ADVERTISEMENT

‘ಲಕ್ಕಿ’ ಎಂಬ ಬಾಂಬ್ ಪತ್ತೆದಾರಿ ಶ್ವಾನಕ್ಕೆ ಭಾವಪೂರ್ಣ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 3:14 IST
Last Updated 7 ಡಿಸೆಂಬರ್ 2025, 3:14 IST
<div class="paragraphs"><p>ಬಾಂಬ್ ಪತ್ತೆ ಶ್ವಾನ ‘ಲಕ್ಕಿ’</p></div>

ಬಾಂಬ್ ಪತ್ತೆ ಶ್ವಾನ ‘ಲಕ್ಕಿ’

   

ರಾಮನಗರ: ಬಾಂಬ್‌ ಸೇರಿದಂತೆ ಆತಂಕಕಾರಿ ವಸ್ತುಗಳ ಪತ್ತೆ,‌ ಭಯೋತ್ಪಾದಕರ ಹೆಜ್ಜೆಗಳ ಜಾಡಿನ ಸುಳಿವು, ಗಣ್ಯಾತಿಗಣ್ಯರ ಭೇಟಿ ಸಂದರ್ಭದಲ್ಲಿ ಭದ್ರತಾ ಪರಿಶೀಲನೆಯ ‘ಬಾಂಬ್ ಪತ್ತೆದಾರಿ’ ಶ್ವಾನ ‘ಲಕ್ಕಿ’ಗೆ ಜಿಲ್ಲಾ ಪೊಲೀಸ್ ವತಿಯಿಂದ ಭಾವಪೂರ್ಣ ಬೀಳ್ಕೊಡುಗೆ ನೀಡಲಾಯಿತು.

ಚನ್ನಪಟ್ಟಣದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಅವರು ವಯೋನಿವೃತ್ತಿ ಹೊಂದಿದ ಲಕ್ಕಿಗೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿ ಬೀಳ್ಕೊಟ್ಟರು. ಲಕ್ಕಿಯ ಲಾಲನೆ, ಪೋಷಣೆ ಜೊತೆಗೆ ತರಬೇತಿ ನೀಡಿ ಕರ್ತವ್ಯಕ್ಕೆ ಅಣಿಗೊಳಿಸಿದ ಹ್ಯಾಂಡ್ಲರ್‌ಗಳಾದ ಶ್ರೀನಿವಾಸ್ ಎಲ್. ಮತ್ತು ಉಮಾಶಂಕರ್ ಬಿ.ಎನ್ ಅವರಿಗೂ ಸನ್ಮಾನಿಸಿದರು.

ADVERTISEMENT

2016ರ ನ. 26ರಂದು ಜನಿಸಿದ ಜರ್ಮನ್ ಶೆಫರ್ಡ್ ತಳಿಯ ಲಕ್ಕಿ 2017ರಲ್ಲಿ ಪೊಲೀಸ್ ಇಲಾಖೆಯನ್ನು ಸೇರಿತು. ಬಾಂಬ್ ಪತ್ತೆ ವಿಭಾಗದಲ್ಲಿ 9 ವರ್ಷಗಳ ಸೇವಾವಧಿಯಲ್ಲಿ 485 ಪ್ರಕರಣಗಳಲ್ಲಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ ಹೆಗ್ಗಳಿಕೆ ಲಕ್ಕಿಯದ್ದು.

2017ರಿಂದ ಇಲ್ಲಿಯವರೆಗೆ ಜಿಲ್ಲೆಗೆ ರಾಜ್ಯಪಾಲರು, ಮುಖ್ಯಮಂತ್ರಿ ಸೇರಿದಂತೆ ಗಣ್ಯಾತಿಗಣ್ಯರು ಭೇಟಿ ನೀಡಿದಾಗ, ಎಎಸ್‌ಸಿ ತಂಡದೊಂದಿಗೆ ಲಕ್ಕಿ ಬಾಂಬ್ ಪತ್ತೆ ಕಾರ್ಯವನ್ನು ನಿರ್ವಹಿಸಿದೆ. ರಾಷ್ಟ್ರಪತಿ, ಪ್ರಧಾನಿ, ಮಾಜಿ ಪ್ರಧಾನಿ, ಜಿ–20 ಶೃಂಗಸಭೆ, ದೇಶ–ವಿದೇಶಗಳ ಗಣ್ಯರ ಕಾರ್ಯಕ್ರಮ, ಸ್ವಾತಂತ್ರ್ಯ ದಿನಾಚರಣೆ, ರಾಜ್ಯೋತ್ಸವದಂತಹ ದೊಡ್ಡ ಕಾರ್ಯಕ್ರಮಗಳಲ್ಲಿ ಲಕ್ಕಿ ತನ್ನ ಜವಾಬ್ದಾರಿ ಮೆರೆದಿದೆ.

