
ರಾಮನಗರ: ಇಲ್ಲಿನ ನಗರಸಭೆ ವತಿಯಿಂದ ಪ್ರತಿ ವರ್ಷ ಆಚರಿಸುವ ‘ಪೌರ ಕಾರ್ಮಿಕರ ದಿನಾಚರಣೆ’ ಕಾರ್ಯಕ್ರಮವು ಈ ಸಲ ವಿಭಿನ್ನವಾಗಿದೆ. ಪ್ರತಿ ಸಲ ಎಂದಿನಂತೆ ಶಾಸಕರು, ನಗರಸಭೆ ಅಧ್ಯಕ್ಷರು, ಇತರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವೇದಿಕೆ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿದ್ದ ಕಾರ್ಯಕ್ರಮಕ್ಕೆ ಈ ಸಲ ಸಾಂಸ್ಕೃತಿಕ ಸ್ಪರ್ಶ ಸಿಕ್ಕಿದೆ.
ಈ ಸಲ ಮಂಗಳವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಸ್ವತಃ ಪೌರ ಕಾರ್ಮಿಕರೇ ‘ಶ್ರೀ ಕೃಷ್ಣ ಸಂಧಾನ’ ಎಂಬ ಸಾಮಾಜಿಕ ನಗೆ ನಾಟಕವನ್ನು ಪ್ರದರ್ಶಿಸಲಿದ್ದಾರೆ. ತಮ್ಮ ವೃತ್ತಿ ಕುರಿತು ನಗರದ ನಾಗರಿಕರಲ್ಲಿ ಅರಿವು ಮೂಡಿಸುವುದಕ್ಕಾಗಿ ‘ಹಚ್ಚೆವು ಸ್ವಚ್ಛತೆಯ ದೀಪ’ ಮತ್ತು ‘ನಿಮ್ಮ ಸೇವೆಯ ಬೆವರ ಹನಿಗಳು’ ಹಾಡುಗಳ ಸಮೂಹ ಗಾಯನದ ಜೊತೆಗೆ ಗುಂಪು ನೃತ್ಯ ಕಾರ್ಯಕ್ರಮಗಳಿರುವುದು ವಿಶೇಷ.
ಜಾನಪದ ಲೋಕದಲ್ಲಿರುವ ಬಯಲು ರಂಗಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಕಾರ್ಮಿಕರ ತಮ್ಮ ಸ್ವಚ್ಛತಾ ಕಾಯಕದ ನಡುವೆಯೇ, ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಾಟಕ ತಾಲೀಮು ಹಾಗೂ ಗಾಯನ ಅಭ್ಯಾಸದಲ್ಲಿ ಕೆಲ ದಿನಗಳಿಂದ ತೊಡಗಿಸಿಕೊಂಡಿದ್ದಾರೆ. ರಂಗಭೂಮಿ ಕಲಾವಿದ ಕಿರಣ್ ನಾಟಕಕ್ಕೆ ಕಾರ್ಮಿಕರನ್ನು ಅಣಿಗೊಳಿಸಿದ್ದಾರೆ. ನೃತ್ಯಗಾರ್ತಿ ಚಿತ್ರಾ ರಾವ್ ನೃತ್ಯ ತರಬೇತಿ ನೀಡಿದ್ದಾರೆ.
‘ಈ ಸಲ ವಿಭಿನ್ನವಾಗಿ ಪೌರ ಕಾರ್ಮಿಕ ದಿನವನ್ನು ಆಚರಿಸುತ್ತಿದ್ದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಘನ ಉಪಸ್ಥಿತಿ ಹಾಗೂ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಮುಖ್ಯ ಭಾಷಣ ಮಾಡಲಿದ್ದಾರೆ’ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಎಸ್. ಗಂಗಾಧರ್, ಜಾನಪದ ಹಾಗೂ ರಂಗಭೂಮಿ ಕಲಾವಿದ ಜನಾರ್ಧನ (ಜೆನ್ನಿ), ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ತಾಲ್ಲೂಕು ಅಧ್ಯಕ್ಷ ವಿ.ಎಚ್. ರಾಜು, ಜಿಬಿಡಿಎ ಅಧ್ಯಕ್ಷ ಜಿ.ಎನ್. ನಟರಾಜ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಬಮೂಲ್ ನಿರ್ದೇಶಕ ಪಿ. ನಾಗರಾಜ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಎಚ್. ಮಂಜು, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್. ಸುರೇಶ್, ನಿವೃತ್ತ ಔಷಧ ನಿಯಂತ್ರಣಾಧಿಕಾರಿ ಎಚ್. ಶ್ರೀನಿವಾಸ್, ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ನಗರಸಭೆಯ ಸ್ವಚ್ಛತಾ ರಾಯಭಾರಿ ಚಿತ್ರಾ ರಾವ್ ಉಪಸ್ಥಿತರಿರಲಿದ್ದಾರೆ’ ಎಂದರು.
ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ಜಿ.ಪಂ. ಸಿಇಒ ಅನ್ಮೋಲ್ ಜೈನ್ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿದ್ದಾರೆ. ಎಡಿಸಿ ಆರ್. ಚಂದ್ರಯ್ಯ, ಯೋಜನಾ ನಿರ್ದೇಶಕ ಜಿ.ಡಿ. ಶೇಖರ್, ಉಪ ವಿಭಾಗಾಧಿಕಾರಿ ಬಿನೋಯ್ ಪಿ.ಕೆ, ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ. ಪ್ರಭಾಕರ್, ಉಪಾಧ್ಯಕ್ಷ ಆರ್. ನಾಗರಾಜು, ಪ್ರಧಾನ ಕಾರ್ಯದರ್ಶಿ ಗುರುನಾಥ್ ಎಂ., ಬೆಂಗಳೂರು ಉಪಾಧ್ಯಕ್ಷ ಆರ್.ಕೆ. ಹರೀಶ್ ಕುಮಾರ್, ಜಿಲ್ಲಾಧ್ಯಕ್ಷ ವಿ. ವೆಂಕಟೇಶ್, ಶಾಖಾಧ್ಯಕ್ಷ ದೇವೇಂದ್ರ ಹಾಗೂ ಪದಾಧಿಕಾರಿಗಳು, ನಗರಸಭೆ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಪೌರಾಯುಕ್ತ ಡಾ. ಜಯಣ್ಣ ಹಾಗೂ ಸದಸ್ಯ ಅಜ್ಮತ್ಉಲ್ಲಾ ಖಾನ್, ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ನಾಗರಾಜು ಹಾಗೂ ಇತರರು ಇದ್ದರು.
ಮಾಲೀಕರಿಗೆ ಇ–ಖಾತೆ ವಿತರಣೆ
ನಗರಸಭೆಯು ಕೈಗೊಂಡಿರುವ ‘ಮನೆ ಮನೆಗೆ ಇ–ಖಾತೆ ಅಭಿಯಾನ’ದ ಭಾಗವಾಗಿ ಸುಮಾರು 100 ಮಂದಿಗೆ ಇ–ಖಾತೆಗಳನ್ನು ವಿತರಿಸಲಾಯಿತು. ಬಳಿಕ ಮಾತನಾಡಿದ ಕೆ. ಶೇಷಾದ್ರಿ ‘ಅಭಿಯಾನದ ಪ್ರಯುಕ್ತ 24ನೇ ಬಾರಿಗೆ ನಗರಸಭೆಯಲ್ಲಿ ಆಸ್ತಿ ಮಾಲೀಕರಿಗೆ ಇ– ಖಾತೆಗಳನ್ನು ವಿತರಿಸಲಾಗಿದೆ. ಇತ್ತೀಚೆಗೆ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸಹ ನಿಯೋಜಿಸಿದ್ದರಿಂದ ಅಭಿಯಾನದಲ್ಲಿ ವ್ಯತ್ಯಾಸವಾಗಿತ್ತು. ಸಮೀಕ್ಷೆ ಸಂದರ್ಭದಲ್ಲಿ ಖಾತೆ ಕೆಲಸಗಳು ಮಂದಗತಿಯಲ್ಲಿ ಸಾಗಿತ್ತು. ಇನ್ನು ಮುಂದೆ ಎಂದಿನಂತೆ ಅಭಿಯಾನ ಜರುಗಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.