ADVERTISEMENT

ಭದ್ರಾವತಿ: ಹಳೇನಗರ ಸರ್ಕಾರಿ ಶಾಲೆಗೆ ಪಿಎಂಶ್ರೀ ಗರಿ

​ಪ್ರಜಾವಾಣಿ ವಾರ್ತೆ
Published 29 ಮೇ 2025, 6:55 IST
Last Updated 29 ಮೇ 2025, 6:55 IST
ಪಿ.ಎಂ.ಶ್ರೀ ಯೋಜನೆಯಡಿ ಆಧುನಿಕವಾಗಿ ನವೀಕರಣಗೊಂಡಿರುವ ಭದ್ರಾವತಿ ಹಳೇ ನಗರದ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಪಿ.ಎಂ.ಶ್ರೀ ಯೋಜನೆಯಡಿ ಆಧುನಿಕವಾಗಿ ನವೀಕರಣಗೊಂಡಿರುವ ಭದ್ರಾವತಿ ಹಳೇ ನಗರದ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ   

ಭದ್ರಾವತಿ: ಇಲ್ಲಿನ ಹಳೇ ನಗರದ ಸಂಚಿಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪಕ್ಕದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ಬಾರಿ ಕೇಂದ್ರ ಸರ್ಕಾರದ ಪಿ.ಎಂ.ಶ್ರೀ ಯೋಜನೆಗೆ ಆಯ್ಕೆಯಾಗಿದೆ.

ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಧ್ಯೇಯದೊಂದಿಗೆ ಕೇಂದ್ರ ಸರ್ಕಾರ ಪ್ರತಿ ವರ್ಷ ತಾಲ್ಲೂಕಿನಲ್ಲಿ ಒಂದೊಂದು ಶಾಲೆಯನ್ನು (ಪ್ರಧಾನಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ ) ಪಿ.ಎಂ.ಶ್ರೀ ಯೋಜನೆಯಡಿ ಅಭಿವೃದ್ಧಿ ಪಡಿಸುತ್ತಿದೆ.

ಶಾಲೆಯಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ₹ 17.70 ಲಕ್ಷ ಅನುದಾನ ಬಂದಿದ್ದು, ₹ 3 ಲಕ್ಷ ಕಟ್ಟಡ ದುರಸ್ತಿ ಕಾರ್ಯಕ್ಕೆ, ₹ 5.38 ಲಕ್ಷ ಇತರೆ ದುರಸ್ತಿ ಕಾರ್ಯಗಳಿಗೆ ಕೊಡಲಾಗಿದೆ.

ADVERTISEMENT

ಶಾಲೆಯನ್ನು ಆಧುನೀಕರಣಗೊಳಿಸಿ, ವಿದ್ಯಾರ್ಥಿಗಳಿಗೆ ಬೇಕಾದ ಪೀಠೋಪಕರಣ, ಮೂಲ ಸೌಕರ್ಯ, ಉದ್ಯಾನವನ, ಪ್ರಯೋಗಾಲಯ, ತರಗತಿಯ ಕೊಠಡಿಗಳಿಗೆ ಮತ್ತು ಶಾಲಾ ಕಾಂಪೌಂಡ್ ಗೋಡೆಗಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಆಕರ್ಷಕ ಚಿತ್ರಗಳ ಬಣ್ಣ ಮತ್ತು ಆಟಿಕೆಗಳೊಂದಿಗೆ ಆಧುನಿಕವಾಗಿ ಸಜ್ಜುಗೊಂಡಿದೆ. ಇದು ಮಾದರಿ ಶಾಲೆ. ಇಲ್ಲಿ ಕಳೆದ ವರ್ಷದಿಂದ ಎಲ್.ಕೆ.ಜಿ.ಯಿಂದ 8ನೇ ತರಗತಿವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಶಿಕ್ಷಣ ನೀಡಲಾಗುತ್ತಿದೆ.

