
ಮಾಗಡಿ: ಸರ್ಕಾರ ರೈತರ ವಿರೋಧ ಕಟ್ಟಿಕೊಂಡು, ಗೋಲಿಬಾರ್ ಮಾಡಿ ನೀರು ನೀಡಲು ಸಾಧ್ಯವಿಲ್ಲ. ನಮ್ಮ ಪಾಲಿನ ಹೇಮಾವತಿ ನೀರು ಪಡೆಯಲು ಕಾನೂನಾತ್ಮಕ ಹೋರಾಟ ಒಂದೇ ದಾರಿ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದ್ದಾರೆ.
ಮಾಗಡಿ ತಾಲ್ಲೂಕಿಗೆ ಸಿಗಬೇಕಾದ ಹೇಮಾವತಿ ನೀರಿನ ಪಾಲು ಪಡೆಯಲು ಇನ್ನೂ ಹತ್ತು ದಿನದಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗರೊಂದಿಗೆ ಮಾತನಾಡಿದ ಅವರು, ಈ ವಿಷಯದಲ್ಲಿ ಸರ್ಕಾರದ ಜೊತೆ ನ್ಯಾಯಾಲಯ ಕೂಡ ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಮಾಡಿದರು.
‘ರಾಜಕೀಯ ತೆವಲಿಗಾಗಿ ತುಮಕೂರು ಜನಪ್ರತಿನಿಧಿಗಳು ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ನಿಲ್ಲಿಸುವಂತೆ ಹೋರಾಟ ಮಾಡುತ್ತಿದ್ದಾರೆ. ನಾವು ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ಹಿಂದೆ ಗೊಟ್ಟಿಗೆರೆಗೆ ಎಷ್ಟು ಪ್ರಮಾಣದಲ್ಲಿ ನೀರು ಬಂದಿದೆ ಎಂಬ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ನೀರು ಹಂಚಿಕೆಯಲ್ಲಿ ವಿಷಯದಲ್ಲಿ ಕೆಳ ಭಾಗದ ಮಾಗಡಿ ಮತ್ತು ಕುಣಿಗಲ್ ತಾಲ್ಲೂಕಿಗೆ ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.
ಕಾವೇರಿ ನದಿ ನೀರು ಹಂಚಿಕೆ ಮತ್ತು ನಿರ್ವಹಣೆಗೆ ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರದ (ಸಿಡಬ್ಲ್ಯೂಸಿ) ಮಾದರಿಯಲ್ಲಿಯೇ ಹೇಮಾವತಿ ನದಿ ನೀರು ಹಂಚಿಕೆಗೂ ಐಎಎಸ್ ಅಧಿಕಾರಿಗಳ ಸಮಿತಿ ರಚನೆ ಮಾಡಬೇಕು. ಹೇಮಾವತಿ ಜಲಾಶಯ ಸಂಪೂರ್ಣ ನಿರ್ವಹಣೆಯನ್ನು ಆ ಸಮಿತಿಗೆ ಒಪ್ಪಿಸಬೇಕು ಎಂಬ ಷರತ್ತು ಮುಂದಿಟ್ಟರು.
‘ಈ ಸಮಿತಿಯು ತುಮಕೂರು, ಗುಬ್ಬಿ, ಮಾಗಡಿ, ಕುಣಿಗಲ್‌ಗೆ ಎಷ್ಟು ನೀರು ನೀಡಬೇಕು ಎಂಬ ತೀರ್ಮಾನ ಮಾಡಬೇಕು. ಆಗ ಮಾತ್ರ ನಮಗೆ ತಲುಪಬೇಕಾದ ನೀರು ಸಿಗುತ್ತದೆ. ಇಲ್ಲದಿದ್ದರೆ ಮೇಲ್ಭಾಗದ ತುಮಕೂರಿನವರು ಎರಡು ಬಾರಿ ನೀರು ಪಡೆದು ನಮ್ಮ ಪಾಲಿನ ನೀರು ಕೊಡದೆ ವಂಚಿಸುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.