
ಭದ್ರಾವತಿ: ‘ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ, ಹಿಂದುಳಿದ ವರ್ಗದವರ ಹಾಗೂ ಬಡವರ ವಿರೋಧಿಯಾಗಿದೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ ಸಿದ್ರಾಮಣ್ಣ ಆರೋಪಿಸಿದರು.
ಬಿಜೆಪಿ ನಗರ, ಗ್ರಾಮಾಂತರ ಹಾಗೂ ಹೊಳೆಹೊನ್ನೂರು ಮಂಡಲಗಳ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
‘ರಾಜ್ಯ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿರುವ ಭರವಸೆಗಳನ್ನು ಮೊದಲು ಈಡೇರಿಸಲು ಮುಂದಾಗಬೇಕು. ರೈತರು, ಬಡವರು, ಹಿಂದುಳಿದವರಿಗೆ ನೆರವಾಗುವುದಾಗಿ ಅಧಿಕಾರಕ್ಕೆ ಬಂದು ಇದೀಗ ಪಂಚ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ನಾಟಕೀಯವಾಗಿ ವರ್ತಿಸುತ್ತಿರುವುದು ಸರಿಯಲ್ಲ. ರೈತರ ಸಂಕಷ್ಟಗಳಿಗೆ ಸ್ಪಂದಿಸದೆ ಹಣ ಇಲ್ಲ ಎಂದು ಕೈಚೆಲ್ಲುವ ಮೂಲಕ ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಮೇಲೆ ದೂರುವುದು ಸರಿಯಲ್ಲ’ ಎಂದರು.
‘ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೆ ತಂದಿರುವ ಹಲವಾರು ಯೋಜನೆಗಳನ್ನು ರಾಜ್ಯ ಸರ್ಕಾರ ಜೊತೆ ಸೇರಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಆದರೆ, ಇದನ್ನು ಸಹ ಮಾಡದೆ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ. ರೈತರಿಗೆ ನೀಡಬೇಕಾಗಿರುವ ಹಣ ಪಕ್ಕದ ತೆಲಂಗಾಣ ರಾಜ್ಯದ ಚುನಾವಣೆ ಬಳಸಲಾಗಿದೆ’ ಎಂದು ಆರೋಪಿಸಿದರು.
‘ಚುನಾವಣೆ ಸಂದರ್ಭದಲ್ಲಿ ಹಿಂದುಳಿದವರಿಗೆ ಅಧಿಕಾರಕ್ಕೆ ಬಂದಲ್ಲಿ ಕಾಂತರಾಜ ವರದಿ ಅನುಷ್ಠಾನ ಗೊಳಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ರಾಜ್ಯ ಸರ್ಕಾರ ಈ ವರದಿಯನ್ನು ಸ್ವೀಕರಿಸಿ ಅನುಷ್ಠಾನಗೊಳಿಸದೆ ಹಿಂದುಳಿದವರಿಗೆ ಅನ್ಯಾಯ ಎಸಗಿದೆ’ ಎಂದು ದೂರಿದರು.
‘ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಒಂದೆಡೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ಸೂಕ್ತ ಸಮಯಕ್ಕೆ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಲಭಿಸುತ್ತಿಲ್ಲ. ಬೆಳೆ ಹಾನಿಯಾದ ರೈತರಿಗೆ ಸರಿಯಾಗಿ ಪರಿಹಾರ ಲಭಿಸುತ್ತಿಲ್ಲ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವವರು, ಅಧಿಕಾರಿಗಳು ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಹೊಂದಿಲ್ಲ’ ಎಂದು ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್. ತೀರ್ಥಯ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ನೇತೃತ್ವದಲ್ಲಿ ಉಪ ತಹಶೀಲ್ದಾರ್ ಮಂಜಾನಾಯ್ಕ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
‘ಮುಖ್ಯ ಬೆಳೆಗಳಾದ ಭತ್ತ, ಜೋಳ, ರಾಗಿಗೆ ಕನಿಷ್ಠ ಬೆಂಬಲ ಬೆಲೆ ಸಮರ್ಪಕವಾಗಿ ಸಿಗುತ್ತಿಲ್ಲ. ವಿಮಾ ಕಂಪನಿಗಳಿಗೆ ತ್ವರಿತವಾಗಿ ಮತ್ತು ಪಾರದರ್ಶಕವಾಗಿ ಪರಿಹಾರ ವಿತರಿಸಲು ಆದೇಶ ನೀಡಬೇಕು. ಸರ್ಕಾರದ ಕನಿಷ್ಠ ಬೆಂಬಲ ಬೆಲೆಯಡಿ ರೈತರಿಂದ ಧಾನ್ಯಗಳನ್ನು ಖರೀದಿಸಲು ಸೂಕ್ತ ವ್ಯವಸ್ಥೆ ಕಲ್ಪಿಸುವ ಜೊತೆಗೆ ಖರೀದಿ ಕೇಂದ್ರಗಳನ್ನು ಹೆಚ್ಚಿಸಬೇಕು. ಕಾಡಾನೆ ಮತ್ತು ವನ್ಯಜೀವಿಗಳ ಹಾವಳಿಯಿಂದ ರೈತರನ್ನು ರಕ್ಷಿಸಬೇಕು’ ಎಂದು ಮನವಿಯಲ್ಲಿ ಕೋರಲಾಗಿದೆ.
ಹೊಳೆಹೊನ್ನೂರು ಮಂಡಲ ಅಧ್ಯಕ್ಷ ಮಲ್ಲೇಶ್ ಮಲ್ಲಾಪುರ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಣೇಶ್ ಬಿಳಿಕಿ, ಯುವ ಮುಖಂಡ ಮಂಗೋಟೆ ರುದ್ರೇಶ್, ಪ್ರಮುಖರಾದ ಅಣ್ಣಪ್ಪ, ರಾಜಶೇಖರ ಉಪ್ಪಾರ, ಚನ್ನೇಶ್, ಬಾರಂದೂರು ಪ್ರಸನ್ನಕುಮಾರ್, ಎಂ.ಎಸ್.ಸುರೇಶಪ್ಪ, ಶಕುಂತಲಾ ಪ್ರದೀಪ್, ಉಷಾ ವೀರಶೇಖರ್, ಸುಲೋಚನಾ ಪ್ರಕಾಶ್, ಸರಸ್ವತಿ, ಕವಿತಾ ರಾವ್, ಶ್ರೀನಿವಾಸ್, ಶಂಕರಮೂರ್ತಿ, ನಾಗೇಶ್, ಸತೀಶ್, ಕಾಂತರಾಜ್, ಮಂಜುನಾಥ್, ರೇಖಾ ಬೋಸ್ಲೆ, ಪ್ರೇಮಾ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.