗೆಯೂ ಚಕಾರ ಎತ್ತಿಲ್ಲ. ಹೀಗಾದರೆ ಪಕ್ಷ ಹೇಗೆ ಬೆಳೆಯುತ್ತದೆ. ಹಾಗಾಗಿ, ಅವರನ್ನು ಬದಲಿಸಿ ಬೇರೆಯವರನ್ನು ನೇಮಿಸಬೇಕು’ ಎಂದರು.

ರೈತ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಕಾಶ್, ನಗರ ಘಟಕದ ಅಧ್ಯಕ್ಷ ದರ್ಶನ್, ಕಾರ್ಯದರ್ಶಿ ಸಂಜಯ್ ಜೈನ್, ಪ್ರಮುಖರಾದ ಶಿವಮಾದು, ಮೈತ್ರಿ ಗೌಡ, ಸಾನ್ವಿ, ದೇವಿಕ, ರಾಮಾಂಜನೇಯ, ಸೀನಪ್ಪ, ರಮೇಶ್ ಹಾಗೂ ಇತರರು ಇದ್ದರು.

ಕಾಂಗ್ರೆಸ್‌ಗೆ ಹೋಗಿ ಶಾಸಕರಾಗಿರುವ ಸಿ.ಪಿ. ಯೋಗೇಶ್ವರ್ ಬೆಂಬಲಿಗರಾಗಿರುವ ಆನಂದಸ್ವಾಮಿ ತಮ್ಮ ನಾಯಕರೊಂದಿಗೆ ಪಕ್ಷ ತೊರೆಯಬೇಕಿತ್ತು. ಆದರೆ ಇಲ್ಲೇ ಉಳಿದುಕೊಂಡು ಯೋಗೇಶ್ವರ್ ಬೆಂಬಲಿಸುತ್ತಾ ಪಕ್ಷಕ್ಕೆ ವಂಚಿಸುತ್ತಿದ್ದಾರೆ
– ಜಗನ್ನಾಥ್ ಬಿಜೆಪಿ ಮುಖಂಡ

‘ಪಕ್ಷದ ಚಟುವಟಿಕೆಗೆ ಕೈ ಜೋಡಿಸದವರ ಆಲಾಪ’

‘ನನ್ನ ವಿರುದ್ದ ಸುದ್ದಿಗೋಷ್ಠಿ ನಡೆಸಿರುವ ಗುಂಪು ನಾನು ಎರಡನೇ ಸಲ ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾದಾಗಿನಿಂದಲೂ ನನ್ನನ್ನು ಆ ಹುದ್ದೆಯಿಂದ ಕೆಳಕ್ಕಿಳಿಸಲು ತಂತ್ರ ಹೆಣೆಯುತ್ತಲೇ ಇದೆ. ಗುಂಪಿನಲ್ಲಿರುವವರು ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಿ ನನಗೆ ಸಾಥ್ ಕೊಟ್ಟಿಲ್ಲ. ಪಕ್ಷ ಸಂಘಟನೆಗೆ ಬೂತ್ ಕಮಿಟಿ ರಚನೆ ಪ್ರಧಾನಿ ಮೋದಿ ಅವರ ಮನ್‌ಕಿ ಬಾತ್ ಆಲಿಸುವ ಕಾರ್ಯಕ್ರಮ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಸೇರಿದಂತೆ ಪಕ್ಷದ ಯಾವ ಕೆಲಸವನ್ನೂ ಇವರು ಮಾಡಿಲ್ಲ. ನಾನು ಪಕ್ಷದ ಕಟ್ಟಾ ಕಾರ್ಯಕರ್ತ. ಯಾರಿಗೂ ತಲೆಬಾಗದೆ ನನ್ನ ಸಾಮರ್ಥ್ಯ ಮೀರಿ ಪಕ್ಷದ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ಯಾರು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಬೇಕಾದವರು ಗಮನಿಸುತ್ತಿದ್ದಾರೆ. ಸ್ವಹಿತಾಸಕ್ತಿಯ ಸುಳ್ಳು ಆರೋಪಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ತಮ್ಮ ರಾಜೀನಾಮೆಗೆ ಆಗ್ರಹಿಸಿ ಪಕ್ಷದ ಕೆಲ ಮುಖಂಡರು ಸುದ್ದಿಗೋಷ್ಠಿ ನಡೆಸಿರುವ ಕುರಿತು ಆನಂದಸ್ವಾಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.