ADVERTISEMENT

ಮಾಗಡಿ: ನಾರಸಂದ್ರ ಗ್ರಾಮಸಭೆಗೆ ಅಧಿಕಾರಿಗಳ ಗೈರು– ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 2:46 IST
Last Updated 17 ಜುಲೈ 2025, 2:46 IST
ಮಾಗಡಿ ತಾಲ್ಲೂಕಿನ ನಾರಸಂದ್ರ ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಭಾಗವಹಿಸಿದ್ದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸದಸ್ಯರು
ಮಾಗಡಿ ತಾಲ್ಲೂಕಿನ ನಾರಸಂದ್ರ ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಭಾಗವಹಿಸಿದ್ದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸದಸ್ಯರು   

ಮಾಗಡಿ: ನಾರಸಂದ್ರ ಗ್ರಾಮ ಪಂಚಾಯಿತಿ ಸಭೆಗೆ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ನಾರಸಂದ್ರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಭೆಗೆ ಅಧಿಕಾರಿಗಳೇ ಗೈರಾದರೆ ಸೌಲಭ್ಯ ಪಡೆಯುವುದು ಹೇಗೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಪಿಡಿಒ ಶಿವಕುಮಾರ್ ಮಾತನಾಡಿ, ಗ್ರಾಮಸಭೆಗೆ ಸಾಮಾನ್ಯ ಸಭೆಯಲ್ಲಿ ದಿನಾಂಕ ನಿಗದಿಪಡಿಸಿದ್ದು, ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಆಹ್ವಾನ ನೀಡಲಾಗಿತ್ತು. ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ ಉತ್ತರ ಕೇಳಲಾಗುವುದು ಎಂದರು.

ADVERTISEMENT

ಗ್ರಾ.ಪಂ. ವ್ಯಾಪ್ತಿಯ ಹೊಸಪಾಳ್ಯ ಗ್ರಾಮದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ತಾಲ್ಲೂಕು ಆಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಿವೇಶನ ಮತ್ತು ಭೂರಹಿತರು ಅರ್ಜಿ ಸಲ್ಲಿಸಿದರೆ ಪರಿಶೀಲನೆ ನಡೆಸಿ ನಿವೇಶನ ನೀಡಲಾಗುವುದು ಎಂದು ತಿಳಿಸಿದರು.

ಹೊಸಪಾಳ್ಯದಲ್ಲಿ ಐದು ಎಕರೆ ಜಾಗದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ನೀಡುವುದಾಗಿ ಕರಪತ್ರ ಹೊರಡಿಸಲಾಗಿತ್ತು. 1993–94ರಲ್ಲಿ ಎಚ್‌.ಎಂ.ರೇವಣ್ಣ ಶಾಸಕರಾಗಿದ್ದಾಗ 80ಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಆದರೆ, ಈಗ ಅದೇ ಜಾಗಕ್ಕೆ ಹೊಸದಾಗಿ ಅರ್ಜಿ ಕರೆದಿರುವುದಕ್ಕೆ ಫಲಾನುಭವಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.‌

ಗ್ರಾ.ಪಂ.ಸದಸ್ಯ ಸಾಗರ್ ಗೌಡ ಮಾತನಾಡಿ, ಈ ವಿಚಾರವಾಗಿ ಪಂಚಾಯಿತಿಯಲ್ಲಿ ಸರ್ವ ಸದಸ್ಯರ ತುರ್ತು ಸಭೆ ಕರೆದು ಎಷ್ಟು ಹಕ್ಕು ಪತ್ರಗಳನ್ನು ನೀಡಲಾಗಿದೆ. ಉಳಿದ ನಿವೇಶನಗಳೆಷ್ಟು ಎಂಬುದನ್ನು ಚರ್ಚಿಸಿ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸಿ ಮಾಹಿತಿ ನೀಡಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು.

ಗ್ರಾಮ ಸಭೆಯಲ್ಲಿ ರೇಖಾ ನಂದೀಶ್, ಭಾಗ್ಯಮ್ಮ, ಶಿವಪ್ರಸಾದ್, ಗಾಯಿತ್ರಿ, ರಾಜಮ್ಮ, ರಾಮಕೃಷ್ಣಯ್ಯ, ಹನುಮಂತಯ್ಯ, ಶೋಭ, ಗಂಗರಂಗಯ್ಯ, ವೆಂಕಟೇಶ್, ಗೀತಾ, ಸಿದ್ದಗಂಗಮ್ಮ, ಸ್ವಾಮಿ, ಚೆನ್ನಮ್ಮ, ಶಿವಕುಮಾರ್, ರಂಗಸ್ವಾಮಯ್ಯ, ನಂದೀಶ, ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.