ಐಪಿಎಲ್ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ, ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ, ಹುಸಿ ಬಾಂಬ್ ಕರೆಯ ಆತಂಕ ಬಂದಾಗಲೆಲ್ಲಾ ರೈಲು ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತಾ ತಪಾಸಣೆ ನಡೆಸಿ ವಿದ್ವಂಸಕ ಕೃತ್ಯಗಳ ಆತಂಕ ದೂರ ಮಾಡುವಲ್ಲಿ ಲಕ್ಕಿ ಯಶಸ್ವಿಯಾಗಿದೆ.

2019 ಮತ್ತು 2023ನೇ ವರ್ಷ ಇಲಾಖೆ ವತಿಯಿಂದ ನಡೆದಿದ್ದ ಕರ್ತವ್ಯಕೂಟದ ಸ್ಪರ್ಧೆಯಲ್ಲಿ ಲಕ್ಕಿ ಬಹುಮಾನ ಪಡೆದಿದೆ. ಜಿಲ್ಲೆ, ಹೊರಜಿಲ್ಲೆ, ಹೊರರಾಜ್ಯಗಳಲ್ಲೂ ತನ್ನ ಕರ್ತವ್ಯಪರತೆಗೆ ಹೆಸರಾಗಿದ್ದ ಲಕ್ಕಿ, ತಾನು ಕರ್ತವ್ಯ ನಿರ್ವಹಿಸಿದ ಕಡೆಯಲೆಲ್ಲಾ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ನಿವೃತ್ತಿಯಾಗಿರುವ ಲಕ್ಕಿಯನ್ನು ಷರತ್ತಿನ ಮೇರೆಗೆ ಉಮಾಶಂಕರ್ ಅವರ ವಶಕ್ಕೆ ನೀಡಲಾಗಿದ್ದು, ಅವರೇ ಮುಂದೆ ಲಕ್ಕಿಯ ಪಾಲನೆ–ಪೋಷಣೆ ಮಾಡಲಿದ್ದಾರೆ.

ಉಗ್ರನ ಮನೆ ತಪಾಸಣೆಗೆ ನೆರವು

ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) 2018ರಲ್ಲಿ ರಾಮನಗರದ ಮನೆಯೊಂದರಲ್ಲಿ ವಾಸವಾಗಿದ್ದ ಉಗ್ರಗಾಮಿ ಅಬ್ದುಲ್ ರೆಹಮಾನ್ ಎಂಬಾತನನ್ನು ಬಂಧಿಸಿತ್ತು. ಈ ಬಂಧನ ಕಾರ್ಯಾಚರಣೆಯ ಭಾಗವಾಗಿದ್ದ ಲಕ್ಕಿ, ಉಗ್ರನ ಮನೆ ಹಾಗೂ ಸುತ್ತಮುತ್ತ ಅನುಮಾನಾಸ್ಪದ ವಸ್ತುಗಳನ್ನು ಪತ್ತೆಹಚ್ಚಿ ಎನ್‌ಐಎ ಅಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಿತ್ತು. ಕನಕಪುರ ತಾಲ್ಲೂಕಿನ ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಡಬಾಂಬ್‌ಗಳ ಪತ್ತೆ ಕಾರ್ಯದಲ್ಲೂ ಲಕ್ಕಿ ಪ್ರಮುಖ ಪಾತ್ರ ವಹಿಸಿತ್ತು ಎಂದು ಪೊಲೀಸರು ನೆನೆಯುತ್ತಾರೆ.

ರಾಕೆಟ್ ಲಾಂಚರ್ ಪತ್ತೆ ಹಚ್ಚಿತ್ತು!

ಕನಕಪುರ ತಾಲ್ಲೂಕಿನ ಕಾವೇರಿ ನದಿ ದಡದ ಮರಳಿನಲ್ಲಿ ಅನುಮಾನಾಸ್ಪದವಾಗಿ ಹುದುಗಿದ್ದ ರಾಕೆಟ್ ಲಾಂಚರ್‌ಗಳು ಪತ್ತೆಯಾಗಿದ್ದವು. ಅರಣ್ಯಕ್ಕೆ ಹೊಂದಿಕೊಂಡಂತಿದ್ದ ಸ್ಥಳದಲ್ಲಿ ಪತ್ತೆಯಾಗಿದ್ದ ಲಾಂಚರ್‌ಗಳು, ನಕ್ಸಲ್ ಚಟುವಟಿಕೆಯ ಶಂಕೆ ಮೂಡಿಸಿತ್ತು. ಆಗಲೂ ಅಖಾಡಕ್ಕಿಳಿದಿದ್ದ ಅನುಭವಿ ಲಕ್ಕಿ, ಮತ್ತಷ್ಟು ರಾಕೆಟ್ ಲಾಂಚರ್‌ಗಳನ್ನು ಪತ್ತೆಹಚ್ಚಿತ್ತು. ಕಡೆಗೆ ಅವು ಭಾರತೀಯ ಸೇನೆಗೆ ಸೇರಿದ್ದು, ತರಬೇತಿ ಸಂದರ್ಭದಲ್ಲಿ ಬಿಟ್ಟು ಹೋಗಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿತ್ತು ಎಂದು ಪೊಲೀಸರು ಲಕ್ಕಿಯ ಕರ್ತವ್ಯಪರತೆಯನ್ನು ಮೆಲುಕು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.