ಶಾಲೆಯ ಕೊಠಡಿಗಳಲ್ಲಿ ನೂತನವಾಗಿ ಅಳವಡಿಸಿರುವ ಟೈಲ್ಸ್ ಕಲಿಕೆಗೆ ಪ್ರೋತ್ಸಾಹ ನೀಡುವ ಗೋಡೆಗಳ ಮೇಲಿನ ಪೇಂಟಿಂಗ್ ಶಾಲೆಯ ಶಿಕ್ಷಕಿಯೊಂದಿಗಿನ ದೃಶ್ಯ

ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಪಿ.ಎಂ.ಶ್ರೀ ಯೋಜನೆ ಸಹಕಾರಿ ಆಗಲಿದೆ. ಶಾಲೆಯಲ್ಲಿ ಸಮರ್ಪಕ ಮೂಲ ಸೌಕರ್ಯ ಒದಗಿಸಲು ಹಾಗೂ ಅಭಿವೃದ್ಧಿಪಡಿಸುವ ಪೂರಕ ಯೋಜನೆಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರದ ಅನುದಾನ ನೆರವಾಗಿದೆ ಎಂದು ಮುಖ್ಯ ಶಿಕ್ಷಕ ಮೊಹಿದ್ದೀನ್ ಸಾಬ್ ‘ಪ್ರಜಾವಾಣಿ’ಗೆ ತಿಳಿಸಿದರು.

ನೂತನವಾಗಿ ನಿರ್ಮಿಸಿರುವ ಡೆಸ್ಕ್ ಗಳೊಂದಿಗೆ ಮಕ್ಕಳು

ಶಾಲೆಗಳಲ್ಲಿ ಶಿಕ್ಷಕರ ಕೊರತೆ

ಭದ್ರಾವತಿ: ತಾಲ್ಲೂಕಿನಾದ್ಯಂತ ಶುಕ್ರವಾರ (ಮೇ 30ರಂದು) ಶಾಲೆಗಳು ಪುನರಾರಂಭಗೊಳ್ಳಲು ಸಕಲ ಸಿದ್ಧತೆ ಭರದಿಂದ ಸಾಗುತ್ತಿದ್ದರೆ ಇನ್ನೊಂದಡೆ ಶಿಕ್ಷಕರ ಕೊರತೆ ಕಾಣುತ್ತಿದೆ. ತಾಲ್ಲೂಕಿನಲ್ಲಿ 263 ಪ್ರಾಥಮಿಕ ಶಾಲೆಗಳಿಗೆ 991 ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. 133 ಶಿಕ್ಷಕರ ಕೊರತೆ ಇದೆ. 92 ಸಹ ಶಿಕ್ಷಕರು 33 ಮುಖ್ಯೋಪಾಧ್ಯಾಯರು 6 ಜನ ದೈಹಿಕ ಶಿಕ್ಷಕರ ಅಗತ್ಯವಿದೆ. ಹಲವು ಸರ್ಕಾರಿ ಶಾಲೆಗಳಲ್ಲಿ ಒಬ್ಬರು ಅಥವಾ ಇಬ್ಬರು ಕಾಯಂ ಶಿಕ್ಷಕರಿದ್ದು ಅತಿಥಿ ಶಿಕ್ಷಕರನ್ನು ಹೆಚ್ಚಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ತಾಲ್ಲೂಕಿಗೆ ಈ ಬಾರಿ ಹೆಚ್ಚಿನ ಸಂಖ್ಯೆಯ ಅತಿಥಿ ಶಿಕ್ಷಕರನ್ನು ನೀಡಲು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇರುವ ಅತಿಥಿ ಶಿಕ್ಷಕರನ್ನು ಅವಶ್ಯಕತೆ ಇರುವ ಶಾಲೆಗಳಿಗೆ ನಿಯೋಜಿಸಲಾಗಿದೆ ಎಂದು ಬಿಇಒ ಎ.ಕೆ. ನಾಗೇಂದ್ರಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.