ADVERTISEMENT

ರಾಮನಗರ | ಮಕ್ಕಳಿಂದ ಶಾಲೆ ಶುಚಿ: ಸಹ ಶಿಕ್ಷಕಿ ಅಮಾನತು

ಅಮಾನತಿಗೆ ಶಿಕ್ಷಕರು ಸೇರಿದಂತೆ ಪರಿಷತ್ ಸದಸ್ಯ ಪುಟ್ಟಣ್ಣ ಖಂಡನೆ; 17ಕ್ಕೆ ಜಿ.ಪಂ. ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 4:11 IST
Last Updated 12 ಜೂನ್ 2025, 4:11 IST
<div class="paragraphs"><p>ಅಮಾನತು</p></div>

ಅಮಾನತು

   

ರಾಮನಗರ: ನಗರದ ತುರುಪಲಾಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ಇತ್ತೀಚೆಗೆ ಭೇಟಿ ನೀಡಿದ್ದಾಗ ಕೆಲ ವಿದ್ಯಾರ್ಥಿಗಳು ಸ್ವಚ್ಛತೆ ಕೆಲಸದಲ್ಲಿ ನಿರತರಾಗಿದ್ದ ಹಿನ್ನೆಲೆಯಲ್ಲಿ, ಶಾಲೆಯ ಸಹ ಶಿಕ್ಷಕಿ ಗಂಗಾಂಭಿಕ ಕೆ.ಆರ್ ಅವರನ್ನು ಕರ್ತವ್ಯ ನಿರ್ಲಕ್ಷ್ಯತೆ ಮತ್ತು ಕರ್ತವ್ಯ ಲೋಪದ ಆಧಾರದ ಮೇಲೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಅಮಾನತು ಮಾಡಿದ್ದಾರೆ. ಇದಕ್ಕೆ ಶಿಕ್ಷಕರ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ.

ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಸಹ ಅಮಾನತು ಖಂಡಿಸಿದ್ದು, ಕೂಡಲೇ ಆದೇಶ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಜಿ.ಪಂ. ಸಿಇಒ ಅವರಿಗೂ ಪತ್ರ ಬರೆದಿರುವ ಅವರು, ಅಮಾನತು ವಿರೋಧಿಸಿ ಜೂನ್ 17ರಂದು ಜಿ.ಪಂ. ಕಚೇರಿ ಎದುರು ಧರಣಿ ಮಾಡುವುದಾಗಿ ತಿಳಿಸಿದ್ದಾರೆ.

ADVERTISEMENT

ಹಾಲು ಚೆಲ್ಲಿತ್ತು: ಜೂನ್ 6ರಂದು ಬೆಳಿಗ್ಗೆ 10.45ರ ಸುಮಾರಿಗೆ ಶಾಲೆಯ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಹಾಲು ವಿತರಿಸಲಾಗಿತ್ತು. ಈ ವೇಳೆ, ಸ್ವಲ್ಪ ಹಾಲು ಚೆಲ್ಲಿತ್ತು. ಅದನ್ನು ಸ್ವಚ್ಛಗೊಳಿಸಲು ಶಿಕ್ಷಕಿಯೇ ಮುಂದಾದರು. ಅದನ್ನು ಗಮನಿಸಿದ ವಿದ್ಯಾರ್ಥಿಗಳು ತಾವೇ ಶುಚಿಗೊಳಿಸತೊಡಗಿದರು. ಅದೇ ಸಂದರ್ಭದಲ್ಲಿ ಶಾಲೆಗೆ ಜಿ.ಪಂ. ಸಿಇಒ ಅನಿರೀಕ್ಷಿತವಾಗಿ ಭೇಟಿ ನೀಡಿದರು ಎಂದು ಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಚೆಲ್ಲದ ಹಾಲನ್ನು ಮಕ್ಕಳು ಸ್ವಚ್ಛಗೊಳಿಸುತ್ತಿರುವುದನ್ನು ಕಂಡು ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದ ಸಿಇಒ, ಶಿಕ್ಷಕಿಯನ್ನು ಅಮಾನತು ಮಾಡುವಂತೆ ಡಿಡಿಪಿಐಗೆ ಸೂಚಿಸಿದ್ದರು. ಘಟನೆ ಕುರಿತು ಶಿಕ್ಷಕಿಗೆ ನೋಟಿಸ್ ನೀಡದ, ಯಾವುದೇ ವಿವರಣೆ ಪಡೆಯದ ಡಿಡಿಪಿಐ ಸಂಜೆಯ ಹೊತ್ತಿಗೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅಮಾನತು ಪ್ರಶ್ನಿಸಿ ಶಿಕ್ಷಕಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿದ್ದು, ಬುಧವಾರ ವಿಚಾರಣೆ ನಡೆಸಿದ ಮಂಡಳಿಯು ಅಮಾನತಿಗೆ ತಡೆಯಾಜ್ಞೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಉಪ ನಿರ್ದೇಶಕ ವಿ.ಸಿ. ಬಸವರಾಜೇಗೌಡ ಅವರಿಗೆ ‘ಪ್ರಜಾವಾಣಿ’ ಕರೆ ಮಾಡಿದಾಗ, ಕರೆ ಸ್ವೀಕರಿಸಲಿಲ್ಲ. ಜಿ.ಪಂ. ಸಿಇಒ ಅನ್ಮೋಲ್ ಜೈನ್ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ, ಕರೆ ಕನೆಕ್ಟ್ ಆಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.